ಕಾಂಗ್ರೆಸ್ ಹೈಕಮಾಂಡ್ ಸೂಕ್ಷ್ಮ ಗಮನ; ಸಪ್ತ ಸಚಿವರ ಮೇಲೆ ತೂಗುಗತ್ತಿ, ಡಿಸೆಂಬರ್​ನಲ್ಲಿ ಗೇಟ್​ಪಾಸ್?

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಸಂಪುಟದ ಏಳು ಸಚಿವರಿಗೆ ಗೇಟ್​ಪಾಸ್ ನೀಡಲು ಚಿಂತಿಸಿದ್ದು, ಕಾರ್ಯವೈಖರಿ ತಿದ್ದಿಕೊಳ್ಳಲು ಡಿಸೆಂಬರ್​ವರೆಗೆ ಅವಕಾಶ ನೀಡಿದೆ. ಸಚಿವರನ್ನು ಸಂಪುಟದಿಂದ ಕೈಬಿಡಬೇಕೆಂದು ಪಟ್ಟಿಮಾಡಿಕೊಂಡಿದ್ದ ಹೈಕಮಾಂಡ್, ಸಿದ್ದರಾಮಯ್ಯ ಅವರ ವಿಶೇಷ ಕೋರಿಕೆ ಮೇರೆಗೆ ಎರಡು ತಿಂಗಳ ಕಾಲಾವಕಾಶ ನೀಡಿದೆ ಎಂದು ಪಕ್ಷದ ಉನ್ನತ ಮೂಲಗಳು ಖಚಿತಪಡಿಸಿವೆ.

ಸಚಿವರು ಕಾರ್ಯಕರ್ತರು, ಮುಖಂಡರಿಗೆ ಕೆಲಸ ಮಾಡಿಕೊಡುತ್ತಿಲ್ಲ. ಆಡಳಿತ ಪಕ್ಷದ ಶಾಸಕರಿಗೂ ಸಹಕಾರ ನೀಡುತ್ತಿಲ್ಲ ಎಂಬ ದೂರು ದೆಹಲಿ ನಾಯಕರ ಕಿವಿಗೆ ಮುಟ್ಟಿತ್ತು. ಜತೆಗೆ ಸಚಿವರ ಒಂದು ವರ್ಷದ ಸಾಧನೆ ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಹೈಕಮಾಂಡ್ ಮಾಪನ ಮಾಡಿತ್ತು. ರಾಜ್ಯ ನಾಯಕರಿಗೆ ಅಚ್ಚರಿಯಾಗುವಂತೆ ಯಾವೆಲ್ಲ ಸಚಿವರನ್ನು ಕೈಬಿಡಬೇಕೆಂದು ಪಟ್ಟಿಯನ್ನೂ ಮಾಡಿಕೊಂಡಿದ್ದರು. ಈ ಮೂಲಕ ರಾಜ್ಯ ನಾಯಕರೊಂದಿಗೆ ಈ ವಿಚಾರ ರ್ಚಚಿಸಿ ನಿರ್ಣಯ ಕೈಗೊಳ್ಳುವ ಬದಲು ತಾವೇ ಇಂಚಿಂಚು ಮಾಹಿತಿ ಕಲೆಹಾಕಿದ್ದರು.

ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಲೀಡ್ ಕೊಡಿಸುವುದಿರಲಿ ತಾವು ಶಾಸಕರಾಗಿರುವ ಕ್ಷೇತ್ರದಲ್ಲೇ ಲೀಡ್ ಕೊಡಿಸಲು ಸಾಧ್ಯವಾಗದಿರುವುದನ್ನೂ ದೆಹಲಿ ನಾಯಕರು ಗಂಭೀರವಾಗಿ ಪರಿಗಣಿಸಿದ್ದರು. ಅಷ್ಟೇ ಅಲ್ಲದೆ, ಕೆಲವು ಸಚಿವರ ವಿರುದ್ಧ ಸ್ವಪಕ್ಷೀಯರೇ ಗುರುತರ ಆರೋಪ ಮಾಡಿದ್ದೂ ಇದೆ. ಹಾಗೆಯೇ, ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಸರ್ಕಾರದ ಇಮೇಜ್ ಹೆಚ್ಚಳಕ್ಕೆ ಪ್ರಯತ್ನಿಸಿಲ್ಲ. ಇಲಾಖೆಯಲ್ಲಿ ಗಮನ ಸೆಳೆಯುವ ಕೆಲಸ ಮಾಡಲಿಲ್ಲ. ಜನ ಸಾಮಾನ್ಯರ ಹೊರತು ಸ್ವಂತ ಪಕ್ಷದ ಕಾರ್ಯಕರ್ತರ ವಿಶ್ವಾಸವನ್ನೂ ಗಳಿಸಲಿಲ್ಲ ಎಂಬುದನ್ನು ಹೈಕಮಾಂಡ್ ಸ್ಪಷ್ಟವಾಗಿ ಗುರುತಿಸಿತ್ತು.

ದೆಹಲಿ ನಾಯಕರ ಪ್ರಕಾರ ಆಗಸ್ಟ್ ಕೊನೇ ಅಥವಾ ಸೆಪ್ಟೆಂಬರ್ ಆರಂಭದಲ್ಲೇ ಸಂಪುಟ ಪುನಾರಚನೆ ಆಗಬೇಕಿತ್ತು. ಏಳು ಸಚಿವರಿಗೆ ಕೊಕ್ ನೀಡಿ, ಖಾಲಿ ಇರುವ ಒಂದು ಸ್ಥಾನ ಸೇರಿ ಎಂಟು ಅರ್ಹರಿಗೆ ಜಾತಿ, ಸಮುದಾಯ, ಪ್ರದೇಶವಾರು ಹಾಗೂ ಪಕ್ಷಕ್ಕೆ ಕೊಡುಗೆ ಪರಿಗಣಿಸುವುದು ಮತ್ತು ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ನೀಡಿದ ಭರವಸೆಯಂತೆ ಸಂಪುಟಕ್ಕೆ ಸೇರಿಸಿಕೊಳ್ಳಲು ಸೂತ್ರವನ್ನೂ ಸಿದ್ಧಪಡಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ವಾತಾವರಣದಲ್ಲಿ ಸಂಪುಟ ಪುನಾರಚನೆ ಮಾಡಿದರೆ ಬೇರೆ ಸಂದೇಶ ಹೋಗಲಿದೆ. ಎರಡು ತಿಂಗಳು ಕಾಲಾವಕಾಶ ಕೊಟ್ಟು ನೋಡಿ ಎಂದು ಹೈಕಮಾಂಡ್ ಮನವೊಲಿಸುವಲ್ಲಿ ಸಫಲರಾದರೆಂದು ಮೂಲಗಳು ಖಚಿತಪಡಿಸಿವೆ.

ಸರ್ಕಾರದ ಒಂದು ವರ್ಷ ಪೂರ್ಣಗೊಂಡ ಬಳಿಕ ಹಾಗೂ ವಾಲ್ಮೀಕಿ ನಿಗಮದ ಪ್ರಕರಣ, ಮುಡಾ ನಿವೇಶನ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಸಂಪುಟ ಪುನಾರಚಿಸುವುದು ಸೂಕ್ತವಲ್ಲ ಎಂಬುದು ಸಿಎಂ ವಾದವಾಗಿತ್ತು. ಇದೀಗ ಎಲ್ಲ ಸಚಿವರ ಕಾರ್ಯವೈಖರಿಯನ್ನು ಹೈಕಮಾಂಡ್ ಅವಲೋಕಿಸುತ್ತಿದೆ. ಡಿಸೆಂಬರ್ ವೇಳೆ ವಾತಾವರಣ ತಿಳಿಯಾದರೆ ಪುನಾರಚನೆ ಮಾಡಲು ಹೈಕಮಾಂಡ್ ಉತ್ಸುಕವಾಗಿದೆ. ಆದರೆ, ಮುಖ್ಯಮಂತ್ರಿ ಕಚೇರಿ ಪ್ರಕಾರ ಮಾರ್ಚ್​ವರೆಗೂ ಸಂಪುಟ ಪುನಾರಚನೆ ಅಸಾಧ್ಯ ಎಂಬ ವಾದವಿದೆ.

ತಲೆದಂಡ ಯಾಕೆ ?

1. ಸರ್ಕಾರದ ಇಮೇಜ್ ಹೆಚ್ಚಿಸುವ ಕೆಲಸ ಮಾಡುತ್ತಿಲ್ಲ

2. ಪಕ್ಷದ ಮುಖಂಡರೂ, ಶಾಸಕರ ವಿಶ್ವಾಸವನ್ನೂ ಗಳಿಸುತ್ತಿಲ್ಲ

3. ಸರ್ಕಾರದ ನೀತಿ ನಿಲುವು ಸಂಬಂಧವೇ ಇಲ್ಲ ಎಂಬಂತಿರುವುದು

4. ಸ್ವ-ಕ್ಷೇತ್ರದಲ್ಲೂ ಜನ ಮನ್ನಣೆ ಕಳೆದು ಕೊಳ್ಳುತ್ತಿರುವುದು

5. ಅರ್ಹ ಹೊಸಬರಿಗೆ ಅವಕಾಶ ಮಾಡಿ ಕೊಡುವುದು

ಕಾರ್ಯಕರ್ತರ ಆಕ್ರೋಶಕ್ಕೆ ತಬ್ಬಿಬ್ಬು

ಬೆಂಗಳೂರು: ವಿವಿಧ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕ ವಿಚಾರವಾಗಿ ಕಾಂಗ್ರೆಸ್​ನೊಳಗಿನ ಅಸಮಾಧಾನ ಸ್ಪೋಟಗೊಂಡಿದೆ. ಪಕ್ಷದ ಸೂಚನೆಯಂತೆ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಲು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗಮಿಸಿದ್ದರು. ಈ ವೇಳೆ ಸಿಂಡಿಕೇಟ್ ಸದಸ್ಯರ ನೇಮಕ ವಿಚಾರ ಪ್ರಸ್ತಾಪವಾಗಿ ಗದ್ದಲದ ಸ್ವರೂಪ ಪಡೆದುಕೊಂಡಿತು.

ಸಮಿವುಲ್ಲಾ ಎಂಬುವರು ಬಹಿರಂಗ ಆಕ್ರೋಶ ಹೊರಹಾಕಿದರೆ ಇತರ ಕಾರ್ಯಕರ್ತರು ದನಿಗೂಡಿಸಿದರು. ಸಿಂಡಿಕೇಟ್ ಸದಸ್ಯರ ನೇಮಕಾತಿ ವೇಳೆ ಆರೆಸ್ಸೆಸ್, ಬಿಜೆಪಿ ಸದಸ್ಯರಿಗೆ ಮಣೆ ಹಾಕಲಾಗಿದೆ ಎಂಬುದು ಆರೋಪವಾಗಿತ್ತು. ಅನಿರೀಕ್ಷಿತವಾಗಿ ಎದುರಾದ ಈ ಸನ್ನಿವೇಶದಲ್ಲಿ ತಡಬಡಿಸುತ್ತಲೇ ಸಚಿವರು ಸಮಜಾಯಿಷಿ ನೀಡಲು ಮುಂದಾದಾಗ ಕಾರ್ಯಕರ್ತರು ಇನ್ನಷ್ಟು ಕೆರಳಿದರು. ‘ನಾನು ಯಾವ ನೇಮಕಾತಿಯನ್ನು ನೇರವಾಗಿ ಮಾಡಿಲ್ಲ. ಮುಖ್ಯಮಂತ್ರಿಗಳ ಕಚೇರಿ ವಿವೇಚನೆ ಮೇಲೆಯೇ ತೀರ್ಮಾನ ಮಾಡಲಾಗಿದೆ. ನಿಮಗೆ ಸಂಶಯ ಇದ್ದರೆ ನೇರವಾಗಿ ಮುಖ್ಯಮಂತ್ರಿಗಳಲ್ಲಿ ಮಾತನಾಡಿ’ ಎಂದು ಸುಧಾಕರ್ ಸಮರ್ಥನೆಗೆ ನಿಂತರು.

ಸಚಿವರ ಮಾತಿಗೆ ಸಮಾಧಾನಗೊಳ್ಳದೆ ಟೇಬಲ್ ಕುಟ್ಟಿ ಆಕ್ರೋಶ ಹೊರಹಾಕಿದ ಕಾರ್ಯಕರ್ತರು, ಹೊಸದಾಗಿ ನೇಮಿಸಿ ನಮ್ಮಲ್ಲಿರುವ ಅರ್ಹರಿಗೆ ಅವಕಾಶ ಕೊಡಿ ಎಂದು ಪಟ್ಟುಹಿಡಿದರು. ನೇಮಕದ ಸಂಬಂಧ ಕಾಣಿಸಿಕೊಂಡಿರುವ ಬೇಸರ ವಿಚಾರವಾಗಿ ಪ್ರತಿಕ್ರಿಯಿಸಿದ ಸುಧಾಕರ್, ಪಕ್ಷದ ವೇದಿಕೆಯಲ್ಲೂ ಇದನ್ನು ಹೇಳಿದ್ದಾರೆ. ಪ್ರತಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರ ನೇಮಕದ ಸಂದರ್ಭದಲ್ಲಿ 6 ಮಂದಿಗೆ ಮಾತ್ರ ಅವಕಾಶ ಇರುತ್ತದೆ. ಕೆಲವು ವಿವಿಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ರಾಜ್ಯಪಾಲರು ಹಿಂದೆ ಮಾಡಿದ ನೇಮಕವನ್ನು ನಾವು ಪ್ರಶ್ನೆ ಮಾಡಲು ಹೋಗುವುದಿಲ್ಲ ಎಂದರು. ನಮ್ಮ ಇಲಾಖೆ ಮೇಲೆ ಬಹಳಷ್ಟು ಒತ್ತಡವಿದೆ, ಸಿಎಂ ಮೇಲೆಯೂ ಸಾಕಷ್ಟು ಒತ್ತಡ ಇತ್ತು. ಕಡತ ಪೂರ್ತಿ ಸಿಎಂ ಕಚೇರಿಗೆ ರವಾನಿಸಿದ್ದೆವು. ಸಿಎಂ ಅಳೆದು ತೂಗಿ ನೇಮಕ ಮಾಡಿದ್ದಾರೆ ಎಂದರು.

ಮಧು ಬಂಗಾರಪ್ಪ ಮಾತನಾಡಿ, ನಾನು ಜೆಡಿಎಸ್​ನಿಂದ ಬಂದವನು. ನನ್ನಿಂದ ಕೆಲವರು ಬರುತ್ತಾರೆ. ಅವರು ಹಿರಿಯರಾಗಿದ್ದು ಅವರಿಗೂ ಅವಕಾಶ ಕೊಡಬೇಕಾಗುತ್ತದೆ. ಹಾಗಂತ ಅವರು ಜೆಡಿಎಸ್​ನವರು ಅನ್ನೋಕೆ ಆಗುತ್ತಾ ಎಂದು ಪ್ರಶ್ನಿಸಿದರು.

ಬಿಜೆಪಿ, ಆರೆಸ್ಸೆಸ್​ನವರನ್ನು ಸಿಂಡಿಕೇಟ್​ಗೆ ನೇಮಕ ಮಾಡಲಾಗಿದೆ ಎಂದು ಪಕ್ಷದ ಪದಾಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಬೇರೆ ಸಿದ್ಧಾಂತದ ಬಗ್ಗೆ ಸಹಾನೂಭೂತಿ ಹೊಂದಿದವರು ನೇಮಕವಾಗಿರುವ ಬಗ್ಗೆ ರ್ಚಚಿಸಲು ಮುಂದಿನವಾರ ಸಭೆ ಕರೆಯ ಲಾಗಿದೆ. ಒಂದು ವೇಳೆ ಅಂತಹ ತೀರ್ಮಾನ ಆಗಿದ್ದರೆ ಸಿಎಂ ಗಮನಕ್ಕೆ ತರಲಾಗುವುದು.

| ಎಂ.ಸಿ.ಸುಧಾಕರ್ ಉನ್ನತ ಶಿಕ್ಷಣ ಸಚಿವ

ಸುಳ್ಳಿನ‌ ಸರದಾರರ ಪಿತೂರಿ, ಷಡ್ಯಂತ್ರಗಳಿಗೆ ತಲೆ ಒತ್ತೆ ಇಡಬೇಡಿ: ಸಿಎಂ ಸಿದ್ದರಾಮಯ್ಯ

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…