ವಿಜಯವಾಣಿ ಸುದ್ದಿಜಾಲ ಮೈಸೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಜನಾಂದೋಲನ ಸಮಾವೇಶ ಕಾಂಗ್ರೆಸ್ ಶಕ್ತಿ ಪ್ರದರ್ಶನದೊಂದಿಗೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧದ ಹೋರಾಟಕ್ಕೆ ರಣಕಹಳೆ ಮೊಳಗಿಸಿತು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭವು ಸಿಎಂ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಿತು. ಅಲ್ಲದೆ ‘ಸಿಎಂ ಅವರೊಂದಿಗೆ ಬಂಡೆಗಲ್ಲಿನಂತೆ ಜತೆಗೆ ಇದ್ದೇವೆ’ ಎಂಬ ಸಂದೇಶವನ್ನೂ ಸಾರಲಾಯಿತು. ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ರಾಜೀನಾಮೆಗೆ ಒತ್ತಾಯಿಸಿ, ಉಭಯ ಪ್ರಕರಣಗಳನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸುತ್ತಿರುವ ಮೈತ್ರಿ ಪಕ್ಷಗಳ ವಿರುದ್ಧ ಕೈ ಪಡೆ ತೊಡೆತಟ್ಟಿ ಅಬ್ಬರಿಸಿತು. ವಿವಿಧ ಹಗರಣಗಳಲ್ಲಿ ಸಿಲುಕಿಕೊಂಡಿರುವ ಬಿಜೆಪಿ-ಜೆಡಿಎಸ್ ನಾಯಕರಿಗೆ ಏನು ನೈತಿಕತೆ ಇದೆಯೇ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದರು.
ಜಗ್ಗುವುದಿಲ್ಲ, ಬಗ್ಗುವುದಿಲ್ಲ: ಕಿಕ್ಕಿರಿದು ತುಂಬಿದ್ದ ಜನಸ್ತೋಮವನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಬಿಜೆಪಿ-ಜೆಡಿಎಸ್ ಎಷ್ಟೇ ಪಾದಯಾತ್ರೆ ಮಾಡಿದ್ದರೂ ನಾನು ಜಗ್ಗುವುದಿಲ್ಲ, ಬಗ್ಗುವುದಿಲ್ಲ. ಜನಾಶೀರ್ವಾದ ಇರುವವರೆಗೂ ಯಾರು ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ನಮ್ಮ ಸರ್ಕಾರವನ್ನೂ ಅಲ್ಲಾಡಿಸಲೂ ಆಗಲ್ಲ’ ಎಂದು ಗುಟುರು ಹಾಕಿದರು.
ಶೋಷಿತರು ಅಧಿಕಾರದಲ್ಲಿ ಇರುವುದನ್ನು ಮನುವಾದಿಗಳು, ಜಾತಿವಾದಿಗಳು, ಪಾಳೆಗಾರಿಕೆ ಪ್ರವೃತ್ತಿಯವರು ಸಹಿಸಲ್ಲ. ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು, ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ ವಿರುದ್ಧವೂ ಇದೇ ರೀತಿಯ ಕುತಂತ್ರ ಮಾಡಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರದ್ದು ದ್ವೇಷ ರಾಜಕಾರಣ ಎಂದು ಹರಿಹಾಯ್ದರು.
ಆಸ್ತಿ ವ್ಯಾಮೋಹ ನನಗಿಲ್ಲ: 40 ವರ್ಷಗಳ ರಾಜಕೀಯ ಜೀವನವನ್ನು ತೆರೆದಿಟ್ಟ ಸಿಎಂ, ಆಸ್ತಿ ಮಾಡುವ ವ್ಯಾಮೋಹ ನನಗಿಲ್ಲ. ಇದು ನನ್ನ ಕುಟುಂಬಕ್ಕೂ ಬರಲಿಲ್ಲ. ಸುದೀರ್ಘ ರಾಜಕಾರಣದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ. ನಾನು ಮತ್ತು ನನ್ನ ಪತ್ನಿ ತಪ್ಪು ಮಾಡಲು ಸಾಧ್ಯವೇ? ಜನರಿಗೆ ದ್ರೋಹ ಮಾಡಲು ಸಾಧ್ಯವೇ ಎಂದು ಸಿಎಂ ಪ್ರಶ್ನಿಸಿದಾಗ ಜನಸಮೂಹವು ‘ಇಲ್ಲ’ ಎಂದು ಕೂಗಿತು.
ರಾಜಕೀಯವಾಗಿ ತುಳಿಯಲು ಯತ್ನ: ತಲಾ 2 ಸಲ ಸಿಎಂ, ಡಿಸಿಎಂ, ಅನೇಕ ಸಲ ಸಚಿವನಾದರೂ ಮೈಸೂರಿನಲ್ಲಿ ನನಗೆ ಮನೆ ಇರಲಿಲ್ಲ. ಈಗ ಮನೆ ಕಟ್ಟಿಸುತ್ತಿರುವೆ. ಸಾಲ ತೀರಿಸಲು ಎರಡು ಮನೆ ಮಾರಿದೆ. ಇದನ್ನು ಬಿಟ್ಟು ಬೇರೆ ಮನೆ, ನಿವೇಶನವಿದ್ದರೆ ತೋರಿಸಲಿ ಎಂದು ಸಿಎಂ ಸವಾಲು ಹಾಕಿದರು. ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣದ ಕುರಿತು ಸ್ಪಷ್ಟನೆ ಕೊಟ್ಟ ಸಿಎಂ, ರಾಜಕೀಯವಾಗಿ ನನ್ನನ್ನು ತುಳಿಯಲು ಯತ್ನಿಸಲಾಗುತ್ತಿದ್ದು, ಅದಕ್ಕಾಗಿ ಇದರಲ್ಲಿ ಸಿಲುಕಿಸಲು ಕುಟೀಲ ರಾಜಕಾರಣ ಮಾಡಲಾಗುತ್ತಿದೆ. ಈ ಷಡ್ಯಂತ್ರದಲ್ಲಿ ಕೇಂದ್ರ ಸರ್ಕಾರ, ಬಿ.ಎಸ್.ಯಡಿಯೂರಪ್ಪ, ಎಚ್. ಡಿ.ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ, ಆರ್.ಅಶೋಕ್ ಸೇರಿಕೊಂಡಿದ್ದಾರೆ ಎಂದು ದೂರಿದರು. ನಾನೂ ಎಂದೂ ದ್ವೇಷ ರಾಜಕಾರಣ ಮಾಡಿಲ್ಲ. ಹಾಗೆ ಮಾಡಿದ್ದರೆ ಇವತ್ತಿನ ಪರಿಸ್ಥಿತಿ ಉದ್ಭವವೇ ಆಗುತ್ತಿರಲಿಲ್ಲ. ಆರ್.ಅಶೋಕ್, ವಿಜಯೇಂದ್ರ, ಯಡಿಯೂರಪ್ಪ, ಕುಮಾರಸ್ವಾಮಿ ಇಷ್ಟು ಹೊತ್ತಿಗೆ ಜೈಲಿಗೆ ಹೋಗಿರುತ್ತಿದ್ದರು ಎಂದು ಸೂಚ್ಯವಾಗಿ ಎಚ್ಚರಿಕೆ ಕೊಟ್ಟರು.
ಗ್ಯಾರಂಟಿ ವಿರುದ್ಧ ಪಾದಯಾತ್ರೆ: ದುರ್ಯೋಧನ, ಶಕುನಿಯಂತೆ ಕುತಂತ್ರ ರಾಜಕಾರಣದ ಭಾಗವಾಗಿ ಪಾದಯಾತ್ರೆ ಮಾಡುತ್ತಿದ್ದು, ಇದು ಕಾಂಗ್ರೆಸ್ ವಿರುದ್ಧವಲ್ಲ, ಗ್ಯಾರಂಟಿ ಯೋಜನೆಗಳ ವಿರುದ್ಧದ ಪಾದಯಾತ್ರೆ. ಈ ಯೋಜನೆಗಳನ್ನು ದಮನ ಮಾಡಲು ಹುನ್ನಾರ ನಡೆದಿದೆ ಎಂದು ಎಐಸಿಸಿ ಕಾರ್ಯದರ್ಶಿ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಆರೋಪಿಸಿದರು.
ಕಾರ್ಯಕ್ರಮಕ್ಕೆ ಸಚಿವ ಸಂಪುಟವೇ ಹಾಜರು!: ಕಾರ್ಯಕ್ರಮದಲ್ಲಿ ಸಚಿವ ಸಂಪುಟವೇ ಹಾಜರಿತ್ತು. ಸಚಿವರಾದ ಡಾ.ಜಿ. ಪರಮೇಶ್ವರ, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಎಂ.ಬಿ.ಪಾಟೀಲ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಡಾ.ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಶಿವಾನಂದ ಪಾಟೀಲ್, ಜಮೀರ್ ಅಹಮ್ಮದ್, ಈಶ್ವರ ಖಂಡ್ರೆ, ಎನ್.ಚಲುವರಾಯಸ್ವಾಮಿ, ರಹೀಂ ಖಾನ್, ಡಾ.ಶರಣಪ್ರಕಾಶ ಪಾಟೀಲ್, ಕೆ.ವೆಂಕಟೇಶ್, ಶಿವರಾಜ ಎಸ್.ತಂಗಡಿ, ಡಿ.ಸುಧಾಕರ್, ಕೆ.ಎನ್.ರಾಜಣ್ಣ, ಲಕ್ಷ್ಮೀ ಹೆಬ್ಬಾಳ್ಕರ್, ಡಾ.ಎಂ.ಸಿ.ಸುಧಾಕರ್, ಎನ್.ಎಸ್.ಬೋಸರಾಜು, ಕಾಂಗ್ರೆಸ್ನ 136 ಶಾಸಕರು, ಸಂಸದರು ಸೇರಿದಂತೆ ರಾಜ್ಯ ವಿವಿಧ ಮೂಲೆಗಳಿಂದ ಪಕ್ಷದ ಜಿಲ್ಲಾ, ತಾಲೂಕುಗಳ ಅಧ್ಯಕ್ಷರಿದ್ದರು.
ಜನವೋ ಜನ..!: ಇಡೀ ಮೈದಾನ ಜನರಿಂದ ತುಂಬಿ ಹೋಗಿತ್ತು. ಅಂದಾಜು 1 ಲಕ್ಷಕ್ಕಿಂತ ಹೆಚ್ಚು ಜನರು ಜಮಾವಣೆಗೊಂಡಿದ್ದರು. ಸಿದ್ದರಾಮಯ್ಯ ಹೆಸರು ಹೇಳುತ್ತಿದ್ದಂತೆ ಜಯಘೊಷಣೆ ಮೊಳಗುತ್ತಿತ್ತು.
ಮುಖ್ಯಮಂತ್ರಿ ಜತೆ ಬಂಡೆಯಂತಿರುವೆ: ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಅವರೊಂದಿಗೆ ನಾನು ಕಲ್ಲುಬಂಡೆಯಂತೆ ಜತೆ ಇರುತ್ತೇನೆ. ಕಾಂಗ್ರೆಸ್, ಪಕ್ಷದ 136 ಶಾಸಕರು, ನಾಡಿನ ಮತದಾರರು ಇದ್ದಾರೆ. ಇದು ಗಮನಕ್ಕೆ ಇರಲಿ. ಏನೂ ಮಾಡಲು ನಿಮ್ಮಿಂದ ಆಗಲ್ಲ ಎಂದು ಪ್ರತಿಪಕ್ಷಗಳಿಗೆ ಎಚ್ಚರಿಕೆ ನೀಡಿದರು. ಕ್ಲೀನ್ ಸ್ವಾಮಿ ಅಂತೆ. ಆದರೆ, ಅವರ ವಿರುದ್ಧ 50 ಡಿನೋಟಿಫಿಕೇಷನ್ ಪ್ರಕರಣಗಳು ಇವೆಯಂತೆ. ಎಲ್ಲ ಬಿಚ್ಚಿಡುತ್ತೇನೆ. ಮಗನಿಗಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಎಚ್ಡಿಕೆ ವಿರುದ್ಧ ಏಕವಚನದಲ್ಲೇ ಹರಿಹಾಯ್ದರು. ಬಿಜೆಪಿ ಹಾಗೂ ಜೆಡಿಎಸ್ ಮಾಡುತ್ತಿರುವುದು ಪಾದಯಾತ್ರೆಯಲ್ಲ, ಪಾಪ ವಿಮೋಚನಾ ಯಾತ್ರೆ. ನಮ್ಮದು ಅಧರ್ವಿುಗಳ ವಿರುದ್ಧದ ಧರ್ಮ ಯುದ್ಧ. ಅನ್ಯಾಯದ ವಿರುದ್ಧ ನ್ಯಾಯದ ಯುದ್ಧ, ನಮ್ಮದು ಅಸತ್ಯದ ವಿರುದ್ಧ ಸತ್ಯದ ಯುದ್ಧ ಎಂದು ಏರುಧ್ವನಿಯಲ್ಲಿ ಅಬ್ಬರಿಸಿದರು.
ಬಿಜೆಪಿ-ಜೆಡಿಎಸ್ ಪಾದಯಾತ್ರೆ: ನಾಳೆ ಒಂದು ಲಕ್ಷ ಕಾರ್ಯಕರ್ತರಿಂದ ಬೃಹತ್ ಸಮಾವೇಶ ಆಯೋಜನೆ
ವಯನಾಡಿಗೆ ನಾಳೆ ಪ್ರಧಾನಿ ಮೋದಿ ಭೇಟಿ: ರಾಷ್ಟ್ರೀಯ ವಿಪತ್ತು ಘೋಷಣೆ ಸಾಧ್ಯತೆ!