
ಹಾನಗಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಪ್ರಚಾರದ ಆಸೆಗೆ ರಾಜ್ಯದ ಅಭಿವೃದ್ಧಿ ಕಡೆಗಣಿಸಿದ್ದು, ಇಬ್ಬರು ಕೂಡಲೇ ರಾಜಿನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಹ ಸಂಯೋಜಕ ಭೋಜರಾಜ ಕರೂದಿ ಆಗ್ರಹಿಸಿದರು.
ಐಪಿಎಲ್ ಪ್ರಶಸ್ತಿ ವಿಜೇತ ಆರ್ಸಿಬಿ ತಂಡದ ಸನ್ಮಾನ ಸಮಾರಂಭದಲ್ಲಿ ಉಂಟಾದ ಕಾಲ್ತುಳಿತ ಘಟನೆ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಪಟ್ಟಣದ ಮಹಾತ್ಮಾಗಾಧಿ ವೃತ್ತದಲ್ಲಿ ತಾಲೂಕು ಬಿಜೆಪಿ ವತಿಯಿಂದ ಸೋಮವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಎಲ್ಲ ರಂಗದಲ್ಲಿಯೂ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಆಡಳಿತ ದಿವಾಳಿಯಾಗಿದೆ. ಬೆಲೆ ಏರಿಕೆಯಿಂದ ರಾಜ್ಯದ ಜನ ತತ್ತರಿಸಿದ್ದಾರೆ. ಆರ್ಥಿಕವಾಗಿ ದಿವಾಳಿಯಾದ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ರಸ್ತೆ ದುರಸ್ತಿ ಮಾಡಲಾಗದಷ್ಟು ದುಸ್ಥಿತಿಯಿದೆ. ವಾಣಿಜ್ಯೋದ್ಯಮದ ಮೇಲೆ ಸರ್ಕಾರದ ಕರಿ ನೆರಳು ಬಿದ್ದು ಉದ್ಯಮಿಗಳು ಆತಂಕದಲ್ಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎಲ್ಲ ರಂಗದ ತೆರಿಗೆ ವಿಪರೀತ ಏರಿಕೆ ಮಾಡಿಯೂ ರಾಜ್ಯದ ಅಭಿವೃದ್ಧಿಗೆ ಏನನ್ನೂ ಮಾಡುತ್ತಿಲ್ಲ ಎಂದು ದೂರಿದರು.
ವೈಫಲ್ಯ ಮರೆಮಾಚಲು ಪ್ರಚಾರದ ದಾರಿ ಹುಡುಕುತ್ತಿದ್ದಾರೆ. ಸರಿಯಾದ ಭದ್ರತೆ ಇಲ್ಲದೆ ಆರ್ಸಿಬಿ ಗೆಲುವು ಸಂಭ್ರಮಿಸಲು ಹೋಗಿ 11 ಜನ ಅಮಾಯಕರ ಪ್ರಾಣಕ್ಕೆ ಸಂಚಕಾರ ತಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಬೇಗ ತೊಲಗಿದಷ್ಟು ಉತ್ತಮ. ಇಲ್ಲದಿದ್ದರೆ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಾರೆ. ಇದು ಈ ರಾಜ್ಯದ ಪ್ರತಿ ಪ್ರಜೆಗಳ ಗಮನಕ್ಕೆ ಬಂದಿದೆ ಎಂದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಸವರಾಜ ಹಾದಿಮನಿ, ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ಜಿಲ್ಲಾ ಉಪಾಧ್ಯಕ್ಷ ಶಿವಲಿಂಗಪ್ಪ ತಲ್ಲೂರ, ರೈತ ಮೋರ್ಚಾ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ್, ರಾಜು ಗೌಳಿ, ವೀರಣ್ಣ ನಿಂಬಣ್ಣನವರ, ಸಂತೋಷ ಭಜಂತ್ರಿ, ಸಚಿನ್ ರಾಮಣ್ಣನವರ, ಕುಮಾರ ನಾಗೋಜಿ, ನಿಜಲಿಂಗಪ್ಪ ಮುದಿಯಪ್ಪನವರ, ರವಿಕಿರಣ ಪಾಟೀಲ, ಪ್ರಕಾಶ ನಂದಿಕೊಪ್ಪ, ಸಂತೋಷ ಭಜಂತ್ರಿ, ಪ್ರವೀಣ ಗಜಾಕೋಶ, ಬಸಣ್ಣ ಹಾದಿಮನಿ, ಸುನೀಲ ರ್ಬಾ, ಅಮಿತ ಷಡಗರವಳ್ಳಿ ಇತರರಿದ್ದರು.