ಗೌಡರಿಂದಲೇ ಕಾಂಗ್ರೆಸ್ ಮುಕ್ತ ಭಾರತ

ಚಾಮರಾಜನಗರ: ಮೈತ್ರಿ ನೆಪದಲ್ಲಿ ಮಾಜಿ ಪ್ರಧಾನಿ ದೇವೇಗೌಡರೇ ಕಾಂಗ್ರೆಸ್ ಮುಕ್ತ ಭಾರತ ಮಾಡಲಿದ್ದಾರೆ ಎಂದು ಬಿಜೆಪಿ ರೇಷ್ಮೆ ಬೆಳೆಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಸಿ.ವಿ.ಲೋಕೇಶ್‌ಗೌಡ ಹೇಳಿದರು.

ನಗರದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ನೇಮಕ ಹಂಚಿಕೆ ವಿಚಾರದಲ್ಲಿ ಕಿತ್ತಾಡುವ ಮೂಲಕ ಮೈತ್ರಿ ನಾಯಕರು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿಮಾಡಿಕೊಂಡಿದ್ದು, ಇದು ಬಿಜೆಪಿ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.

ರೇಷ್ಮೆಯು ಅತ್ಯಂತ ಲಾಭದಾಯಕ ಬೆಳೆಯಾಗಿದೆ. ದೇಶದಲ್ಲಿ ರೇಷ್ಮೆ ಬೆಳೆ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರವು 2161 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಆದರೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ರೇಷ್ಮೆ ಬೆಳೆಗಾರರ ಉತ್ತೇಜನಕ್ಕಾಗಿ 437 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಇದರಲ್ಲಿ 200 ಕೋಟಿ ರೂ. ಹಣ ಸಿಬ್ಬಂದಿ ಸಂಬಳಕ್ಕೆ ಹೋಗಲಿದೆ ಎಂದು ತಿಳಿಸಿದರು.

ಜಿಲ್ಲೆಯ ರೇಷ್ಮೆ ಬೆಳೆಗಾರರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಮತ್ತೊಮ್ಮೆ ನರೇಂದ್ರಮೋದಿ ಅವರನ್ನು ಪ್ರಧಾನಿಯಾಗಿ ಮಾಡಲು ಶ್ರಮಿಸಬೇಕು ಎಂದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಎಚ್.ಎಂ.ಬಸವಣ್ಣ, ಚಾಮುಲ್ ನಿರ್ದೇಶಕ ಮಲೆಯೂರು ರವಿಶಂಕರ್, ರೇಷ್ಮೆ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಮಹೇಶ್, ಸಹ ಸಂಚಾಲಕ ಮಹದೇವಸ್ವಾಮಿ, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಶಿವರುದ್ರಸ್ವಾಮಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಂ.ಎಸ್.ಫೃಥ್ವಿರಾಜ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಚಂದ್ರಶೇಖರ್‌ರಾವ್ ಇತರರಿದ್ದರು.