ಸಂಪುಟ ಸಂಕಟಕ್ಕೆ ಸಮನ್ವಯ ಸೂತ್ರ?

ಬೆಂಗಳೂರು: ಸಂಪುಟ ವಿಸ್ತರಣೆ ಸಂದಿಗ್ಧದ ನಡುವೆಯೇ ಬುಧವಾರ ಮೈತ್ರಿ ಪಕ್ಷಗಳ ಮಹತ್ವದ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕ ಕುರಿತು ಈ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ. ಸಚಿವ ಸ್ಥಾನ ಆಕಾಂಕ್ಷಿಗಳಿಂದ ಹಿರಿಯ ನಾಯಕರ ಮೇಲೆ ಒತ್ತಡ ಹೆಚ್ಚುತ್ತಿದ್ದು, ಕಾಂಗ್ರೆಸ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈ ಮಧ್ಯೆ, ಬಿಜೆಪಿ ನಾಯಕ ಜನಾರ್ದನ ರೆಡ್ಡಿ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿದ್ದಾರೆ ಎಂಬ ಸುದ್ದಿ ಕೈ ನಾಯಕರ ಕಸಿವಿಸಿಗೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆಂಬ ಮಾಹಿತಿ ಇರುವ ಆಡಿಯೋ ಕೂಡ ಮೈತ್ರಿ ಸರ್ಕಾರದ ನೆಮ್ಮದಿಗೆ ಭಂಗ ತಂದಿದೆ.

ಕಣ್ಮುಚ್ಚಿಕೊಂಡು ಹಾಲು ಕುಡಿತಿಲ್ಲ: ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಡಿ.ಕೆ. ಶಿವಕುಮಾರ್, ಧ್ವನಿಮುದ್ರಿಕೆಯಲ್ಲಿ ಉಲ್ಲೇಖಿಸಿರುವ ಸುರ್ಜಿತ್ ನನ್ನ ಪಿಎ ಅಲ್ಲ, ಶ್ರೀರಾಮುಲು ಪಿಎ. ಜನಾರ್ದನ ರೆಡ್ಡಿ ಜಿಂದಾಲ್​ನಲ್ಲಿ ಏನು ಮಾತನಾಡಿದ್ದರು? ಯಾವ ರೀತಿ ಒತ್ತಡ ಹೇರಿದರು ಎಂಬುದು ಗೊತ್ತಿದೆ. ಬೆಂಕಿಯಿಲ್ಲದೇ ಹೊಗೆಯಾಡುವುದಿಲ್ಲ. ನಾವೇನು ಕಣ್ಮುಚ್ಚಿಕೊಂಡು ಹಾಲು ಕುಡಿತಿಲ್ಲ. ಅವರು ಇನ್ನೂ ನೂರು ಜನರನ್ನು ಭೇಟಿ ಮಾಡಲಿ, ನೂರಾರು ಕೋಟಿ ಆಫರ್ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ದಿನೇಶ್ ಗುಂಡೂರಾವ್ ಮತ್ತು ಪಕ್ಷದ ನಾಯಕರು ನಿರ್ಧರಿಸುತ್ತಾರೆ ಎಂದು ಶಿವಕುಮಾರ್ ತಿಳಿಸಿದರು.

ಮೈತ್ರಿ ಆತಂಕವೇನು?

# ಈಗ ಸಚಿವ ಸಂಪುಟ ವಿಸ್ತರಿಸದಿದ್ದರೆ ಬೆಳಗಾವಿ ಅಧಿವೇಶನಲ್ಲಿ ಮೈತ್ರಿ ಬಾಂಧವ್ಯದ ಬಣ್ಣ ಬಯಲು.
# ಬಿಜೆಪಿ ನಾಯಕರಿಗೆ ಸರ್ಕಾರ ಬೀಳಿಸಲು ಅವಕಾಶ
# ಸಂಪುಟ ವಿಸ್ತರಿಸಿದರೆ ಭಿನ್ನಮತ ಏಳುವ ಭೀತಿ
# ಸಂಪುಟ ವಿಸ್ತರಣೆ ತೀರ್ವನದಿಂದ ಲೋಕಸಭೆ ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಸಾಧ್ಯತೆ