ಬಿಜೆಪಿ ಮತ್ತು ಕಾಂಗ್ರೆಸ್​ ಒಂದೇ ನಾಣ್ಯದ 2 ಮುಖ: ಘಟಬಂಧನದ ಅಖಿಲೇಶ್​ ಯಾದವ್​ ಮತ್ತು ಮಯಾವತಿ ವಾಗ್ದಾಳಿ

ಶಹರಾನ್​ಪುರ (ಉತ್ತರ ಪ್ರದೇಶ): ಕಳೆದ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ನಾಯಕರು ಬಿಜೆಪಿ ಮತ್ತು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಜರಿದಿದ್ದಾರೆ.

ದೇವ್​ಬಂದ್​ನಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಘಟಬಂಧನದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಯಾವತಿ, ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್​ ಶಕ್ತವಾಗಿಲ್ಲ ಎಂಬುದನ್ನು ಮುಸ್ಲಿಂ ಸಮುದಾಯದವರಿಗೆ ಎಚ್ಚರಿಸಲು ಬಯಸುತ್ತೇನೆ. ಹಾಗೇನಾದರೂ ಬಿಜೆಪಿ ವಿರುದ್ಧ ಹೋರಾಡಲು ಸಾಮರ್ಥ್ಯ ಇದೆ ಎನ್ನುವುದಾದರೆ ಅದು ಎಸ್​ಪಿ-ಬಿಎಸ್​ಪಿ ಒಳಗೊಂಡ ಘಟಬಂಧನಕ್ಕೆ ಮಾತ್ರ ಎಂದು ಹೇಳಿದರು.

ಈ ಸತ್ಯ ಕಾಂಗ್ರೆಸ್​ನವರಿಗೆ ತಿಳಿದಿದೆ. ಆದ್ದರಿಂದ ಅವರು ನಮಗೆ ಸೋಲಾಗುವುದಾದರೆ ಆಗಲಿ, ಆದರೆ, ಘಟಬಂಧನ ಮಾತ್ರ ಗೆಲ್ಲಬಾರದು ಎಂಬ ಸೂತ್ರ ಅನುಸರಿಸುತ್ತಿದ್ದಾರೆ. ಬಿಜೆಪಿ ಎಲ್ಲೆಲ್ಲ ಅಭ್ಯರ್ಥಿಗಳನ್ನು ಹಾಕಿದೆ, ಅಲ್ಲೆಲ್ಲ ಬಿಜೆಪಿಗೆ ಅನುಕೂಲವಾಗುವ ರೀತಿಯ ಧರ್ಮೀಯರನ್ನು ಕಣಕ್ಕಿಳಿಸಿದೆ. ಆ ಮೂಲಕ ಅದು ಬಿಜೆಪಿಯ ಗೆಲುವಿಗೆ ಸೋಪಾನ ನಿರ್ಮಿಸಿಕೊಟ್ಟಿದೆ. ಆದ್ದರಿಂದ, ಇಂತಹ ಇಬ್ಬಗೆ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್​ ಬಗ್ಗೆ ಮುಸ್ಲಿಂ ಸಮುದಾಯದವರು ಎಚ್ಚರಿಕೆಯಿಂದ ಇರಬೇಕು ಎಂದರು.

ಯುಪಿಯಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್​ ಉಮೇದು
ಬಿಜೆಪಿ ಮತ್ತು ಕಾಂಗ್ರೆಸ್​ನ ನೀತಿಗಳನ್ನು ಗಮನಿಸಿದಾಗ ಎರಡೂ ಪಕ್ಷಗಳ ನಡುವೆ ಹೆಚ್ಚಿನ ವ್ಯತ್ಯಾಸ ಕಾಣಿಸುವುದಿಲ್ಲ. ಹಾಗಾಗಿ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಆರೋಪಿಸಿದರು.

ದೇಶದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಎಸ್​ಪಿ ಮತ್ತು ಬಿಎಸ್​ಪಿ ಘಟಬಂಧನ ರಚಿಸಿಕೊಂಡಿವೆ. ಆದರೆ, ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಲೇಬೇಕು ಎಂಬ ಹಟಕ್ಕೆ ಬಿದ್ದಿರುವ ಕಾಂಗ್ರೆಸ್​ ಘಟಬಂಧನ ಸೇರಲು ನಿರಾಕರಿಸುತ್ತಿದೆ ಎಂದು ದೂರಿದರು. (ಏಜೆನ್ಸೀಸ್​)