ಹೈಕಮಾಂಡ್ ಬಯಸಿದ್ರೆ ಸಿಎಂ ಆಗುವೆ

ಬೆಳಗಾವಿ/ಬೆಂಗಳೂರು: ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಅವರು ಬಯಸಿದರೆ ಸಿಎಂ ಜವಾಬ್ದಾರಿ ನಿರ್ವಹಿಸಲು ಸಿದ್ಧ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ನಗರದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಹಿಳಾ ಮತ್ತು ಪುರುಷ ವಿಶೇಷ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೈಕಮಾಂಡ್ ಸೂಚನೆಯಂತೆ ನಡೆಯುತ್ತೇನೆ. ಸಮ್ಮಿಶ್ರ ಸರ್ಕಾರ ಭದ್ರವಾಗಿದ್ದು, ಐದು ವರ್ಷ ಅಧಿಕಾರ ನಡೆಸುತ್ತೇವೆ ಎಂದರು. ಪರಮೇಶ್ವರ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನನಗೆ ಸಿಎಂ ಆಗುವ ಅರ್ಜೆಂಟ್ ಇಲ್ಲ: ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಡಿ.ಕೆ.ಶಿವಕುಮಾರ್, ಆಸೆ ಎಲ್ಲರಿಗೂ ಇರುತ್ತೆ. ಅದು ತಪ್ಪಲ್ಲ. ಐದು ವರ್ಷಗಳ ಕಾಲ ಜೆಡಿಎಸ್​ಗೆ ಸಿಎಂ ಹುದ್ದೆ ಬರೆದು ಕೊಟ್ಟಿದ್ದೇವೆ. ಆ ಮಾತಿನಿಂದ ಹಿಂದೆ ಸರಿಯುವ ಮಾತೇ ಇಲ್ಲ. ನನಗಂತೂ ಈ ಹುದ್ದೆ ವಿಚಾರದಲ್ಲಿ ಅರ್ಜೆಂಟ್ ಇಲ್ಲ. ಅವರ ಅಭಿಪ್ರಾಯದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದರು.

ಅರ್ಹತೆ ಪ್ರಶ್ನಿಸುವಂತಿಲ್ಲ: ಪರಮೇಶ್ವರ್ ಅರ್ಹತೆ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ. ಅವರು ಸಮರ್ಥರಿದ್ದಾರೆ ಎಂದಿರುವ ಸಚಿವ ಶಿವಶಂಕರ ರೆಡ್ಡಿ, ಸದ್ಯ ಎರಡೂ ಪಕ್ಷಗಳ ವರಿಷ್ಠರ ನಿರ್ಧಾರದಂತೆ ಕುಮಾರಸ್ವಾಮಿ ಸಿಎಂ ಹಾಗೂ ಪರಮೇಶ್ವರ್ ಡಿಸಿಎಂ ಆಗಿದ್ದಾರೆ. ಇದು ಪಕ್ಷದ ಹೈಕಮಾಂಡ್ ತೀರ್ವನವೂ ಆಗಿದೆ. ರಾಜಕೀಯದಲ್ಲಿ ಏನು ಬೇಕಾದರೂ ಬದಲಾವಣೆಯಾಗಬಹುದು ಎಂದುತ್ತರಿಸಿದರು.

ರಾಜ್ಯದಲ್ಲಿ ಸಿಎಂ ಆಗಿ ಸಮರ್ಥವಾಗಿ ಕೆಲಸ ಮಾಡುವವರಿದ್ದಾರೆ. ಅವರಲ್ಲಿ ಪರಮೇಶ್ವರ್ ಕೂಡ ಒಬ್ಬರು. ಅವರ ಹೇಳಿಕೆಗೆ ಬೇರೆ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ.

| ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

ನೋಟಿಸ್​ಗೆ ಉತ್ತರಿಸುವೆ

ಕೇಂದ್ರ ತನಿಖಾ ಸಂಸ್ಥೆವೊಂದರಿಂದ ನೋಟಿಸ್ ಬಂದಿದೆ. ಇದರ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ. ಬೇರೆ ಬೇರೆ ಸಂದರ್ಭಗಳಲ್ಲಿ ಇದೇ ಸಂಸ್ಥೆ ನನ್ನಿಂದ ಉತ್ತರ ಪಡೆದುಕೊಂಡಿದೆ. ಈಗ ಬಂದಿರುವ ನೋಟಿಸ್​ಗೂ ಉತ್ತರ ಕೊಡಲು ಸಮರ್ಥನಿದ್ದೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇಡಿಯಿಂದ ನೋಟಿಸ್ ಆಗಮಿಸಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೊದಲ ಹತ್ತು ತಿಂಗಳಲ್ಲೇ ಅಧಿಕಾರ ದುರ್ಬಳಕೆ ಕೆಲಸ ಆರಂಭವಾಗಿದೆ. ಈಗಲೂ ಅದು ಮುಂದುವರೆದಿದೆ. ದುರುದ್ದೇಶದಿಂದ ನನಗೆ ನೋಟಿಸ್ ಕೊಟ್ಟಿದ್ದಾರೆ ಎಂಬ ಬಗ್ಗೆ ಏನೂ ಹೇಳುವುದಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ನೋಟಿಸ್ ಕೊಟ್ಟಿದ್ದಾರೆ ಎಂದೂ ಹೇಳುವುದಿಲ್ಲ. ಬಳ್ಳಾರಿ ಜನ ಬೇಕಾದವರನ್ನು ಗೆಲ್ಲಿಸಿಕೊಂಡಿದ್ದಾರೆ. ಜನತೆಗೆ ನಾನು ಬಹಳಷ್ಟು ವಿಚಾರಗಳನ್ನು ಹೇಳಬೇಕಿದೆ. ಸಮಯ ಬಂದಾಗ ಎಲ್ಲ ಹೇಳುತ್ತೇನೆ ಎಂದರು.