Friday, 16th November 2018  

Vijayavani

Breaking News

ಸಮ್ಮಿಶ್ರದಲ್ಲಿ ನಿರ್ಲಕ್ಷ್ಯ ಕುದಿಯುತ್ತಿದೆ ಕೈಪಡೆ

Friday, 10.08.2018, 3:05 AM       No Comments

ಬೆಂಗಳೂರು: ತಂತಿಬೇಲಿ ಅಡಿ ತೆವಳಿಕೊಂಡೇ ಆಡಳಿತ ನಡೆಸಿಕೊಂಡು ಹೋಗುತ್ತಿರುವ ರಾಜ್ಯದ ಸಮ್ಮಿಶ್ರ ಸರ್ಕಾರದ ತಕ್ಕಡಿ ಮತ್ತೆ ಕಂಪಿಸಲಾರಂಭಿಸಿದೆ. ಕಾಂಗ್ರೆಸ್ ಶಾಸಕರ ಬೇಡಿಕೆಗಳಿಗೆ ಸರ್ಕಾರದಲ್ಲಿ ಕವಡೆ ಕಿಮ್ಮತ್ತಿಲ್ಲ ಎಂಬ ಧ್ವನಿ ಪ್ರತಿಧ್ವನಿಸಿ ತಣ್ಣಗೆ ಬಂಡಾಯದ ಸ್ವರೂಪ ಪಡೆದುಕೊಳ್ಳುತ್ತಿರುವುದು ಹೈಕಮಾಂಡ್​ನ ನಿದ್ದೆಗೆಡಿಸಿದೆ.

ಮಂತ್ರಿ ಸ್ಥಾನ ಸಿಗದ ಹಿರಿಯ ಶಾಸಕರು, ಪ್ರಯತ್ನಿಸಿ ವಿಫಲರಾದವರು, ತಮಗಿಂತ ಕಿರಿಯರನ್ನು ಪರಿಗಣಿಸಿದ್ದಕ್ಕೆ ಸಿಟ್ಟಾದವರೂ ಸೇರಿ ವಿವಿಧ ಮನಸ್ಕರರ ಕೈ ಶಾಸಕರ ಪಡೆ ರಾತ್ರಿಯಾಗುತ್ತಿದ್ದಂತೆಯೇ ಗುಂಪು ಸೇರುತ್ತಿವೆ. ಸರ್ಕಾರದ ತೀರ್ವನಗಳ ಬಗ್ಗೆ ನಕಾರಾತ್ಮಕ ಚರ್ಚೆಗೆ ಮುನ್ನುಡಿ ಬರೆಯುತ್ತಿರುವುದು ಕಾಂಗ್ರೆಸ್ ಹಿರಿಯರಿಗೆ ಕಸಿವಿಸಿ ತಂದಿದೆ.

ಹೈಕಮಾಂಡ್ ಸೂಚನೆಯಂತೆ ಸರ್ಕಾರಕ್ಕೆ ಬೆನ್ನೆಲುಬಾಗಿ ನಿಲ್ಲಬೇಕೆಂಬ ಸಂಕಟ ಒಂದೆಡೆಯಾದರೆ, ಸರ್ಕಾರದಿಂದ ಪೂರ್ಣಪ್ರಮಾಣದಲ್ಲಿ ಸಹಕಾರ ಸಿಗದೇ ಇರುವುದು ಇವರೆಲ್ಲರ ಅಸಮಾಧಾನ, ಆಕ್ರೋಶಕ್ಕೆ ಕಾರಣ.

ಪದ್ಮನಾಭನಗರದತ್ತ ಬೊಟ್ಟು!: ಶಾಸಕರಾಗಿ ಆಯ್ಕೆಯಾದ ಬಳಿಕ ಕ್ಷೇತ್ರದ ತುರ್ತು ಬೇಡಿಕೆ ಈಡೇರಿಸುವ ಸಲುವಾಗಿ ಸಿಎಂ ಬಳಿಗೆ ಅರ್ಜಿ ಹಿಡಿದು ಹೋದ ಕಾಂಗ್ರೆಸ್ ಶಾಸಕರಿಗೆ ಕೆಲಸ ಮಾಡಿಕೊಡುವ ಭರವಸೆಯೇನೋ ಸಿಗುತ್ತಿದೆ. ಆದರೆ, ಕೊಟ್ಟ ಮಾತು ಈಡೇರುತ್ತಿಲ್ಲ ಎಂಬುದು ಅತೃಪ್ತರ ನೋವಾಗಿದೆ. ಬೇಡಿಕೆಗಳನ್ನು ಹೊತ್ತೊಯ್ದಾಗ ಸಿಎಂ ಚೆನ್ನಾಗಿ ಮಾತನಾಡಿ ಕಳುಹಿಸುತ್ತಾರಾದರೂ ಅವರು ಸಹಿ ಹಾಕಿದ ಬಳಿಕವೂ ಮುಂದೆ ಕಡತ ಪ್ರಕ್ರಿಯೆ ನಡೆಯುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಪದ್ಮನಾಭನಗರದತ್ತ ಕೈ ತೋರಿಸುತ್ತಾರೆ ಎಂದು ಬೆಂಗಳೂರಿನ ಕೈ ಶಾಸಕರು ಪಕ್ಷದ ವೇದಿಕೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಈ ರೀತಿಯ ಅನುಭವಕ್ಕೀಡಾದ ಹಿರಿಯ ಶಾಸಕರೆಲ್ಲ ಒಂದೆಡೆ ಸೇರಿ, ಇನ್ನು ಮುಂದೆ ಸಿಎಂ ಬಳಿಗೆ ಅರ್ಜಿ ಹಿಡಿದು ಹೋಗಬಾರದೆಂಬ ತೀರ್ವನಕ್ಕೆ ಬಂದಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವುದೇ ರೂಪಬೇಕಾದರೂ ಪಡೆಯಬಹುದೆಂದು ಕಾಂಗ್ರೆಸ್​ನ ಮುಖಂಡರೊಬ್ಬರು ನೇರವಾಗಿ ಸವಾಲೆಸೆದಿದ್ದಾರೆ.

ಗುಪ್ತ ವರದಿ ಬಹಿರಂಗ

ತೆರೆಮರೆಯ ಬಂಡಾಯ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್​ನ 14 ಶಾಸಕರು ಸರ್ಕಾರದ ಧೋರಣೆ ಬಗ್ಗೆ ಸಿಟ್ಟಾಗಿದ್ದಾರೆಂಬ ಸಂದೇಶವನ್ನು ಗುಪ್ತಚರ ಇಲಾಖೆ ಸಿಎಂ ಕಿವಿಗೆ ಹಾಕಿತ್ತೆನ್ನಲಾಗಿದೆ. ಜತೆಗೆ ಇವರೆಲ್ಲರೂ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿಯನ್ನೂ ಹೊರಗೆಡಹಿತ್ತು. ಆದರೆ ಸಿಎಂ ಮಾತ್ರ ಅಂತವರ ಹೆಸರು ಕೊಟ್ಟರೆ ನಿಮ್ಮ ವರದಿ ನಂಬುವುದಾಗಿ ಹೇಳಿ ಇಲಾಖೆ ಮಾಹಿತಿಯನ್ನೇ ಅಲ್ಲಗಳೆದಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

ವರ್ಗ ಬೇಡಿಕೆಗೂ ಕಿಮ್ಮತ್ತಿಲ್ಲ

ಮೊದಲ ಹಂತದಲ್ಲಿ ವರ್ಗಾವಣೆ ಶಿಫಾರಸು ಗಳನ್ನು ಮಾಡುತ್ತಿಲ್ಲವೇಕೆ ಎಂಬ ಪ್ರಶ್ನೆ ಸಂಪುಟಸಭೆಯಲ್ಲೇ ಸಿಎಂಗೆ ಎದುರಾಗಿತ್ತು. ಸಚಿವರು, ಶಾಸಕರು ವರ್ಗಾವಣೆಗೆ ಮಾಡಿರುವ ಶಿಫಾರಸನ್ನು ಪರಿಗಣಿಸದೇ ಇದ್ದರೆ ಮುಖ ತೋರಿಸುವುದು ಕಷ್ಟವಾಗುತ್ತದೆ. ಕೂಡಲೇ ವರ್ಗಾವಣೆ ಮಾಡಿಕೊಡಿ ಎಂದು ಕೆಲವು ಸಚಿವರು ದನಿ ಎತ್ತಿದ್ದರು. ಈ ವೇಳೆ, ಹಂತಹಂತವಾಗಿ ವರ್ಗಾವಣೆ ಮಾಡುವುದಾಗಿ ಭರವಸೆ ನೀಡಿದ್ದ ಎಚ್ಡಿಕೆ ಇದೀಗ ಕೊಟ್ಟ ಮಾತಿನಂತೆ ನಡೆದುಕೊಳ್ಳದಿರುವುದು ಶಾಸಕರನ್ನು ಕೆರಳಿಸಿದೆ.

ತುರ್ತು ಸಭೆಗೆ ಆಗ್ರಹ

ಒಟ್ಟಾರೆ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಕ್ಷಣ ಸಮನ್ವಯ ಸಮಿತಿ ಸಭೆ ಕರೆದು ಪಕ್ಷದ ಶಾಸಕರ ಕೆಲಸಗಳನ್ನು ಮಾಡಿಕೊಡುವ ಬಗ್ಗೆ ಚರ್ಚೆಯಾಗಬೇಕು ಎಂದು ಕಾಂಗ್ರೆಸ್ಸಿಗರು ಪಟ್ಟುಹಿಡಿದಿದ್ದಾರೆಂಬ ಬಗ್ಗೆಯೂ ಮಾಹಿತಿ ಲಭಿಸಿದೆ.

ಹಳಸಿತೇ ಸಂಬಂಧ?

ಪ್ರಮುಖವಾಗಿ ಬೆಂಗಳೂರಿನ ಕಾಂಗ್ರೆಸ್ ಶಾಸಕರು ಉಪ ಮುಖ್ಯಮಂತ್ರಿ ವಿರುದ್ಧ ಸಿಟ್ಟಾಗಿದ್ದಾರೆಂಬ ವದಂತಿ ಕಾಂಗ್ರೆಸ್ ವಲಯದಲ್ಲಿ ಹರಿದಾಡಿದೆ. ಕಾಂಗ್ರೆಸ್ ಶಾಸಕರಿಗಿಂತಲೂ ಹೆಚ್ಚಾಗಿ ಡಿಸಿಎಂ, ಕುಮಾರಸ್ವಾಮಿ ಪರವಾಗಿ ನಿಲ್ಲುತ್ತಿದ್ದಾರೆ. ಇದರಿಂದ ವೈಯಕ್ತಿಕವಾಗಿ ಹಿನ್ನೆಡೆಯಾಗುತ್ತದೆ ಎಂದು ಕೈ ಶಾಸಕರು ಪಕ್ಷದ ಪ್ರಮುಖ ನಾಯಕರ ಸಮ್ಮುಖದಲ್ಲಿ ಸಂಕಟ ತೋಡಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಬೆಂಗಳೂರು ಜಿಲ್ಲಾ ಉಸ್ತುವಾರಿಯನ್ನು ಬೆಂಗಳೂರಿನ ಶಾಸಕರಿಗೆ ನೀಡದೆ, ಬೆಂಗಳೂರಿಂದ ಶಾಸಕರಾಗಿ ಸಚಿವರಾದವರಿಗೆ ಬೇರೆ ಜಿಲ್ಲೆಗಳ ಉಸ್ತುವಾರಿ ನೀಡಿದ್ದು ಸರಿಯಲ್ಲ ಎಂಬ ಕಿಡಿ ಕೂಡ ಹೊತ್ತಿದೆ.

Leave a Reply

Your email address will not be published. Required fields are marked *

Back To Top