ಕಾಫಿ ನಾಡಿನಲ್ಲಿ ಸಮಬಲದ ಹೋರಾಟ

ಚಿಕ್ಕಮಗಳೂರು: ಲೋಕಸಭೆ ಚುನಾವಣಾ ಕಣದಲ್ಲಿ ಘರ್ಜಿಸುತ್ತಿರುವ ಬಿಜೆಪಿ ಕಳೆದ ಲೋಕಸಭೆ ಹಾಗೂ ಹಿಂದಿನ ವಿಧಾನಸಭೆ ಚುನಾವಣೆ ಫಲಿತಾಂಶಗಳನ್ನೇ ನಂಬಿಕೊಂಡು ಬೀಗುತ್ತಿದ್ದರೆ, ಮೈತ್ರಿಕೂಟದ ಜೆಡಿಎಸ್-ಕಾಂಗ್ರೆಸ್ ಒಗ್ಗಟ್ಟಿನ ಬಲವನ್ನೇ ನೆಚ್ಚಿಕೊಂಡು ಅಖಾಡಕ್ಕೆ ಇಳಿದಿವೆ.

ಭೌಗೋಳಿಕ ವಿಭಿನ್ನ ಪರಿಸರ ಹೊಂದಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಳೆದ ಎರಡು ಲೋಕಸಭೆ ಚುನಾವಣೆಯಲ್ಲಿ ತಲಾ ಒಂದು ಬಾರಿ ಕಾಂಗ್ರೆಸ್, ಬಿಜೆಪಿ ವಿಜಯ ಸಾಧಿಸಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೃಂಗೇರಿ ಹೊರತುಪಡಿಸಿ ಏಳು ಕ್ಷೇತ್ರಗಳೂ ಬಿಜೆಪಿ ಕೈಯಲ್ಲಿವೆ. ಆದರೆ ಬಿಜೆಪಿಗೆ ದಾರಿ ಸುಲಭವೇನಲ್ಲ. ಏಕೆಂದರೆ ಈಗ ಕಾಂಗ್ರೆಸ್-ಜೆಡಿಎಸ್ ಒಂದಾಗಿದ್ದು, ವಿಧಾನಸಭೆ ಹಾಗೂ ಕಳೆದ ಎರಡು ಲೋಕಸಭೆ ಚುನಾವಣೆಯಲ್ಲಿ ಪಡೆದ ಮತಗಳನ್ನು ತುಲನೆ ಮಾಡಿದರೆ ಬಿಜೆಪಿ ದಾರಿ ಅಷ್ಟು ಸುಗಮವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತದೆ.

ಬಿಜೆಪಿ ಹಾಗೂ ಜೆಡಿಎಸ್-ಕಾಂಗ್ರೆಸ್​ನ ಕಳೆದ ಎರಡು ಲೋಕಸಭೆ ಹಾಗೂ ಹಿಂದಿನ ವಿಧಾನ ಸಭೆ ಚುನಾವಣೆ ಫಲಿತಾಂಶ ಗಮನಿಸಿದಾಗ ಈಗಿನ ಚುನಾವಣೆಯೂ ಸಮಬಲದ ಹೋರಾಟವಾಗಿದೆ. ಘಟ್ಟದ ಕೆಳಗಿನ ನಾಲ್ಕೂ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಇಲ್ಲಿ ಬಿಜೆಪಿ ಸ್ಟ್ರಾಂಗ್ ಇದ್ದರೂ ಕಾಂಗ್ರೆಸ್ ಕಳೆದ ಚುನಾವಣೆಗಳಲ್ಲಿ ಗೆಲುವಿನ ಹತ್ತಿರದ ಮತ ತೆಗೆದುಕೊಂಡಿದೆ. ಕುಂದಾಪುರ ಹೊರತು ಪಡಿಸಿದರೆ ಉಳಿದ ಮೂವರು ಅಭ್ಯರ್ಥಿಗಳು ಪ್ರಯಾಸಪಟ್ಟು ಗೆದ್ದಿದ್ದಾರೆ. ಇದರ ಜತೆ ಇಲ್ಲಿ ಜೆಡಿಎಸ್ ಶಕ್ತಿ ಕ್ಷೀಣವಾಗಿದ್ದರೂ ಇತರೆ ಸಣ್ಣಪುಟ್ಟ ಸಂಘಟನೆಗಳ ಬಲ ಮೈತ್ರಿಕೂಟಕ್ಕೆ ಘಟ್ಟದ ಕೆಳಗೆ ದೊರೆಯುವ ಸಾಧ್ಯತೆ ಇದೆ.

ಘಟ್ಟದ ಮೇಲೆ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಒಂದು, ಬಿಜೆಪಿ ಮೂರು ಬಲ ಹೊಂದಿದೆ. ಘಟ್ಟದ ಕೆಳಗಿಂತ ಮೇಲೆ ಮೈತ್ರಿಕೂಟ ಗಟ್ಟಿ ಇರುವಂತೆ ಕಾಣುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತರೀಕೆರೆ ಹೊರತು ಪಡಿಸಿದರೆ ಮೈತ್ರಿಕೂಟ ಹೆಚ್ಚುಮತ ಗಳಿಸಿದೆ. ತರೀಕೆರೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್ ಈಗ ಮರಳಿ ಕಾಂಗ್ರೆಸ್ ಸೇರಿದ್ದಾರೆ. ಕಳೆದ ಬಾರಿ 33,253 ಮತ ಪಡೆದು ಎರಡನೇ ಸ್ಥಾನ ಪಡೆದ ಇವರು ಕಾಂಗ್ರೆಸ್ ಪಾಳಯಕ್ಕೆ ಬಂದಿರುವುದರಿಂದ ಮೈತ್ರಿ ಕೂಟಕ್ಕೆ ಬಲ ಬಂದಿದೆ.

ಒಟ್ಟಾರೆ ಮೈತ್ರಿಕೂಟದೊಳಗೆ ಎರಡೂ ಜಿಲ್ಲೆಯ ಎಂಟು ಕ್ಷೇತ್ರದಲ್ಲಿ ಜೆಡಿಎಸ್​ಗಿಂತ ಕಾಂಗ್ರೆಸ್ ಶಕ್ತಿ ಹೆಚ್ಚಾಗಿದೆ. ಆದರೆ, ಕಾಂಗ್ರೆಸ್ ಅಭ್ಯರ್ಥಿಯೇ ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆ ಮಾಡಿರುವುದರಿಂದ ಮೊದಲಿನಂತೆ ಕಾಂಗ್ರೆಸ್​ನವರು ಜನರ ಬಳಿ ಮತ ಕೇಳಲು ಮುಜುಗರ ಪಟ್ಟುಕೊಳ್ಳುತ್ತಿಲ್ಲ.

ಘಟ್ಟದ ಮೇಲೆ-ಕೆಳಗೆ ಮತಗಳ ಬಲ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮೈತ್ರಿಕೂಟದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮತಗಳ ತುಲನೆ ಮಾಡಿದರೆ ಘಟ್ಟದ ಮೇಲೆ ಮೈತ್ರಿಕೂಟ ಸ್ಟ್ರಾಂಗ್ ಇದ್ದರೆ, ಕೆಳಗೆ ಬಿಜೆಪಿ ಬಲಾಢ್ಯವಾಗಿದೆ. ಘಟ್ಟದ ಮೇಲಿನ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳು 2,35,377 ಮತ ಪಡೆದಿದ್ದಾರೆ. ಮೈತ್ರಿ ಕೂಟದ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ 2,58,755 ಮತ ಪಡೆದಿದೆ. ಇಲ್ಲಿ ಮೈತ್ರಿ ಕೂಟದ ಮತಗಳು ಹೆಚ್ಚಾಗಿವೆ ಹಾಗೂ ಒಬ್ಬ ಕಾಂಗ್ರೆಸ್ ಶಾಸಕರೂ ಇದ್ದಾರೆ. ಹೀಗಾಗಿ ಘಟ್ಟದ ಮೇಲಿನ ಮಲೆನಾಡು ಹಾಗೂ ಬಯಲು ಸೀಮೆಯಲ್ಲಿ ಮೈತ್ರಿಕೂಟ ಈ ಮತಗಳನ್ನು ಲೆಕ್ಕಹಾಕಿ ಉತ್ಸಾಹದಲ್ಲಿ ಪ್ರಚಾರ ಕೈಗೊಂಡಿದೆ. ಘಟ್ಟದ ಕೆಳಗೆ ಬಿಜೆಪಿ 3,29,232 ಮತ ಪಡೆದು ಪಾರಮ್ಯ ಮೆರೆದರೆ, ಮೈತ್ರಿಕೂಟದ ಕಾಂಗ್ರೆಸ್-ಜೆಡಿಎಸ್ 2,51,376 ಮತ ಗಳಿಸಿವೆ. ಹೀಗಾಗಿ ಘಟ್ಟದ ಮೇಲಿಗಿಂತ ಕೆಳಗೆ ಬಿಜೆಪಿ ಬಲಾಢ್ಯವಿರುವುದು ಕಂಡು ಬರುತ್ತಿದೆ. ಒಟ್ಟಾರೆಯಾಗಿ ಎಂಟು ಕ್ಷೇತ್ರದದಲ್ಲಿ ಬಿಜೆಪಿ 5,64,609 ಮತ ಗಳಿಸಿದರೆ ಮೈತ್ರಿ ಕೂಟ ಕಾಂಗ್ರೆಸ್-ಜೆಡಿಎಸ್ 5,101,31 ಮತ ಗಳಿಸಿವೆ.

ಹಿಂದಿನ ಎರಡು ಲೋಕಸಭೆ ಬಲಾಬಲ: ಹಿಂದಿನ 2012ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ 2014ರ ಸಾಮಾನ್ಯ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಸಮಬಲ ಸಾಧಿಸಿವೆ. ಈಗ ಬಿಜೆಪಿಯಲ್ಲಿರುವ ಜಯಪ್ರಕಾಶ್ ಹೆಗ್ಡೆ ಉಪ ಚುನಾವಣೆಯಲ್ಲಿ 3,98,723 ಮತ ಪಡೆದು ಬಿಜೆಪಿ ಸತತ ನಾಲ್ಕು ಬಾರಿಯ ಗೆಲುವಿಗೆ ಬ್ರೇಕ್ ಹಾಕಿದ್ದರು. ಇದರ ಜತೆ ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಬಿ.ಎಲ್.ಭೋಜೆಗೌಡ 72,080 ಮತ ಪಡೆದು ಗಮನ ಸೆಳೆದಿದ್ದರು. ಬಿಜೆಪಿಯ ವಿ.ಸುನಿಲ್​ಕುಮಾರ್ 3,52,999 ಮತ ಪಡೆದು ಪರಾಭವಗೊಂಡಿದ್ದರು. ಆದರೆ, 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ಶೋಭಾ ಕರಂದ್ಲಾಜೆ 5,811,68 ಮತ ಪಡೆದು ಭರ್ಜರಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಸಂಸದರಾಗಿದ್ದ ಜಯಪ್ರಕಾಶ್ ಹೆಗ್ಡೆ 3,99,525 ಹಾಗೂ ಜೆಡಿಎಸ್​ನ ವಿ.ಧನಂಜಯಕುಮಾರ್ 14,895 ಮತ ಪಡೆದು ಎರಡು, ಮೂರನೇ ಸ್ಥಾನಕ್ಕಿಳಿದಿದ್ದರು.