ಐದು ಕ್ಷೇತ್ರಗಳಲ್ಲಿ ಆಪರೇಷನ್ ಹಸ್ತ

ಬೆಂಗಳೂರು: ಬಿಜೆಪಿ ನಡೆಸಿದ ಆಪರೇಷನ್ ಕಮಲದಿಂದ ಎದುರಾಗಿರುವ ಉಪಚುನಾವಣೆ ಗೆಲ್ಲುವುದಕ್ಕೆ ಕಾಂಗ್ರೆಸ್ ಆಪರೇಷನ್ ಹಸ್ತಕ್ಕೆ ಮುಂದಾಗಿದೆ. ಸಮರ್ಥ ಅಭ್ಯರ್ಥಿಗಳು ಇಲ್ಲದ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರನ್ನು ಕರೆತರುವ ಪ್ರಯತ್ನ ನಡೆದಿದೆ. ಈಗಾಗಲೇ ಐದು ಕ್ಷೇತ್ರಗಳಲ್ಲಿ ಈ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಹೊಸಕೋಟೆ, ಚಿಕ್ಕಬಳ್ಳಾಪುರ, ಹಿರೇಕೆರೂರು, ಯಲ್ಲಾಪುರ ಹಾಗೂ ಯಶವಂತಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಅಭ್ಯರ್ಥಿಗಳ ಕೊರತೆ ಇರುವುದರಿಂದ ಜೆಡಿಎಸ್ ಹಾಗೂ ಬಿಜೆಪಿಯಲ್ಲಿರುವ ಮುಖಂಡರಿಗೆ ಗಾಳ ಹಾಕಲಾಗಿದೆ. ಹೊಸಕೋಟೆಯಲ್ಲಿ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಪುತ್ರ ಶರತ್ ಕರೆತರುವ ಯತ್ನ ನಡೆದಿದೆ. ಅವರೊಂದಿಗೆ ಒಂದು ಸುತ್ತಿನ ಮಾತುಕತೆಯೂ ನಡೆದಿದೆ ಎಂಬ ಮಾತಿದೆ. ಸುಪ್ರೀಂಕೋಟ್ ತೀರ್ಪಿನ ನಂತರ ಎಂಟಿಬಿ ನಾಗರಾಜ್ ಮಗನಿಗೆ ಬಿಜೆಪಿ ಟಿಕೆಟ್ ಕೊಟ್ಟರೆ, ಶರತ್ ಕಾಂಗ್ರೆಸ್​ಗೆ ಬರಬಹುದೆಂಬ ನಿರೀಕ್ಷೆ ಪಕ್ಷದ ಮುಖಂಡರದ್ದಾಗಿದೆ. ಒಂದು ವೇಳೆ ಬರದಿದ್ದರೆ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಕಣಕ್ಕೆ ಇಳಿಸಲಾಗುತ್ತದೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ಹೋಗಿರುವ ಡಾ.ಕೆ.ಸುಧಾಕರ್ ಸೋಲಿಸಲು ಅವರಷ್ಟೇ ಪ್ರಭಾವಿಯಾದವರು ಅಂಜನಪ್ಪ. ಆದ್ದರಿಂದ ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಯಶವಂತಪುರದಲ್ಲಿ ಕಳೆದ ಚುನಾವಣೆಯಲ್ಲಿ ಎಸ್.ಟಿ. ಸೋಮಶೇಖರ್​ಗೆ ಸಮಬಲದ ಹೋರಾಟ ನೀಡಿದ್ದವರು ಜೆಡಿಎಸ್​ನ ಜವರಾಯಿ ಗೌಡ. ಈ ಬಾರಿ ಅವರನ್ನು ಕಾಂಗ್ರೆಸ್​ನಿಂದ ಸ್ಪರ್ಧಿಸುವಂತೆ ಮನವೊಲಿಸುವ ಕಾರ್ಯದಲ್ಲಿ ಕೈ ಮುಖಂಡರು ನಿರತರಾಗಿದ್ದಾರೆ. ಯಲ್ಲಾಪುರ ಕ್ಷೇತ್ರದಲ್ಲಿ ದೇಶಪಾಂಡೆ ಪುತ್ರ ಪ್ರಶಾಂತ್​ರನ್ನು ನಿಲ್ಲಿಸುವಂತೆ ಪಕ್ಷದ ಮುಖಂಡರು ಸೂಚಿಸುತ್ತಿದ್ದಾರೆ. ಆದರೆ ದೇಶಪಾಂಡೆ ಮಾಜಿ ಶಾಸಕ. ಬಿಜೆಪಿಯ ವಿ.ಎಸ್.ಪಾಟೀಲ್ ಕರೆ ತರಲು ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ನಡೆದಿದೆ. ಹಿರೆಕೆರೂರು ಕ್ಷೇತ್ರದಲ್ಲಿ ಬಿ.ಸಿ.ಪಾಟೀಲ್ ಎದುರು ಕಡಿಮೆ ಮತಗಳಿಂದ ಸೋತ ಬಿಜೆಪಿಯ ಯು.ಬಿ.ಬಣಕಾರ್ ಕಣಕ್ಕಿಳಿಸಲು ಕಾಂಗ್ರೆಸ್ ಮುಖಂಡರು ಪ್ರಯತ್ನ ನಡೆಸಿದ್ದಾರೆ. ಯು.ಬಿ.ಬಣಕಾರ್ ತಂದೆ ಬಿ.ಜಿ.ಬಣಕಾರ್ ಜನತಾ ಪರಿವಾರದವರು. ಆ ಸಂಬಂಧಗಳ ಮೂಲಕ ಕಾಂಗ್ರೆಸ್​ನಲ್ಲಿರುವ ಜನತಾ ಪರಿವಾರ ಮೂಲದ ಮುಖಂಡರು ಯು.ಬಿ.ಬಣಕಾರ್​ಗೆ ಗಾಳ ಹಾಕಿದ್ದಾರೆ. ಆದರೆ ಬಣಕಾರ್ ಈ ಹಿಂದೆಯೇ ಬಿಜೆಪಿ ಬಿಡುವುದಿಲ್ಲವೆಂದು ಹೇಳಿದ್ದಾರೆ.

Leave a Reply

Your email address will not be published. Required fields are marked *