ಪ್ರಿಯಾಂಕಾ ಗಾಂಧಿಗೆ ಅಮೇಠಿಯಿಂದಲೇ ಸ್ಪರ್ಧಿಸುವ ಇಂಗಿತ? ಮುಂದಿನ ದಿನಗಳಲ್ಲಿ ನಿರ್ಧಾರವೆಂದ ರಾಹುಲ್​ ಸೋದರಿ

ನವದೆಹಲಿ: ಈ ಬಾರಿ ಸಕ್ರಿಯ ರಾಜಕಾರಣಕ್ಕೆ ಇಳಿದಿರುವ ಪ್ರಿಯಾಂಕಾ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾರಾಣಸಿಯಲ್ಲಿ ಸ್ಪರ್ಧಿಸುತ್ತಾರೆ ಎಂಬಂತಹ ಸುದ್ದಿ ಹರಡಿತ್ತು. ನಂತರ ಕಾಂಗ್ರೆಸ್​ ಅಜಯ್​​ ರಾಯ್​ ಅವರನ್ನು ಅಲ್ಲಿ ಕಣಕ್ಕಿಳಿಸಿದೆ.

ಈಗ ಪ್ರಿಯಾಂಕಾ ಗಾಂಧಿ ಅಮೇಠಿಯಿಂದಲೇ ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡುತ್ತಿದ್ದಾರಂತೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತ ಇದರ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಅದೇನೆಂದರೆ, ರಾಹುಲ್​ ಗಾಂಧಿ ಅಮೇಠಿ ಹಾಗೂ ಕೇರಳದ ವಯಾನಾಡು ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಒಂದೊಮ್ಮೆ ರಾಹುಲ್​ ಈ ಎರಡೂ ಕಡೆ ಗೆದ್ದರೆ ಒಂದು ಕ್ಷೇತ್ರದಲ್ಲಿ ಉಪಚುನಾವಣೆ ಮಾಡುವುದು ಅನಿವಾರ್ಯವಾಗುತ್ತದೆ. ಆಗೇನಾದರೂ ರಾಹುಲ್​ ಗಾಂಧಿ ಅಮೇಠಿಯನ್ನು ಬಿಟ್ಟುಕೊಟ್ಟರೆ ತಾವು ಸ್ಪರ್ಧಿಸುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ.

ಒಂದೊಮ್ಮೆ ಅಮೇಠಿಯನ್ನು ಬಿಟ್ಟುಕೊಟ್ಟರೆ, ಬಳಿಕ ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನೀವು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಕಷ್ಟವೇನಲ್ಲ. ನನ್ನ ಸೋದರ ಯಾವುದಾದರೂ ಒಂದು ಸೀಟ್​ ಬಿಟ್ಟುಕೊಟ್ಟರೆ ಮುಂದಿನದನ್ನು ನಿರ್ಧರಿಸಲಾಗುವುದು. ಈ ಚರ್ಚೆ ಮುಂದಿನ ದಿನಗಳಲ್ಲಿ ಮಾಡುತ್ತೇವೆ ಎಂದಿದ್ದಾರೆ. (ಏಜೇನ್ಸೀಸ್​)