ಬಿಎಸ್ಪಿ-ಕಾಂಗ್ರೆಸ್ ಸಚಿವರ ಜಗಳ್ಬಂದಿ

ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕಿಂತ ಸಚಿವರಲ್ಲೇನೆ ಹೊಂದಾಣಿಕೆ ಇಲ್ಲ ಎನ್ನುವುದು ಚಾಮರಾಜನಗರ ಜಿಲ್ಲೆಯ ಇಬ್ಬರು ಸಚಿವರ ವಾಕ್ಸಮರ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ‘ಕಾಂಗ್ರೆಸ್ ಬಗ್ಗೆ ಹಗುರ ಹೇಳಿಕೆ ನೀಡಿದರೆ ಅವರೇ ಸಚಿವ ಸ್ಥಾನದಿಂದ ಕಿತ್ತು ಹೋಗುತ್ತಾರೆ’ ಎಂದು ಚಾಮರಾಜನಗರದಲ್ಲಿ ಸಚಿವ ಸಿ.ಪುಟ್ಟರಂಗಶೆಟ್ಟಿ ಗುಡುಗಿದ್ದರೆ, ‘ಕಾಂಗ್ರೆಸ್ ತಾನು ದೊಡ್ಡಣ್ಣ ಎನ್ನುವ ಅಹಂನಿಂದ ಕೆಳಗಿಳಿಯಬೇಕು. ಅವರ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂತ ಎಲ್ಲರಿಗೂ ಗೊತ್ತು’ ಎಂದು ಶಿಕ್ಷಣ ಸಚಿವ ಎನ್.ಮಹೇಶ್ ಕಾರವಾರದಲ್ಲಿ ತಿರುಗೇಟು ನೀಡಿದ್ದಾರೆ. ಸಚಿವದ್ವಯರ ಏನೇನು ಹೇಳಿದರು ಎಂಬ ಮಾಹಿತಿ ಇಲ್ಲಿದೆ.

ಪುಟ್ಟರಂಗಶೆಟ್ಟಿ ಪೌರುಷ

  • ಕಾಂಗ್ರೆಸ್ ಪಕ್ಷವನ್ನು ಕಿತ್ತು ಹಾಕಲು ಎನ್.ಮಹೇಶ್ ಯಾವ ಮಹಾ ಲೀಡರ್?
  • ಎನ್.ಮಹೇಶ್ ಹೆಚ್ಚು ಕಾಲ ರಾಜಕೀಯ ಮಾಡಿದ್ದಕ್ಕೆ ಸಚಿವರಾಗಿಲ್ಲ. ಸಮ್ಮಿಶ್ರ ಸರ್ಕಾರ ಫಲದಿಂದ ಸಚಿವರಾಗಿದ್ದಾರೆ. ಕಾಂಗ್ರೆಸ್ ಮನಸ್ಸು ಮಾಡಿದರೆ ಅವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಬಹುದು.
  • ಕಾಂಗ್ರೆಸ್ ಒಂದು ಹೆಮ್ಮರವಾಗಿದ್ದು ಅದರ ವಿರುದ್ಧವೇ ತಿರುಗಿಬಿದ್ದರೆ ಅವರು ಶಸ್ತ್ರತ್ಯಾಗ ಮಾಡಬೇಕಾಗುತ್ತದೆ.
  • ಯಾರನ್ನೋ ಮೆಚ್ಚಿಸಲು ಕಾಂಗ್ರೆಸ್ ಬಗ್ಗೆ ಮಾತನಾಡಿ ಯಾವುದೋ ಕನಸು ಕಾಣುತ್ತಿದ್ದಾರೆ.

 

ಎನ್.ಮಹೇಶ್ ಮಾತುಗಳು

  • ನನ್ನನ್ನು ಸಚಿವ ಮಾಡಿದ್ದು ಬೆಹೆನ್ಜೀ (ಮಾಯಾವತಿ), ದೇವೇಗೌಡರು, ಕುಮಾರಸ್ವಾಮಿ. ಕಾಂಗ್ರೆಸ್​ನವರಲ್ಲ.
  • ಛತ್ತೀಸ್​ಗಡದಲ್ಲಿ ಬಿಎಸ್​ಪಿ ಕಾಂಗ್ರೆಸ್​ನೊಂದಿಗೆ ಕೈ ಜೋಡಿಸಲು ಅವಕಾಶವಿತ್ತು. ಆದರೆ, ಬಿಎಸ್​ಪಿ ಹಾಗೆ ಮಾಡಿಲ್ಲ. ಕಾಂಗ್ರೆಸ್ ಅಹಂ ಬಿಟ್ಟು ಕೆಳಗಿಳಿಯಬೇಕು. ಅವರ ಪರಿಸ್ಥಿತಿ ಎಲ್ಲಿಗೆ ಬಂದಿದೆಂದು ಎಲ್ಲರಿಗೂ ಗೊತ್ತು
  • ಛತ್ತೀಸ್​ಗಡದ ಕಾಂಗ್ರೆಸ್ ಮತ್ತು ಬಿಜೆಪಿ ಭಿನ್ನಮತಕ್ಕೂ ಕರ್ನಾಟಕಕ್ಕೂ ಸಂಬಂಧವಿಲ್ಲ. ಅದಕ್ಕೆ ಕಾಂಗ್ರೆಸ್​ನ ಪುಟ್ಟರಂಗಶೆಟ್ಟಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅವರಿಂದ ಏನೂ ಮಾಡಲಾಗದು.
  • ನಾನು ಮುಂದಿನ ವರ್ಷದವರೆಗೆ ಸಚಿವನಾಗಿರುತ್ತೇನೋ ಇಲ್ಲವೋ ಗೊತ್ತಿಲ್ಲ. ಶಾಸಕನಂತೂ ಆಗಿರುತ್ತೇನೆ.