More

    ಕೈ ಟಿಕೆಟ್‌ಗೆ ಚಂದ್ರಮೌಳಿ, ಹರಪಳ್ಳಿ, ಮಂಥರ್ ಲಾಬಿ

    ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
    ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮೂವರು ಪ್ರಬಲ ಆಕಾಂಕ್ಷಿಗಳು ಉನ್ನತಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.

    ಕಳೆದ ಎಂಎಲ್‌ಎ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶದಿಂದ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿಸಿಕೊಂಡಿದ್ದ ಹೈಕೋರ್ಟ್ ಹಿರಿಯ ವಕೀಲರಾದ ಎಚ್.ಎಸ್. ಚಂದ್ರಮೌಳಿ, ಕರ್ನಾಟಕ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷರಾಗಿರುವ ಕೊಡುಗೈ ದಾನಿ ಹರಪಳ್ಳಿ ರವೀಂದ್ರ, ವಿಧಾನ ಪರಿಷತ್ ಚುನಾವಣೆಯಲ್ಲಿ ಪರಾಭವಗೊಂಡಿರುವ ಡಾ.ಮಂಥರ್ ಗೌಡ ಕಾಂಗ್ರೆಸ್ ಟಿಕೆಟ್‌ಗಾಗಿ ಉನ್ನತಮಟ್ಟದಲ್ಲಿ ತೀವ್ರ ಪ್ರಯತ್ನದಲ್ಲಿ ತೊಡಗಿದ್ದಾರೆ.

    ಕೊಡಗಿನಲ್ಲಿ ಅತಿ ಹೆಚ್ಚು ಚುನಾವಣೆಯಲ್ಲಿ ಸ್ಪರ್ಧಿಸಿದ ದಾಖಲೆ ನಿರ್ಮಿಸಿರುವ ಮಾಜಿ ಸಚಿವ ಬಿ.ಎ. ಜೀವಿಜಯ, ಕಳೆದ ಚುನಾವಣೆ ಯಲ್ಲಿ ಸ್ಪರ್ಧಿಸಿ ಸೋಲು ಕಂಡಿರುವ ಕಾಂಗ್ರೆಸ್ ಹಿರಿಯ ನಾಯಕಿಯಾಗಿರುವ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಹಾನಗಲ್, ಸೋಮವಾರಪೇಟೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

    ಕಾಂಗ್ರೆಸ್ ವರಿಷ್ಠ ನಾಯಕರೊಂದಿಗೆ ಆತ್ಮೀಯ ಒಡನಾಟ ಹೊಂದಿರುವ ಎಚ್.ಎಸ್. ಚಂದ್ರಮೌಳಿ ಈ ಬಾರಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ದ್ದಾರೆ. ಕಳೆದ ಬಾರಿ ಬಹುತೇಕ ಟಿಕೆಟ್ ಖಾತ್ರಿಯಾಗಿತ್ತು. ಚಂದ್ರಮೌಳಿ ವಿರುದ್ಧ ಎಐಸಿಸಿ ವಕ್ತಾರರಾಗಿದ್ದ ಬ್ರಿಜೇಶ್ ಕಾಳಪ್ಪ ವರಿಷ್ಠರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಟಿಕೆಟ್ ಕೈತಪ್ಪಿತ್ತು.

    ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨೫ ಸಾವಿರ ವೀರಶೈವ- ಲಿಂಗಾಯಿತ ಮತದಾರರಿದ್ದಾರೆ. ಕೊಡಗು ರಾಜ್ಯವಾಗಿದ್ದ ಸಂದರ್ಭ ಲಿಂಗಾಯಿತ ಸಮುದಾಯದಿಂದ ಮಲ್ಲಪ್ಪ ಗೆದ್ದಿರುವುದು ಹೊರತು ಪಡಿಸಿದ್ದಂತೆ ಲಿಂಗಾಯಿತರಿಗೆ ಅವಕಾಶ ಸಿಗಲಿಲ್ಲ ಎಂಬ ಕೊರಗು ಇದೆ.

    ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೧.೭೫ ಲಕ್ಷದಷ್ಟು ವೀರಶೈವ- ಲಿಂಗಾಯಿತ ಮತದಾರರಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ೮ ಕ್ಷೇತ್ರದ ಪೈಕಿ ಮಡಿಕೇರಿ ಕ್ಷೇತ್ರದಲ್ಲಿ ಮಾತ್ರ ಲಿಂಗಾಯಿತ ಸಮುದಾಯಕ್ಕೆ ಸೇರಿದ ತಮಗೆ ಲಿಂಗಾಯಿತ ಕೋಟಾದಡಿ ಟಿಕೆಟ್ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಚಂದ್ರಮೌಳಿ ಇದ್ದಾರೆ.

    ಕರ್ನಾಟಕ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷರು ಹಾಗೂ ಖರೀದಿ ಸಮಿತಿ ಅಧ್ಯಕ್ಷರಾಗಿರುವ ಕೊಡುಗೈ ದಾನಿ ಹರಪಳ್ಳಿ ರವೀಂದ್ರ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನ ನಡೆಸುತ್ತಿದ್ದಾರೆ. ಕಳೆದೆರಡು ದಶಕದಿಂದ ಶಿಕ್ಷಣ, ಆರೋಗ್ಯ, ಕ್ರೀಡೆ ಸೇರಿದ್ದಂತೆ ವಿವಿಧ ಚಟುವಟಿಕೆಗಳಿಗೆ ಜಾತಿ, ಧರ್ಮ ರಹಿತವಾಗಿ ಕೋಟ್ಯಂತರ ರೂಪಾಯಿ ನೆರವು ಒದಗಿಸಿದ್ದಾರೆ.

    ಮಡಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿರುವುದು ಹಾಗೂ ಸರ್ವ ಜನಾಂಗದವರು ತನ್ನ ಬೆಂಬಲಿಕ್ಕೆ ನಿಂತಿರುವುದರಿಂದ ತನಗೆ ಟಿಕೆಟ್ ಸಿಕ್ಕಲ್ಲಿ ಕಾಂಗ್ರೆಸ್‌ಗೆ ಒಂದು ಎಂಎಲ್‌ಎ ಸ್ಥಾನ ನಿಶ್ಚಿತ ಎಂದು ಹರಪಳ್ಳಿ ರವೀಂದ್ರ ತಮ್ಮ ಆತ್ಮೀಯರಲ್ಲಿ ಹೇಳುತ್ತಿದ್ದಾರೆ. ಬಿಜೆಪಿ ಅಥವಾ ಪಕ್ಷೇತರರಾಗಿ ಸ್ಪರ್ಧಿಸುವಂತೆ ಅವರ ಹಲವು ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

    ಸೋಲಿನ ನಡುವೆಯೂ ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ನೀಡಿದ ಡಾ.ಮಂಥರ್ ಗೌಡ ಮಡಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಮಿಂಚಿನಂತೆ ಸಂಚರಿಸುತ್ತಿರುವುದು ಹಳೆಯ ಹುಲಿಗಳಲ್ಲಿ ಚಡಪಡಿಕೆ ಹುಟ್ಟುಹಾಕಿದೆ. ವಿವಿಧ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿ
    ರುವುದು ಟಿಕೆಟ್ ಆಕಾಂಕ್ಷಿಗಳಲ್ಲಿ ರಾಜಕೀಯ ಭವಿಷ್ಯ ಮಂಕಾಗುವ ಕಳವಳ ಮೂಡಿಸಿದೆ.

    **
    ವಿಧಾನ ಪರಿಷತ್ ಚುನಾವಣೆಯಲ್ಲಿ ಕೊಡಗಿನ ಜನಪ್ರತಿನಿಧಿಗಳು ನನಗೆ ದೊಡ್ಡ ಮಟ್ಟದ ಬೆಂಬಲ ನೀಡಿದ್ದರು. ಗೆಲುವು ಸಾಧಿಸದಿದ್ದರೂ, ಗೆಲುವಿನ ಸನಿಹಕ್ಕೆ ಬಂದಿದ್ದೇನೆ. ಮಡಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷ ಸಂಘಟಿಸುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಮುಂದಿನ ಎಂಎಲ್‌ಎ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ವರಿಷ್ಠರು ನಿರ್ಧರಿಸಲಿದ್ದಾರೆ. ಡಾ.ಮಂಥರ್ ಗೌಡ, ಎಂಎಲ್ಸಿ ಚುನಾವಣೆ ಪರಾಜಿತ ಅಭ್ಯರ್ಥಿ.

    **
    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಅಂತಿಮ ಕ್ಷಣದಲ್ಲಿ ಕೈತಪ್ಪಿತ್ತು. ಕಾಂಗ್ರೆಸ್ ಅವಕಾಶ ನೀಡಿದ್ದಲ್ಲಿ ಮಡಿಕೇರಿ ಕ್ಷೇತ್ರ ದಿಂದ ಸ್ಪರ್ಧಿಸಲು ಸಿದ್ಧವಾಗಿದ್ದೇನೆ. ಕ್ಷೇತ್ರದ ಕುಂದುಕೊರತೆ ನಿವಾರಣೆ, ಅಭಿವೃದ್ಧಿ ಕಾರ್ಯ ಮಾಡುವ ಹಂಬಲದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದೇನೆ. ಎಚ್.ಎಸ್. ಚಂದ್ರಮೌಳಿ, ಹೈಕೋಟರ್ ಹಿರಿಯ ವಕೀಲರು.

    **
    ಕಳೆದೆರಡು ದಶಕದಿಂದ ಜಾತಿ, ಧರ್ಮ ರಹಿತವಾಗಿ ಸಂಕಷ್ಟದಲ್ಲಿದ್ದವರಿಗೆ ನನ್ನ ಇತಿಮಿತಿ ಒಳಗೆ ನೆರವು ನೀಡುತ್ತಾ ಬಂದಿದ್ದೇನೆ. ಕರ್ನಾಟಕ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷನಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಜನಸೇವೆ ಮಾಡಲು ಒಂದು ಅವಧಿಗೆ ಶಾಸಕನಾಗಲು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಹರಪಳ್ಳಿ ರವೀಂದ್ರ, ಕಾರ್ಯಾಧ್ಯಕ್ಷರು, ಕರ್ನಾಟಕ ಒಕ್ಕಲಿಗರ ಸಂಘ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts