ಸಮಸ್ಯೆಯಾಗದಂತೆ ಲೋಕ ಸೀಟು ಹಂಚಿಕೆ

ಹಾಸನ: ಕಾಂಗ್ರೆಸ್-ಜೆಡಿಎಸ್ ಎರಡರಲ್ಲಿಯೂ ಪ್ರಬುದ್ಧ ನಾಯಕರಿದ್ದಾರೆ. ನಾವು ದೇಶದಲ್ಲಿನ ವಿದ್ಯಮಾನ ಗಮನದಲ್ಲಿಟ್ಟುಕೊಂಡಿದ್ದೇವೆ. ಸಮಸ್ಯೆ ಇಲ್ಲದಂತೆ ಲೋಕಸಭಾ ಚುನಾವಣೆಗೆ ಸೀಟುಗಳನ್ನು ಹಂಚಿಕೆ ಮಾಡಿಕೊಳ್ಳುತ್ತೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದ್ದಾರೆ.

ಸದ್ಯ ಹಗ್ಗಜಗ್ಗಾಟದ ಸ್ಥಿತಿ ಇದೆ ಅಷ್ಟೆ. ನಮಗೆ ಎಷ್ಟು ಸ್ಥಾನ ನೀಡಬೇಕು ಎನ್ನುವುದನ್ನು ರಾಹುಲ್ ಗಾಂಧಿ ತೀರ್ವನಿಸುತ್ತಾರೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡ ನಂತರ ಎರಡೂ ಪಕ್ಷಗಳ ನಾಯಕರು ಒಟ್ಟಾಗಿ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತೇವೆ. ಮೇಲಿನ ನಾಯಕರ ರೀತಿ 2ನೇ ಹಂತದ ಕಾರ್ಯಕರ್ತರಲ್ಲಿಯೂ ಹೊಂದಾಣಿಕೆ ಬರಬೇಕು. ಬಿಜೆಪಿ ಬಲ ಕುಗ್ಗಿಸುವುದೇ ನಮ್ಮ ಉದ್ದೇಶವಾಗಿರಬೇಕು. ಈ ಬಗ್ಗೆ ಸಿದ್ದರಾಮಯ್ಯ ಅವರೊಂದಿಗೂ ರ್ಚಚಿಸಿದ್ದೇನೆ ಎಂದರು.

ನಾನು ತೃತೀಯ ರಂಗದ ಪ್ರಧಾನಿ ಅಭ್ಯರ್ಥಿ ಎಂದು ಯಾರೂ ಹೇಳಿಲ್ಲ. ಸದ್ಯ ನನ್ನ ಗಮನವೆಲ್ಲ ಕರ್ನಾಟಕದ ಮೇಲೆಯೇ ಇರುತ್ತದೆ. ಕೇರಳದಲ್ಲಿ ಎಡಪಕ್ಷಗಳು ನಮಗೆ ಕೆಲವು ಸೀಟು ನೀಡಬಹುದು. ಅದರ ಹೊರತಾಗಿ ಬೇರೆಡೆ ನಾವು ಪ್ರಬಲವಾಗಿಲ್ಲ.

| ಎಚ್.ಡಿದೇವೇಗೌಡ ಮಾಜಿ ಪ್ರಧಾನಿ

ಮೋದಿ ವಿರುದ್ಧ ವಾಗ್ದಾಳಿ

ದೇಶದ ಜನರು ಆಡಳಿತದ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದು ಗೊತ್ತಾಗಿರು ವುದರಿಂದಲೇ ಪ್ರಧಾನಿ ಮೋದಿ ಇಷ್ಟು ವರ್ಷಗಳ ಕಾಲ ಮರೆತಿದ್ದ ರೈತರು, ಬಡವರಿಗಾಗಿ ಮುಂದಿನ ಬಜೆಟ್​ನಲ್ಲಿ ಯೋಜನೆಗಳನ್ನು ಪ್ರಕಟಿಸಲು ಮುಂದಾಗಿದ್ದಾರೆ ಎಂದು ದೇವೇಗೌಡರು ಟೀಕಿಸಿದರು. ದೆಹಲಿಯ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಮೋದಿ ಅವರು ತಮ್ಮ ಸ್ಥಾನಕ್ಕೆ ಉಚಿತವಲ್ಲದ ಪದಗಳನ್ನು ಪ್ರಯೋಗಿಸಿದ್ದಾರೆ ಎಂದು ಹರಿಹಾಯ್ದರು.

ಇನ್ನೂ ಸೀಟು ಖಾಲಿ ಆಗಿಲ್ಲವಲ್ಲ?

ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದಿಂದ ಸ್ಪರ್ಧಿಸುವುದನ್ನು ಖಚಿತಪಡಿಸದ ದೇವೇಗೌಡರು, ಈಗಲೇ ಅಭ್ಯರ್ಥಿ ಘೊಷಣೆ ಮಾಡಲು ಇನ್ನೂ ಆ ಸೀಟು ಖಾಲಿ ಆಗಿಲ್ಲವಲ್ಲ ಎಂದು ಹೇಳಿ ಕುತೂಹಲ ಮೂಡಿಸಿದರು. ಈ ಬಾರಿ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಬಗ್ಗೆ ನಿರ್ಧಾರ ಕೈಗೊಂಡಿಲ್ಲ.

ಆರೋಗ್ಯ ಸ್ಥಿತಿ ಬಗ್ಗೆ ರಸ್ತೆಯಲ್ಲಿ ನಿಂತು ಮಾತನಾಡಲು ಆಗುವುದಿಲ್ಲ. ಹಾಸನ ಅಭ್ಯರ್ಥಿ ಘೊಷಣೆಗೆ ಕಾರ್ಯಕರ್ತರ ದೊಡ್ಡ ಸಭೆ ಆಯೋಜಿಸುತ್ತೇವೆ. ಅದಕ್ಕೂ ಮೊದಲು ಪಕ್ಷದ ಮುಖಂಡರು, ಶಾಸಕರು ಕುಳಿತು ರ್ಚಚಿಸುತ್ತೇವೆ. ಪ್ರಜ್ವಲ್​ರನ್ನು ಅಭ್ಯರ್ಥಿಯಾಗಿ ಘೊಷಿಸುವ ಬಗ್ಗೆ ಚರ್ಚೆ ನಡೆದಿಲ್ಲ, ಕಾರ್ಯಕರ್ತರ ಸಭೆಯಲ್ಲಿ ಪ್ರಜ್ವಲ್ ವೇದಿಕೆ ಮೇಲೆ ಕುಳಿತಿರಲಿಲ್ಲ ಎನ್ನುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟರು.