ಶುರು ಮತ ಜ್ವರ!

ಬೆಂಗಳೂರು: ವಿಧಾನಸಭೆ ಚುನಾವಣೆ ಬಳಿಕ ತಣ್ಣಗಾಗಿದ್ದ ಕರ್ನಾಟಕದಲ್ಲಿ ಮತ್ತೆ ಮತ ಜ್ವರ ಕಾವೇರಲಾರಂಭಿಸಿದ್ದು, ಲೋಕಸಭೆ ಸಂಗ್ರಾಮಕ್ಕೂ ಮುನ್ನ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಪ್ರತ್ಯೇಕವಾಗಿ ಎದುರಿಸಲು ಆಡಳಿತಾರೂಢ ದೋಸ್ತಿ ಪಕ್ಷಗಳು ನಿರ್ಧರಿಸಿವೆ. ಆ ಮೂಲಕ ಮತ್ತೊಂದು ಸುತ್ತಿನ ರಾಜಕೀಯ ಜಿದ್ದಾಜಿದ್ದಿಗೆ ಕರುನಾಡಿನ ಕದನ ಕಣ ಸಜ್ಜಾದಂತಾಗಿದೆ. ಲೋಕಸಭೆ ಚುನಾವಣೆಗೆ ಜಂಟಿಯಾಗಿ ಹೋಗುವ ನಿಲುವು ಸಡಿಲಿಸದ ಜೆಡಿಎಸ್-ಕಾಂಗ್ರೆಸ್, ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗದಂತೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಸೀಮಿತವಾಗಿ ಪ್ರತ್ಯೇಕ ಹೋರಾಟ ನಡೆಸುವ ಒಮ್ಮತದ ತೀರ್ವನಕ್ಕೆ ಬಂದಿವೆ.

ಕಾಂಗ್ರೆಸ್ ತಯಾರಿ: ಸ್ಥಳೀಯ ಸಂಸ್ಥೆ, ಲೋಕ ಸಭೆ ಚುನಾವಣೆ ಸಿದ್ಧತೆಯಾಗಿ ಎಲ್ಲ ಜಿಲ್ಲೆಗಳಲ್ಲೂ ಸಮಾ ವೇಶ ನಡೆಸಲು ತಯಾರಿ ಮಾಡಿಕೊಳ್ಳುವಂತೆ ಕಾಂಗ್ರೆಸ್ ನಾಯಕರು ಸೂಚನೆ ನೀಡಿದ್ದಾರೆ.

ಆಗಸ್ಟ್ ಒಳಗಾಗಿ ಜಿಲ್ಲಾ ಮಟ್ಟದ ಸಮಾವೇಶ ಮೂಲಕ ಎರಡೂ ಚುನಾವಣೆಗಳಿಗೆ ಮುಕ್ತ ವಾತಾವರಣ ಸೃಷ್ಟಿಸುವ ಆಲೋಚನೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಲೋಕಸಭೆ ಚುನಾವಣೆಗೆ ಪೂರಕವಾಗಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಕರೆಸಲು ನಿರ್ಧರಿಸಿರುವ ಕೆಪಿಸಿಸಿ, ಬೀದರ್​ನಲ್ಲಿ ಸಮಾವೇಶ ನಡೆಸುವ ಮೂಲಕ ಮಹಾಸಂಗ್ರಾಮಕ್ಕೆ ಸಿದ್ಧವಾಗಲು ಸಂದೇಶ ಕಳುಹಿಸಲಿದೆ.

ಕೈಪಡೆಯಲ್ಲಿ ಘರ್ ವಾಪ್ಸಿ

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳುವುದಕ್ಕಾಗಿಯೋ? ಮುನಿಸಿಕೊಂಡೋ ಇಲ್ಲವೆ ಆಮೀಷಕ್ಕಾಗಿಯೂ ಪಕ್ಷಬಿಟ್ಟು ಬೇರೆಡೆ ಹೋದ ಮುಖಂಡರನ್ನು ಪುನಃ ಕರೆತರಲು ಕಾಂಗ್ರೆಸ್​ನಲ್ಲಿ ಯೋಜನೆ ಸಿದ್ಧವಾಗಿದೆ. ಜಿಲ್ಲಾವಾರು ಸಭೆ ನಡೆಸುತ್ತಿರುವ ಕೆಪಿಸಿಸಿ, ಪಕ್ಷಕ್ಕೆ ಯಾರನ್ನು ವಾಪಾಸ್ ಕರೆತಂದರೆ ಸೂಕ್ತ ಎಂಬ ಬಗ್ಗೆ ಜಿಲ್ಲಾ ಹಂತ ಮುಖಂಡರೊಂದಿಗೆ ಚರ್ಚೆ ನಡೆಸಿದ್ದು, ಈ ಪ್ರಕ್ರಿಯೆಗೆ ವೇದಿಕೆ ಸೃಷ್ಟಿಸುವಂತೆ ಗುರಿ ನೀಡಿದೆ.

ಮನೆಮನೆಗೆ ‘ಬಜೆಟ್’ ಹೊತ್ತಿಗೆ

ಮೈತ್ರಿ ಸರ್ಕಾರದ ಬಜೆಟ್ ಹಾಸನ ಮಂಡ್ಯಕ್ಕೆ ಸೀಮಿತವಾಗಿದ್ದು, ಉತ್ತರ ಕರ್ನಾಟಕ ನಿರ್ಲಕ್ಷಿಸಲಾಗಿದೆ ಎಂಬ ದನಿ ದಿನದಿನಕ್ಕೆ ಬಲಗೊಳ್ಳುತ್ತಿರುವ ಕಾರಣ ಜೆಡಿಎಸ್ ಹೊಸ ತಂತ್ರ ಹಣೆದಿದೆ. ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ಪ್ರತಿ ಮನೆಗೆ ಪಕ್ಷದಿಂದ ಹೊತ್ತಿಗೆಯೊಂದನ್ನು ತಲುಪಿಸುವ ಚಿಂತನೆ ನಡೆದಿದೆ. ಸಿದ್ದರಾಮಯ್ಯ ಸರ್ಕಾರ ಮತ್ತು ಕುಮಾರಸ್ವಾಮಿ ಸರ್ಕಾರದ ಬಜೆಟ್​ನಲ್ಲಿ ಕೊಟ್ಟ ಭರವಸೆ ಏನು ಎಂಬ ಸಾರಾಂಶ ಅದರಲ್ಲಿರಲಿದೆ. ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದಿಂದ ಕಣಕ್ಕಿಳಿಯುವ ಅಭ್ಯರ್ಥಿಯು ಪ್ರತಿ ಮನೆಗೂ ಈ ಹೊತ್ತಿಗೆ ತಲುಪಿಸುವ ಜವಾಬ್ದಾರಿ ನೀಡಲಾಗುತ್ತಿದೆ.

ಮೈಕೊಡವಿದ ಬಿಜೆಪಿ, ಜೆಡಿಎಸ್

ಬಿಜೆಪಿ ಕೂಡ ಎರಡೂ ಚುನಾವಣೆಗೆ ಪೂರಕವಾಗಿ ಆ.9ರಿಂದ ಅಧಿಕೃತವಾಗಿ ಬಹಿರಂಗ ತಯಾರಿ ಆರಂಭಿಸುತ್ತಿದೆ. ಪಕ್ಷದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬೀದರ್​ನಿಂದ ಆರಂಭಿಸಿ 13 ಜಿಲ್ಲೆಗಳಲ್ಲಿ ಸಭೆ ನಡೆಸಲಿದ್ದಾರೆ. ಇನ್ನೆರಡು ತಂಡ 15ರೊಳಗೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಲಿದೆ. ಸರ್ಕಾರದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಜೆಡಿಎಸ್ ನಾಯಕರು ಸಹ ಈ ವಾರದಿಂದಲೇ ವರಸೆ ಆರಂಭಿಸಲಿದ್ದಾರೆ. ಈ ಬೆಳವಣಿಗೆಗೆ ಪೂರಕವಾಗಿ ಹಿರಿಯ ನಾಯಕ ಎಚ್. ವಿಶ್ವನಾಥ್ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲಾಗಿದೆ. ಹಾಗೆಯೇ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಆದಿಯಾಗಿರುವ ನಾಯಕರೆನಿಸಿಕೊಂಡವರೆಲ್ಲ ಜಿಲ್ಲಾ ಪ್ರವಾಸ ನಡೆಸಿ ನಿಷ್ಕ್ರಿಯಗೊಂಡ ಘಟಕಗಳ ಪುನರುತ್ಥಾನಗೊಳಿಸುವ ಹೊಣೆ ಹೊರಲಿದ್ದಾರೆ.

ತೆನೆ ಹೊತ್ತ ವಿಶ್ವನಾಥ್

ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಕೈ ಮೇಲಾಗುತ್ತಿದೆ ಎಂಬ ವಾದದ ಬೆನ್ನಲ್ಲೇ ಜೆಡಿಎಸ್​ನ ರಾಜ್ಯಾಧ್ಯಕ್ಷರಾಗಿ 69ರ ಹರೆಯದ ಹಿರಿಯ ರಾಜಕಾರಣಿ, ಶಾಸಕ ಅಡಗೂರು ಹುಚ್ಚೇಗೌಡ ವಿಶ್ವನಾಥ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಕ್ಷದ ಕಚೇರಿಗೆ ಆಗಮಿಸುವ ವಿಶ್ವನಾಥ್, ಕರ್ತವ್ಯ ಆರಂಭಿಸುವರು. 2017ರಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಅವರು, ಕಳೆದ ವಿಧಾನಭೆ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಜೆಡಿಎಸ್ ಲೆಕ್ಕಾಚಾರ

# ಸರ್ಕಾರದಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸದಂತೆ ತಡೆಯುವುದು

# ಸರ್ಕಾರಕ್ಕೆ ಧಕ್ಕೆ ಆಗದಂತೆ ಜೆಡಿಎಸ್ ಅಧ್ಯಕ್ಷರಾಗಿ ಪಕ್ಷ ಬಲಪಡಿಸುವುದು

# ಹಳೇ ಮೈಸೂರು ಭಾಗದಲ್ಲಿ ಕುರುಬ ಜನಾಂಗದ ಓಲೈಕೆ