ಕಾಂಗ್ರೆಸ್‌ಗೆ ಅಧಿಕಾರ ಖಚಿತ

ಶ್ರೀರಂಗಪಟ್ಟಣ: ಜಿಲ್ಲೆಯಲ್ಲಿ ಸುಮಲತಾ ಅಂಬರೀಷ್ ಪರವಾದ ಅಲೆಯಿದ್ದು, ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಇದು ಸಹಕಾರಿಯಾಗಲಿದೆ ಎಂದು ಮಾಜಿ ಶಾಸಕ ರಮೇಶ ಬಂಡಿಸಿದ್ಧೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಪುರಸಭೆ ವ್ಯಾಪ್ತಿಯ ಗಂಜಾಂನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಪ್ರಚಾರ ನಡೆಸುವ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ತೀರ್ಪಿನ ಮುಂದೆ ನಮ್ಮ ಲೆಕ್ಕಾಚಾರಗಳು ನಡೆಯುವುದಿಲ್ಲ ಎಂಬುದು ಲೋಕಾ ಫಲಿತಾಂಶದಿಂದ ಮನವರಿಕೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಎಚ್‌ಡಿಕೆ ಅಲೆಯಿಂದ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಅಧಿಕ ಮತಗಳಿಂದ ಜೆಡಿಎಸ್ ವಿಜಯ ಸಾಧಿಸಿತು. ಆದರೆ ಈ ಬಾರಿ ಜನರ ಒಲವು ಸುಮಲತಾ ಪರ ಇದೆ ಎಂದರು.

ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬುದು ಎಲ್ಲರ ಆಸೆ. ಆದರೆ ಅದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಮೈತ್ರಿ ಸರ್ಕಾರದಲ್ಲಿ ಮೇಲ್ಮಟ್ಟದ ತೀರ್ಮಾನಗಳನ್ನು ಪಕ್ಷದ ನಾಯಕರು ತೆಗೆದುಕೊಳ್ಳುತ್ತಾರೆ. ಪಕ್ಷದಲ್ಲಿನ ವಿಷಯಗಳಿಗೆ ಸಂಬಂಧಿಸಿದಂತೆ ತಿಳಿಸಿದ ಸೂಚನೆಗಳನ್ನು ನಾವು ಪಾಲಿಸುತ್ತೇವೆ ಎಂದು ಹೇಳಿದರು.

ಪಟ್ಟಣದ 23 ವಾರ್ಡ್‌ಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ನಡುವೆ ಶ್ರೀರಂಗಪಟ್ಟಣ ಮತ್ತು ಗಂಜಾಂನಲ್ಲಿ ಕಾಂಗ್ರೆಸ್ ಪರವಾದ ಒಲವು ಇದೆ. ಹೀಗಾಗಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಬಹುಮತದೊಂದಿಗೆ ಪುರಸಭೆಯಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದ್ದಾರೆ ಎಂದರು.

ಅಭ್ಯರ್ಥಿಗಳಾದ ಭೈರಪ್ಪ, ಸುವರ್ಣಲತಾ, ಮುಖಂಡರಾದ ನರಸಿಂಹಸ್ವಾಮಿ, ಟಿ.ಕೃಷ್ಣ, ಕಾಬೂಲ್, ನಿರಂಜನ್, ಸೋಮಶೇಖರ್, ಕುಮಾರ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *