ಕಾಂಗ್ರೆಸ್​ ಹೈಕಮಾಂಡ್​​ಗೆ ಕರ್ನಾಟಕ ಎಟಿಎಂ ಇದ್ದಂತೆ: ಜಗದೀಶ ಶೆಟ್ಟರ್​

ಹುಬ್ಬಳ್ಳಿ: ಕೆಲ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್​ ಹೈಕಮಾಂಡ್​​ಗೆ ಕರ್ನಾಟಕ ರಾಜ್ಯ ಎಟಿಎಂ ಇದ್ದಂತೆ. ಕಾಂಗ್ರೆಸ್ ಹೈಕಮಾಂಡ್​ಗೆ ಇಲ್ಲಿಂದಲೇ ಹಣ ಹೋಗತ್ತೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್​ ಗಂಭೀರ ಆರೋಪ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೈಕಮಾಂಡ್​ಗೆ ಸಹಾಯವಾಗಲಿ ಎಂಬ ಕಾರಣಕ್ಕೆ ಸಮ್ಮಿಶ್ರ ಸರ್ಕಾರ ಇನ್ನೂ ಜೀವಂತವಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರವಿದ್ದಾಗಲೂ ರಾಜ್ಯ ಎಟಿಎಮ್ ಆಗಿತ್ತು. ಮುಂದುವರಿದ ಭಾಗವಾಗಿ ಈಗ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದೆ ಎಂದರು.

ಸಂಪುಟ ವಿಸ್ತರಣೆಗೆ ಆಸಕ್ತಿಯಿಲ್ಲ
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ಉಪಚುನಾವಣೆ ಆದ ಮೇಲೂ ಸಚಿವ ಸಂಪುಟ ವಿಸ್ತರಣೆಯಾಗಲ್ಲ. ಸಚಿವ ಸಂಪುಟ ವಿಸ್ತರಣೆಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಆಸಕ್ತಿಯೇ ಇಲ್ಲ. ಮಾಡದಿದ್ದರೆ ಅಸಮಾಧಾನ ಹೆಚ್ಚಾಗುತ್ತೆ. ಹಾಗಾಗಿ ಸಮಾಧಾನ ಮಾಡುವ ಉದ್ದೇಶದಿಂದ ಹೀಗೆ ವಿಸ್ತರಣೆ ಮಾಡೋದಾಗಿ ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಉಪ ಚುನಾವಣೆ ಆದ ಮೇಲೂ ಸಚಿವ ಸಂಪುಟ ವಿಸ್ತರಣೆಯಾಗುವುದಿಲ್ಲ. ಲೋಕಸಭಾ ಚುನಾವಣೆವರೆಗೂ ಹೀಗೆ ಮಾಡುತ್ತಾರೆ. ಸರ್ಕಾರ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ನಾನು ಈ ಹಿಂದೆಯೇ ಸಚಿವ ಸಂಪುಟ ಸಂಪುಟ ವಿಸ್ತರಣೆಯಾಗುವುದಿಲ್ಲ ಎಂದು ಹೇಳಿದ್ದೆ. ಈ ಮಾತು ನಿಜವಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಕ್ಷೇತ್ರಕ್ಕೇ ರಾಜ್ಯದಿಂದ ಸ್ಪರ್ಧೆ ವಿಚಾರವಾಗಿ ಮಾತನಾಡಿ, ರಾಜ್ಯದಿಂದ ಸ್ಪರ್ಧೆ ಮಾಡುವ ಕುರಿತಂತೆ ನಮಗೆ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಪಕ್ಷದಲ್ಲೂ ಈ ಕುರಿತಂತೆ ಚರ್ಚೆಯಾಗಿಲ್ಲ ಎಂದರು. (ದಿಗ್ವಿಜಯ ನ್ಯೂಸ್​)