ಸಂಪುಟ ವಿಸ್ತರಣೆ ಆದ ದಿನವೇ ಸರ್ಕಾರ ಪತನ: ಈಶ್ವರಪ್ಪ

ಹುಬ್ಬಳ್ಳಿ: ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಆದ ದಿನವೇ ಸರ್ಕಾರದ ಪತನವಾಗಲಿದೆ. ಬಿಜೆಪಿ ಯಾವುದೇ ಆಪರೇಷನ್​ ಕಮಲ ಮಾಡುವುದಿಲ್ಲ. ಅವರೇ ಕಚ್ಚಾಡಿ ಸರ್ಕಾರ ಬೀಳಿಸಲಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್​. ಈಶ್ವರಪ್ಪ ಅವರು ಸಮ್ಮಿಶ್ರ ಸರ್ಕಾರದ ರಾಜಕೀಯ ಭವಿಷ್ಯ ನುಡಿದಿದ್ದಾರೆ.

ರಾಜ್ಯದಲ್ಲಿ ಸರ್ಕಾರ ಇದೆಯಾ ಎಂಬ ಅನುಮಾನವಿದೆ. ಮಂತ್ರಿಸ್ಥಾನಕ್ಕೆ ಆಸೆ ಪಟ್ಟು ಕಾಂಗ್ರೆಸ್​ ಪಕ್ಷ ಜೆಡಿಎಸ್​ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ. ಜೆಡಿಎಸ್​ನವರು ಸಿದ್ದರಾಮಯ್ಯರನ್ನು ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋಲಿಸಿದ್ದಾರೆ. ಈಗ ಅವರು ಯಾವ ಮುಖ ಇಟ್ಟುಕೊಂಡು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ? ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಆಸೆಪಟ್ಟು ಎಲ್ಲ ಸಿದ್ಧಾಂತ ಮರೆತು ಹೊಂದಾಣಿಕೆ ಮಾಡಿಕೊಂಡಿದೆ ಎಂದು ಈಶ್ವರಪ್ಪ ಕಿಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ರಾಜ್ಯದಲ್ಲಿ ಭೀಕರ ಬರಗಾಲವಿದೆ. 106 ತಾಲೂಕುಗಳಲ್ಲಿ ಬರಗಾಲದ ಪರಿಸ್ಥಿತಿ ಇದೆ. ಆದರೂ ರಾಜ್ಯ ಸರ್ಕಾರ ಬರ ಪರಿಸ್ಥಿತಿ ನಿಭಾಯಿಸಲು ಏನೂ ಮಾಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಬರ ಪರಿಸ್ಥಿತಿ ನಿಭಾಯಿಸುವ ಕುರಿತು ಯಾವುದೇ ಸಭೆ ನಡೆಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಐದು ತಂಡಗಳನ್ನು ರಚಿಸಿದ್ದು, ರಾಜ್ಯದ ಪ್ರವಾಸ ಮಾಡಿ ಬರ ಪರಿಸ್ಥಿತಿ ಕುರಿತು ಸರ್ಕಾರದ ಗಮನಕ್ಕೆ ತರುತ್ತೇವೆ. ಡಿಸೆಂಬರ್ ೩,೪ ಮತ್ತು ೫ರಂದು ಈ ರಾಜ್ಯ ಪ್ರವಾಸ ನಡೆಯಲಿದೆ ಎಂದು ಈಶ್ವರಪ್ಪ ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಕೆಲ ಬದಲಾವಣೆ ಮಾಡಬೇಕು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾರಿಗೆ ಯಾವ ಕ್ಷೇತ್ರಕ್ಕೆ ಉಸ್ತುವಾರಿ ನೀಡಿದರೆ ಲಾಭವಾಗುತ್ತದೆ ಎಂಬ ಕುರಿತು ಚರ್ಚೆ ನಡೆದಿದೆ. ಅದರ ಬಗ್ಗೆ ವಿಚಾರ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಈಶ್ವರಪ್ಪ ತಿಳಿಸಿದರು.