Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಕೈಡ್ರಾಮಾ ದೆಹಲಿಗೆ ಶಿಫ್ಟ್

Tuesday, 18.09.2018, 3:06 AM       No Comments

ಬೆಂಗಳೂರು: ಕೆಲ ದಿನಗಳಿಂದ ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಈಗ ದೆಹಲಿಗೆ ವರ್ಗಾವಣೆಯಾಗಿದೆ. ದೋಸ್ತಿ ಸರ್ಕಾರ ಪತನಗೊಳ್ಳುವ ಆತಂಕ, ಪಕ್ಷದೊಳಗಿನ ಅಸಮಾಧಾನವನ್ನು ಪರಿಹರಿಸಲು ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಿಗೆ ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿದೆ. ಸಮ್ಮಿಶ್ರ ಸರ್ಕಾರ ಪತನ ಹೊಂದಿದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ. ಆದರೆ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು ಎಂದು ನಿರ್ಧರಿಸಿರುವ ಕಾಂಗ್ರೆಸ್ ನಾಯಕರು, ಅತೃಪ್ತರ ಬಂಡಾಯವನ್ನು ಚಿವುಟಲು ನಿರ್ಧರಿಸಿದ್ದಾರೆ. ವಿಧಾನ ಪರಿಷತ್​ಗೆ ಆಯ್ಕೆ, ಸಂಪುಟ ರಚನೆ ವಿಚಾರವನ್ನು ಇದಕ್ಕೆ ದಾಳವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ.

ರಾಹುಲ್ ಜತೆ ಚರ್ಚೆ

ವಿಧಾನಪರಿಷತ್​ಗೆ ಅಭ್ಯರ್ಥಿ ಆಯ್ಕೆ, ಸಂಪುಟ ವಿಸ್ತರಣೆಯಲ್ಲಿ ಯಾರಿಗೆ ಅವಕಾಶ ಕೊಡಬೇಕು ಹಾಗೂ ಸರ್ಕಾರದಲ್ಲಿ ಸಮನ್ವಯತೆ ತರುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಬಗ್ಗೆ ರಾಜ್ಯ ಹಾಗೂ ಕೇಂದ್ರದ ನಾಯಕರ ನಡುವೆ ಮಹತ್ವದ ಮಾತುಕತೆ ನಡೆಯಲಿದೆ. ವಿಧಾನಪರಿಷತ್​ನ ನಾಲ್ಕು ಸ್ಥಾನಗಳಿಗೆ ಮತ್ತು ಸಂಪುಟದ ಆರು ಸ್ಥಾನಕ್ಕೆ ಸಂಭಾವ್ಯರ ಪಟ್ಟಿಯನ್ನು ಸಿದ್ಧಪಡಿಸಿ, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಜತೆ ನಾಯಕರು ಚರ್ಚೆ ನಡೆಸಲಿದ್ದಾರೆ. ಮಂಗಳವಾರ ಮತ್ತು ಬುಧವಾರ ಸರಣಿ ಸಭೆಗಳು ನಡೆಯಲಿವೆ ಎನ್ನಲಾಗಿದೆ.

ದೆಹಲಿಗೆ ದೌಡು

ಸೆಪ್ಟೆಂಬರ್ 24ರಂದು ಪಿತೃಪಕ್ಷ ಆರಂಭವಾಗಲಿದ್ದು, ಅಷ್ಟರೊಳಗೆ ಸಂಪುಟ ವಿಸ್ತರಣೆ ಸೂಕ್ತ ಎಂಬ ಜೆಡಿಎಸ್ ಅಭಿಪ್ರಾಯವನ್ನು ಒಪ್ಪಿಕೊಂಡಿರುವ ಕಾಂಗ್ರೆಸ್, ತಕ್ಷಣವೇ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಿದೆ. ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕ ಸತೀಶ್ ಜಾರಕಿಹೊಳಿ ಮತ್ತಿತರ ಪ್ರಮುಖ ನಾಯಕರು ಮಂಗಳವಾರ ಸಂಜೆ ದೆಹಲಿಗೆ ಪ್ರಯಾಣಿಸಲಿದ್ದು, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕೂಡ ಭಾಗಿಯಾಗಲಿದ್ದಾರೆ.

ಏನಾಗಬಹುದು?

# ವಿಧಾನಪರಿಷತ್​ನ ಆರು ಸ್ಥಾನಗಳಿಗೆ ಅಭ್ಯರ್ಥಿ ಆಯ್ಕೆ. ಪಕ್ಷದ ಎಲ್ಲ ನಾಯಕರ ಅಭಿಪ್ರಾಯ ಸಂಗ್ರಹಿಸಿ, ಜಾತಿ ಪ್ರಾಧಾನ್ಯತೆ ನೀಡಿ ಆಯ್ಕೆ

# ಸಂಪುಟದಲ್ಲಿ ಖಾಲಿ ಇರುವ ಆರು ಸ್ಥಾನಕ್ಕೆ ಯಾರು ಸೂಕ್ತ ಎಂಬ ಬಗ್ಗೆ ಪ್ರಥಮ ಹಂತದ ಚರ್ಚೆ. ಯಾರಿಗೆ ಆದ್ಯತೆ ನೀಡುವುದು ಅನಿವಾರ್ಯ ಎಂಬುದು ಕೂಡ ಪ್ರಸ್ತಾಪ

# ನಿಗಮ ಮಂಡಳಿಗೆ ಒಪ್ಪಿಕೊಳ್ಳಬಹುದಾದ ಶಾಸಕರ ಪ್ರಥಮ ಹಂತದ ಪಟ್ಟಿಗೆ ಅಂಕಿತ ಬೀಳುವ ಸಾಧ್ಯತೆ

# ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರುವಂಥ ಅಸಮಾಧಾನ ಪಕ್ಷದಲ್ಲಿ ಮರುಕಳಿಸದೇ ಇರಲು ಪ್ರಮುಖ ನಾಯಕರಿಗೆ ನೀತಿಪಾಠ

# ಅವಕಾಶಕ್ಕೆ ಕಾಯುತ್ತಿರುವ ಬಿಜೆಪಿಯ ಪ್ರಯತ್ನ ಫಲ ನೀಡದಂತೆ ವಹಿಸಬೇಕಾದ ಎಚ್ಚರಿಕೆ ಬಗ್ಗೆ ವಿಚಾರ ವಿನಿಮಯ

ಅತೃಪ್ತರ ಪಟ್ಟಿ ಸಿದ್ಧ: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಪ್ರಹಸನ ಹಿನ್ನೆಲೆಯಲ್ಲಿ ಕೈ ನಾಯಕರು ಅತೃಪ್ತರ ಪಟ್ಟಿಯನ್ನು ತಯಾರಿಸಿದ್ದಾರೆ. ಯಾರ ಮನವೊಲಿಕೆ ಸಾಧ್ಯ? ಯಾರಿಗೆ ಸಂಪುಟ ಸ್ಥಾನ ಕೊಡುವುದು ಅನಿವಾರ್ಯ ಎಂಬ ಲೆಕ್ಕಾಚಾರ ಹಾಕಿದ್ದು, ಇದರ ಆಧಾರದಲ್ಲಿ ಸಂಭಾವ್ಯರ ಪಟ್ಟಿ ಸಿದ್ಧಪಡಿಸಿ ರಾಹುಲ್ ಗಾಂಧಿ ಮುಂದಿಡಲು ನಿರ್ಧರಿಸಲಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಗಳೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಯಾರಿಗೆ ಆದ್ಯತೆ ಕೊಡಬೇಕು ಎಂಬ ಕುರಿತು ಅವರು ದೆಹಲಿ ನಾಯಕರಿಗೆ ವರದಿ ನೀಡಲಿದ್ದಾರೆ.

ಬಂಡಾಯ ಶಮನ?: ಲಕ್ಷ್ಮೀ ಹೆಬ್ಬಾಳ್ಕರ್ ನೆಪವಾಗಿಟ್ಟುಕೊಂಡು ಪಕ್ಷದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುವುದು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಉದ್ದೇಶದಿಂದ ಜಾರಕಿಹೊಳಿ ಸಹೋದರರು ನಡೆಸಿದ ಪ್ರಯತ್ನ ಫಲ ಕೊಟ್ಟಿದೆ. ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಸತೀಶ್ ಜಾರಕಿಹೊಳಿಗೆ ಕರೆ ಮಾಡಿ ಮಂಗಳವಾರ ದೆಹಲಿಗೆ ಆಗಮಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಜಾರಕಿಹೊಳಿ ಸಹ ಒಪ್ಪಿದ್ದಾರೆ. ಇನ್ನೊಂದೆಡೆ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿ ಆಕ್ಷೇಪಣಾ ಪಟ್ಟಿ ಒಪ್ಪಿಸಿದರು. ಸಮಸ್ಯೆ ಬಗೆಹರಿಸಲು ಸಿದ್ದರಾಮಯ್ಯ ಒಪ್ಪಿದ್ದಾರೆ ಎನ್ನಲಾಗಿದೆ. ಈ ಮೂಲಕ ಪಕ್ಷದಲ್ಲಿ ಬಂಡಾಯದ ಧ್ವಜ ಹಾರಿಸುವ ಮುನ್ಸೂಚನೆ ನೀಡಿದ್ದ ಜಾರಕಿಹೊಳಿ ಸಹೋದರರು ಶಾಂತವಾಗುವ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

Back To Top