ಬೆಳಗಾವಿ: ಕಾಂಗ್ರೆಸ್‌ಗೆ ಹಿಂದೂಗಳ ಮೇಲೆ ನಂಬಿಕೆ ಇಲ್ಲ

ಬೆಳಗಾವಿ: ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ ಗಾಂಧಿಗೆ ಹಿಂದೂಗಳ ಮೇಲೆ ನಂಬಿಕೆ ಇಲ್ಲ. ಹಾಗಾಗಿಯೇ ಮುಸ್ಲಿಂ, ಕ್ರಿಶ್ಚಿಯನ್ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕೇರಳದ ವಯನಾಡಿನಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದರು.

ನಗರದ ಜಿಲ್ಲಾಧಿಕಾರಿ ಆವರಣದಲ್ಲಿ ಗುರುವಾರ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅವರು ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರ ಪ್ರದೇಶ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಸೋಲುವ ಭಯದಿಂದಾಗಿ ವಯನಾಡಿನಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎಂದರು.

ದೇಶದಲ್ಲಿ 65 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಮತ್ತು ನಾಯಕರು ಬಹುಸಂಖ್ಯಾತ ಹಿಂದೂಗಳ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ. ಮತಕ್ಕಾಗಿ ಮಾತ್ರ ಹಿಂದೂಗಳ ದೇವಸ್ಥಾನಕ್ಕೆ ಹೋಗುತ್ತಿದ್ದಾರೆಯೇ ಹೊರತು ಅಭಿಮಾನ, ಭಕ್ತಿಯಿಂದ ಅಲ್ಲ. ಅಧಿಕಾರಕ್ಕಾಗಿ ಮಾತ್ರ ಕಾಂಗ್ರೆಸ್ ನಾಯಕರು ಹಿಂದೂಗಳ ಪರ ಜಪ ಮಾಡುತ್ತಿದ್ದಾರೆ. ಅಧಿಕಾರ ಸಿಕ್ಕ ಬಳಿಕ ಹಿಂದೂ ವಿರೋಧ ಆಡಳಿತ ನಡೆಸಿಕೊಂಡು ಬರುತ್ತಿದ್ದಾರೆ. ಇಂತಹ ಪಕ್ಷದ ಸರ್ಕಾರ ನಮಗೆಲ್ಲ ಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿರುಗಾಳಿ ಎದ್ದಿದೆ. ಎಐಸಿಸಿ ಅಧ್ಯಕ್ಷ ರಾಹುಲ ಗಾಂಧಿ ಜತೆಗೆ ಕಾಂಗ್ರೆಸ್ ಅಭ್ಯರ್ಥಿಗಳು ಸೋಲಿನ ಭಯದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧೆಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ದೇಶದ ವಿವಿಧ ಭಾಗಗಳಲ್ಲಿ ಹುಟ್ಟಿಕೊಂಡಿರುವ ಮಹಾಘಟ್‌ಬಂಧನ, ಪ್ರಾದೇಶಿಕ ಪಕ್ಷಗಳ ಒಕ್ಕೂಟವು ಚುನಾವಣೆ ಮೊದಲು ಹರಿದು ಹಂಚಿ ಹೋಗುತ್ತಿದೆ. ಈಗಾಗಲೇ ಪಶ್ಚಿಮ ಬಂಗಾಲ, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಮುಖ್ಯಮಂತ್ರಿಗಳು ರಾಹುಲ್ ಗಾಂಧಿ ಅವರನ್ನು ಬಚ್ಚಾ, ಅಮುಲ್ ಬೇಬಿ ಎಂದು ವ್ಯಂಗ್ಯ ಮಾಡುತ್ತಿದ್ದಾರೆ ಎಂದರು.

ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಆನಂದ ಮಾಮನಿ, ಅಭಯ ಪಾಟೀಲ, ಅನಿಲ ಬೆನಕೆ, ಮಹಾದೇವಪ್ಪ ಯಾದವಾಡ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ನಗರಾಧ್ಯಕ್ಷ ರಾಜೇಂದ್ರ ಹರಕುಣಿ, ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಪಾಟೀಲ ಇನ್ನಿತರರು ಇದ್ದರು.

ರಾಜ್ಯದಲ್ಲಿ ಜೆಡಿಎಸ್ ಮೊದಲು ಅಪ್ಪ, ಮಕ್ಕಳ ಪಕ್ಷವಾಗಿತ್ತು. ಇದೀಗ ಅಪ್ಪ, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರ ಪಕ್ಷವಾಗಿದೆ. ಜೆಡಿಎಸ್‌ನ ಕಾರ್ಯಕರ್ತರಿಗೆ ಅವರ ನಾಯಕರ ಮೇಲೆ ನಂಬಿಕೆ ಇಲ್ಲ. ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲವು ಐತಿಹಾಸಿಕವಾಗಲಿದೆ. ದೇವೇಗೌಡರು ತುಮಕೂರು ಲೋಕಸಭಾ ಕ್ಣೇತ್ರದಿಂದ ಸ್ಪರ್ಧೆ ಮಾಡಿರುವುದರಿಂದ ಮನೆಗೆ ಹೋಗುವುದು ನಿಶ್ಚಿತ.
|ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ

ಕಾಂಗ್ರೆಸ್ ನಾಯಕರು ಮತಕ್ಕಾಗಿ ದೇವಸ್ಥಾನಗಳಿಗೆ ಓಡಾಡುತ್ತಿದ್ದಾರೆಯೇ ಹೊರತು ಹಿಂದೂ ಸಮುದಾಯಗಳ ರಕ್ಷಣೆಗಾಗಿ ಆಲ್ಲ. ಕಾಂಗ್ರೆಸ್ ನಾಯಕರಿಗೆ ಹಿಂದೂಗಳ ಮೇಲೆ ವಿಶ್ವಾಸ ಇಲ್ಲ. ಹಾಗಾಗಿಯೇ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಕೇರಳದ ವಯನಾಡಿನಿಂದ ಸ್ಪರ್ಧಿಸುತ್ತಿದ್ದಾರೆ.
|ಡಾ.ಪ್ರಭಾಕರ ಕೋರೆ, ರಾಜ್ಯಸಭಾ ಸದಸ್ಯ