ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನನ-ಮರಣ ಪ್ರಮಾಣ ಪತ್ರಕ್ಕೂ ಹತ್ತುಪಟ್ಟು ಶುಲ್ಕ ಹೆಚ್ಚಿಸಿ ಜನರನ್ನು ಲೂಟಿ ಮಾಡುವ ತನ್ನ ನಿಜ ಸ್ವರೂಪ ತೋರಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ತೀವ್ರವಾಗಿ ಖಂಡಿಸಿರುವ ಸಚಿವರು, ಕಾಂಗ್ರೆಸ್ ಸರ್ಕಾರದ ಬೆಲೆ ಹೆಚ್ಚಳ ಪಟ್ಟಿಯಲ್ಲಿ ಇದೊಂದು ಬಾಕಿ ಇತ್ತೇನೋ? ಎಂದು ಹರಿಹಾಯ್ದಿದ್ದಾರೆ.
ಶುಲ್ಕ ಹೆಚ್ಚಳಕ್ಕೆ ಕಿಡಿ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದೀಗ ಜನನ ಮತ್ತು ಮರಣ ಪ್ರಮಾಣ ಪತ್ರದ ಶುಲ್ಕವನ್ನು 5 ರಿಂದ 50 ರೂಪಾಯಿಗೆ ಹೆಚ್ಚಿಸಿ ಶ್ರೀಸಾಮಾನ್ಯರು ಹುಟ್ಟು – ಸಾವಿಗೂ ದಂಡ ತೆರುವಂತೆ ಮಾಡಿದೆ ಎಂದು ಜೋಶಿ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ, ನೀರಿನ ಕರ, ನಂದಿನಿ ಹಾಲು, ಪಹಣಿ ಶುಲ್ಕ, ಪೆಟ್ರೋಲ್, ಡಿಸೇಲ್, ಅಬಕಾರಿ ಸುಂಕ, ವಿದ್ಯುತ್ ಬಿಲ್ ಹೀಗೆ ಜನಸಾಮಾನ್ಯರ ಅಗತ್ಯತೆಗಳ ಬೆಲೆ ಏರಿಸಿ ಬರೆ ಎಳೆದಿದೆ. ಈಗ ಜನನ-ಮರಣ ಪ್ರಮಾಣ ಪತ್ರದ ಶುಲ್ಕವೂ ಸಾಲದಾಯಿತೇ? ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಶೇ.10ರಷ್ಟು ತೆರಿಗೆ ಹಂಚಿಕೆ ಪಾಲು ಅಧಿಕಗೊಳಿಸಿ ಅನುದಾನ ಒದಗಿಸಿದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಜನನ-ಮರಣ ಪ್ರಮಾಣ ಪತ್ರದ ಶುಲ್ಕವನ್ನು ಹತ್ತುಪಟ್ಟು ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕಿದೆ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಕೈಗನ್ನಡಿ ಎಂದು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.