ಇಂದೇ ವಿಶ್ವಾಸಮತ ಯಾಚನೆ ಪೂರ್ಣಗೊಳಿಸಲು ರಾಜ್ಯಪಾಲರ ಸಂದೇಶ: ಯಾವುದೇ ಒತ್ತಡಕ್ಕೆ ಮಣಿಯಲ್ಲವೆಂದ ಸ್ಪೀಕರ್​

ಬೆಂಗಳೂರು: ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಸ್ಪೀಕರ್​ ರಮೇಶ್​ಕುಮಾರ್​​ ಅವರಿಗೆ ರಾಜ್ಯಪಾಲ ವಜುಭಾಯ್​ ಆರ್​. ವಾಲಾ ಅವರು ಸಂದೇಶ ರವಾನಿಸಿರುವುದು ಕಾಂಗ್ರೆಸ್​ ಹಾಗೂ ಜೆಡಿಎಸ್​ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ವಿಧಾನಸಭಾ ಕಲಾಪದಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ನಡುವೆ ಗದ್ದಲ ಉಂಟಾಗಿದೆ.

ವಿಶ್ವಾಸಮತ ಯಾಚನೆಗೆ ಇಂದು ದಿನಾಂಕ ನಿಗದಿಯಾಗಿತ್ತು. ಆದರೆ, ಇಂದಿನ ಕಲಾಪದಲ್ಲಿ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು 10ನೇ ಷೆಡ್ಯೂಲ್ ವಿಚಾರವನ್ನು ಮುಂದಿಟ್ಟು, ಶಾಸಕಾಂಗದ ಪಕ್ಷದ ನಾಯಕನಾಗಿ ನಮ್ಮ ಸದಸ್ಯರಿಗೆ ವಿಪ್ ನೀಡುವ ನನ್ನ ಅಧಿಕಾರದ ಬಗ್ಗೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಲ್ಲಿ‌ ಗೊಂದಲ ಇದೆ. ಇದು ಸ್ಪಷ್ಟವಾಗುವವರೆಗೆ ಮುಖ್ಯಮಂತ್ರಿಗಳು ವಿಶ್ವಾಸಮತ ಮಂಡನೆಯನ್ನು ಮುಂದೂಡಬೇಕು ಎಂದು ಚರ್ಚಿಸಿದರು.

ಆದರೆ, ಬಿಜೆಪಿ ಸದಸ್ಯರ ನಿಯೋಗ ಸ್ಪೀಕರ್​ ಉದ್ದೇಶಪೂರ್ವಕವಾಗಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ರಾಜಭವಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯಪಾಲರಾದ ವಜುಭಾಯ್​ ಆರ್​. ವಾಲಾ ಅವರು ಸ್ಪೀಕರ್​ಗೆ ವಿಶ್ವಾಸಮತ ಪ್ರಕ್ರಿಯೆಯನ್ನು ಇಂದೇ ಮುಗಿಸುವಂತೆ ಸಂದೇಶ ರವಾನಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಪೀಕರ್​ ನಾನು ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ತರಾತುರಿಯಲ್ಲಿ ನಿರ್ಧಾರ ಆಗಬೇಕೇ? ನಾನು ಆತುರದಲ್ಲಿ ಹೆಜ್ಜೆ ಇಡಲ್ಲ. ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ರಾಜ್ಯಪಾಲರ ಸಂದೇಶಕ್ಕೆ ಕಾಂಗ್ರೆಸ್​ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸದನದಲ್ಲಿ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವಿನ ಗದ್ದಲಕ್ಕೆ ಕಾರಣವಾಯಿತು. ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಅವರು ತಡರಾತ್ರಿ 12 ಗಂಟೆಯಾದರೂ ಪರವಾಗಿಲ್ಲ ಇಂದೇ ವಿಶ್ವಾಸಮತ ಯಾಚನೆಯನ್ನು ಪೂರ್ಣಗೊಳಿಸಿ ಎಂದು ಪಟ್ಟು ಹಿಡಿದಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *