ಲೋಕಸಭೆ ಚುನಾವಣೆಗೆ ಮೈತ್ರಿ ಸಂದೇಶ ಸಾರಲು ಕಾಂಗ್ರೆಸ್-ಜೆಡಿಎಸ್ ಒಗ್ಗೂಡಿವೆ

ಬೆಂಗಳೂರು: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಮತ್ತು ರಾಜ್ಯದಲ್ಲಿ ಉಪ ಚುನಾವಣೆ ಗೆದ್ದು ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ರಾಷ್ಟ್ರಕ್ಕೆ ಮೈತ್ರಿ ಸಂದೇಶ ನೀಡುವ ಸಲುವಾಗಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಒಟ್ಟುಗೂಡಿವೆ ಎಂದು ಎರಡೂ ಪಕ್ಷಗಳ ವರಿಷ್ಠ ನಾಯಕರು ಇಂದು ಒಟ್ಟಾಗಿ ಘೋಷಿಸಿದರು.

ರಾಜ್ಯದಲ್ಲಿ ಎದುರಾಗಿರುವ ಐದು ಕ್ಷೇತ್ರಗಳ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ, ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್​, ಸಚಿವ ಡಿ.ಕೆ ಶಿವಕುಮಾರ್​, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಒಂದೇ ವೇದಿಕೆಯಲ್ಲಿ ಆಸೀನರಾಗಿದ್ದರು.

” ಬಿಜೆಪಿಯನ್ನು ಮತ್ತು ಅದರ ಕೋಮುವಾದವನ್ನು ತಡೆಯುವುದು ಮೈತ್ರಿಯ ಉದ್ದೇಶವಾಗಿರುವುದಾಗಿಯೂ, ಉಪ ಚುನಾವಣೆಯಲ್ಲಿ ಗೆದ್ದು ದೇಶಕ್ಕೆ ಜಾತ್ಯತೀತತೆಯ ಸಂದೇಶ ಸಾರುವುದಾಗಿಯೂ, ಕಾರ್ಯಕರ್ತರನ್ನು ಒಟ್ಟುಗೂಡಿಸಲು ಪ್ರಯತ್ನಿಸುವುದಾಗಿಯೂ,” ನಾಯಕರು ತಿಳಿಸಿದರು.

ಯಾರ್ಯಾರು ಏನೇನು ಹೇಳಿದರು? ಇಲ್ಲಿದೆ ನೋಡಿ.

ದೇವೇಗೌಡ: ಹಿರಿತನಕ್ಕೆ ತಕ್ಕಂತೆ ನಾನೇ ಮೈತ್ರಿಗೆ ಮುಂದಡಿ ಇಟ್ಟಿದ್ದೇನೆ.

ಜಾತಿವಾದಿ ಶಕ್ತಿಗಳನ್ನು ತಡೆಯಲು ಇದು ಸದವಕಾಶ. ಅದಕ್ಕಾಗಿಯೇ ನಾವು ಒಂದಾಗಿದ್ದೇವೆ. ನಮ್ಮ ನಡುವಿನ ವ್ಯತ್ಯಾಸಗಳನ್ನು ಮರೆತಿದ್ದೇವೆ. ಈ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬುದು ನಮ್ಮ ತೀರ್ಮಾನ. ಜಾತಿವಾದಿ ಶಕ್ತಿಯನ್ನು ದೂರವಿಡುವುದೇ ನಮ್ಮ ಮುಖ್ಯ ಉದ್ದೇಶ. ಹಿರಿತನಕ್ಕೆ ತಕ್ಕಂತೆ ನಾನೇ ಮೈತ್ರಿಗೆ ಮುಂದೆ ಹೆಜ್ಜೆ ಇಡುತ್ತಿದ್ದೇನೆ. ನಾವೆಲ್ಲರೂ ಒಂದೇ ವೇದಿಕೆಯಡಿ ಬಂದಿರುವುದರಿಂದ ಕಾರ್ಯಕರ್ತರ ಗೊಂದಲವೂ ದೂರಾಗುತ್ತದೆ. ರಾಷ್ಟ್ರದ ದೃಷ್ಟಿಯಿಂದ ನಾವೆಲ್ಲರೂ ನಮ್ಮ ನಡುವಿನ ವ್ಯತ್ಯಾಸ ಮರೆಯಬೇಕು. ನಮ್ಮ ತಪ್ಪುಗಳನ್ನು ಕಾರ್ಯಕರ್ತರು ಕ್ಷಮಿಸಬೇಕು. ಎರಡೂ ಪಕ್ಷಗಳ ಕಾರ್ಯಕರ್ತರು ಸಹಕರಿಸಬೇಕು.

ಸಿದ್ದರಾಮಯ್ಯ: ಐದೂ ಕ್ಷೇತ್ರಗಳನ್ನೂ ಗೆಲ್ಲುವುದು ಶತಃಸಿದ್ಧ.

ಒಟ್ಟಾಗಿ ಚುನಾವಣೆಯನ್ನು ಎದುರಿಸುತ್ತೇವೆ. ಕಾಂಗ್ರೆಸ್​ ಸ್ಪರ್ಧಿಸುವ ಕಡೆ ಜೆಡಿಎಸ್, ಜೆಡಿಎಸ್​ನವರು ಸ್ಪರ್ಧಿಸುವ ಕಡೆ ಕಾಂಗ್ರೆಸ್​ ಬೆಂಬಲಿಸಲಿದೆ. ಎರಡೂ ಪಕ್ಷಗಳ ಕಾರ್ಯಕರ್ತರೂ ಚುನಾವಣೆಯಲ್ಲಿ ದುಡಿಯಲಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಮೈತ್ರಿ ಮಾಡಿಕೊಂಡಿದ್ದೇವೆ. ಮೈತ್ರಿಗೆ ಕರ್ನಾಟಕವೇ ತಳಪಾಯ. ಜಾತ್ಯತೀತ ಮತಗಳು ವಿಭಜನೆಯಾಗಿ ಬಿಜೆಪಿಗೆ ನೆರವಾಗುವ ಸನ್ನಿವೇಶವನ್ನು ತಡೆಯಲಿದ್ದೇವೆ. ಸರ್ಕಾರ ಉರುಳಿಸುವ ಬಿಜೆಪಿ ಪ್ರಯತ್ನವನ್ನು ಈ ಚುನಾವಣೆ ಮೂಲಕ ಹಿಮ್ಮೆಟ್ಟಿಸುತ್ತೇವೆ. ಮೈತ್ರಿ ಆಗಿರುವುದರಿಂದ ಐದು ಕ್ಷೇತ್ರವನ್ನು ನೂರಕ್ಕೆ ನೂರು ನಾವೇ ಗೆಲ್ಲುತ್ತೇವೆ. ಕರ್ನಾಟದಲ್ಲಿ ಮುಂದೆಯೂ ಮೈತ್ರಿ ಆಗಬೇಕಿದೆ. ರಾಜ್ಯದ 28 ಕ್ಷೇತ್ರಗಳನ್ನೂ ನಾವು ಗೆಲ್ಲಲಿದ್ದೇವೆ. ನಾನು ಮಂಡ್ಯ, ಶಿವಮೊಗ್ಗ, ಬಳ್ಳಾರಿ, ಜಮಖಂಡಿಗೂ ಹೋಗುತ್ತಿದ್ದೇನೆ. ರಾಮನಗರದಲ್ಲಿಯೂ ಅಗತ್ಯವಿದ್ದರೆ ಹೋಗುತ್ತೇನೆ. ಜೆಡಿಎಸ್​ ನಾಯಕರೂ ಪ್ರಚಾರಕ್ಕೆ ಬರಲಿದ್ದಾರೆ. ಅಗತ್ಯವಿದ್ದ ಕಡೆ ಜಂಟಿಯಾಗಿ ಪ್ರಚಾರ ಮಾಡುತ್ತೇವೆ. ಶಿವಮೊಗ್ಗದಲ್ಲಿ 30ರಂದು ಸಮಾವೇಶವಿದೆ. ಅದರಲ್ಲಿ ಭಾಗವಹಿಸುತ್ತೇನೆ. ಬಿಜೆಪಿ ನಮ್ಮ ಸೈದ್ಧಾಂತಿಕ ವಿರೋಧಿಯಷ್ಟೇ. ಯಡಿಯೂರಪ್ಪ, ಮೋದಿಗೆ ಬಗ್ಗೆ ನನಗೆ ವೈಯಕ್ತಿಕ ದ್ವೇಷವಿಲ್ಲ

ಎಚ್​.ಡಿ ಕುಮಾರಸ್ವಾಮಿ: ಕರ್ನಾಟಕದ ಮೂಲಕ ದೇಶದ ರಾಜಕೀಯ ಬದಲಿಸುತ್ತೇವೆ.

ದೇಶ ಆರ್ಥಿಕವಾಗಿ ಹಿನ್ನಡೆ ಅನುಭವಿಸಿದೆ. ಮೋದಿಯಿಂದ ಯಾವುದೇ ಅನುಕೂಲವಾಗಿಲ್ಲ. ಕೊಡಗಿಗೆ ನೆರೆ ಪರಿಹಾರ ನೀಡಿ ಎಂದು ಎರಡು ಬಾರಿ ಮನವಿ ಮಾಡಿದರೂ, ಹಣ ನೀಡಲಿಲ್ಲ. ಅವರಿಂದ ಏನೂ ಅನುಕೂಲವಾಗಿಲ್ಲ. ಕರ್ನಾಟಕದಿಂದ ದೇಶದ ರಾಜಕೀಯ ಹಿಂದೆ ಬದಲಾಗಿದೆ. ಈ ಚುನಾವಣೆಯಲ್ಲಿ ಐದು ಕ್ಷೇತ್ರ ಗೆದ್ದು ರಾಷ್ಟ್ರಕ್ಕೆ ಮೈತ್ರಿ ಸಂದೇಶ ನೀಡುತ್ತೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಗೆಲ್ಲುತ್ತೇವೆ. ಇದಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುತ್ತೇವೆ.

ಪರಮೇಶ್ವರ್​: ಸೈದ್ಧಾಂತಿಕವಾಗಿ ಕಾಂಗ್ರೆಸ್-ಜೆಡಿಎಸ್​ ಒಂದೇ

ದೇಶದ ಲ್ಲಿ ಪ್ರತಿಯೊಬ್ಬರು ಸಮಾನತೆಯಿಂದ ಬಾಳಬೇಕು. ಅದಕ್ಕಾಗಿಯೇ ನಮ್ಮ ರಾಜಕಾರಣ. ಆದರೆ, ಬಿಜೆಪಿಯಿಂದ ಸಮಾನತೆ ಸಿಗುತ್ತಿಲ್ಲ. ಕಾಂಗ್ರೆಸ್​, ಜೆಡಿಎಸ್​, ಸೈದ್ಧಾಂತಿಕವಾಗಿ ಒಂದೇ. ರಾಜ್ಯದ, ದೇಶದ ಹಿತದೃಷ್ಟಿಯಿಂದ ನಾವು ಒಟ್ಟಾಗಿದ್ದೇವೆ. ಬಿಜೆಪಿಗೆ ಅಧಿಕಾರ ಸಿಗಬಾರದೆಂಬುದೇ ನಮ್ಮ ಉದ್ದೇಶ. ಚುನಾವಣೆ ಘೋಷಣೆಯಾದಾಗ ಬೇಸರವಾಗಿತ್ತು. ಅಲ್ಪ ಅವಧಿಯ ಚುನಾವಣೆಯನ್ನು ಏಕೆ ಹೇರಿದರು ಎಂದು ಅನಿಸಿತ್ತು. ಆದರೆ, ಇದು ನಮಗೆ ಸದವಕಾಶ. ಈ ಮೂಲಕ ಬಿಜಪಿಗೆ ಸಂದೇಶ ಕೊಡಲು ಸಿದ್ಧರಾಗಿದ್ದೇವೆ.

ಪ್ರಶ್ನೆಗಳಿಗೆ ಪ್ರತಿಕ್ರಿಯೆಗಳು

1. ರಾಜ್ಯದಲ್ಲಿ ಬಿಎಸ್​ಪಿ ಮೈತ್ರಿ ಮುರಿದುಕೊಂಡಿದ್ದು ಏಕೆ?

ದೇವೇಗೌಡ: ಬಿಎಸ್​ಪಿ ಮೈತ್ರಿ ಆಗಿದ್ದದ್ದು ಜೆಡಿಎಸ್​ ಜತೆಗೆ. ಕಾಂಗ್ರೆಸ್​ನೊಂದಿಗಲ್ಲ. ಬಿಜೆಪಿ ಸಂಪುಟದಿಂದ ಹೊರಹೋಗಿದ್ದಕ್ಕೆ ರಾಷ್ಟ್ರೀಯ ಕಾರಣಗಳಿವೆ. ಅದು ಇಲ್ಲಿ ಚರ್ಚೆಯ ವಿಷಯವಲ್ಲ.

2. ಡಿಕೆಶಿ ಲಿಂಗಾಯತರ ಕ್ಷಮೆ ಕೋರಿದ ಬಗ್ಗೆ ಏನು ಹೇಳುವಿರಿ?

ಸಿದ್ದರಾಮಯ್ಯ: ಡಿಕೆಶಿ ಅವರ ಹೇಳಿಕೆ ಬಗ್ಗೆ ಪ್ರತ್ಯೇಕವಾಗಿ ಪ್ರತಿಕ್ರಿಯಿಸುತ್ತೇನೆ. ಅದಕ್ಕೆ ಉತ್ತರ ನೀಡಲು ಇದು ವೇದಿಕೆಯಲ್ಲ.

3. ಜೆಡಿಎಸ್​ ಪಕ್ಷ ಬಿಜೆಪಿಯ ಬಿ ಟೀಂ ಆಗಿತ್ತು ಎಂಬ ಹೇಳಿಕೆ ಬಗ್ಗೆ ಈಗ ಏನು ಹೇಳುತ್ತೀರಿ?

ದೇವೇಗೌಡ: ಹಿಂದಿನದ್ದನ್ನು ಕೆದಕಿ ನಮ್ಮ ಮನಸ್ಸು ಕೆಡಿಸಲು ನೀವೆಷ್ಟೇ ಪ್ರಯತ್ನಿಸದರೂ, ನಮ್ಮ ಮನಸ್ಸು ಕೆಡುವುದಿಲ್ಲ.

4. ಮೈತ್ರಿ ಒಲ್ಲದ ಕಾರ್ಯಕರ್ತರಿಗೆ ಏನು ಹೇಳುತ್ತೀರಿ?

ದೇವೇಗೌಡ: ಕಾರ್ಯಕರ್ತರಿಗೆ ಕೆಲವೆಡೆ ಅಸಮಾಧಾನವಿದೆ. ಅದನ್ನು ಬಗೆಹರಿಸುತ್ತೇವೆ. ಅಷ್ಟಕ್ಕೂ ಕೇಳದಿದ್ದರೆ ಅವರ ಕೈ ಹಿಡಿದು ಬೇಡುತ್ತೇವೆ.