ಸಂಘಟನೆ ದೃಷ್ಟಿಯಿಂದ ಚುನಾವಣೆಗೆ ಸ್ಪರ್ಧಿಸದೇ ಇರಲು ಕೆಸಿ ವೇಣುಗೋಪಾಲ್​ ನಿರ್ಧಾರ

ನವದೆಹಲಿ: ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೇರಳದ ಅಲಪ್ಪುವಾ ಕ್ಷೇತ್ರದ ಕಾಂಗ್ರೆಸ್​ ಸಂಸದ ಕೆ.ಸಿ ವೇಣುಗೋಪಾಲ್​ ಅವರು ಈ ಬಾರಿಯ ಲೋಕಸಭೆಗೆ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದಾರೆ.

ತಮ್ಮ ನಿರ್ಧಾರವನ್ನು ಈಗಾಗಲೇ ಹೈಕಮಾಂಡ್​ಗೆ ತಿಳಿಸಿರುವ ವೇಣುಗೋಪಾಲ್​, ” ಪಕ್ಷಕ್ಕಾಗಿ ದುಡಿಯುವುದು ನನ್ನ ಆದ್ಯ ಕರ್ತವ್ಯ. ನಾನು ಕರ್ನಾಟಕ ಕಾಂಗ್ರೆಸ್​ನ ಉಸ್ತುವಾರಿ. ಚುನಾವಣೆಗೆ ಸ್ಪರ್ದೆ ಮಾಡಿ ನಾನು ಬೇರೆಡೆ ಸಂಘಟನೆಯಲ್ಲಿ ತೊಡಗಿಕೊಳ್ಳುವುದು ನನ್ನ ಮತದಾರರಿಗೆ ಅನ್ಯಾಯ ಮಾಡಿದಂತೆ. ಚುನಾವಣೆಗೆ ಸ್ಪರ್ಧಿಸಲು ನನಗೆ ಆಸಕ್ತಿ ಇದೆಯಾದರೂ, ಪಕ್ಷದ ಹಿತವೇ ನನಗೆ ಅಂತಿಮ. ಹೀಗಾಗಿ ನಾನು ಸ್ಪರ್ದಿಸುವುದು ಕಷ್ಟವಾಗಲಿದೆ,” ಎಂದು ಅವರು ಪಕ್ಷಕ್ಕೆ ಮನವರಿಗೆ ಮಾಡಿಕೊಟ್ಟಿದ್ದಾರೆ.

ತಮ್ಮ ನಿರ್ಧಾರವನ್ನು ಹೈಕಮಾಂಡ್​ನ ಜತೆಗೇ ಕೇರಳ ಕಾಂಗ್ರೆಸ್​ನ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್​, ಎಐಸಿಸಿ ಪ್ರಧಾನ ಕಾರ್ಯದರ್ಶಿ ಉಮ್ಮನ್​ ಚಾಂಡಿ, ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ರಮೇಶ್​ ಚೆನ್ನಿತ್ತಾಲ ಅವರಿಗೂ ತಿಳಿಸಿರುವುದಾಗಿ ವೇಣುಗೋಪಾಲ್​ ಹೇಳಿದ್ದಾರೆ.

ಕೇರಳದಲ್ಲಿ ಒಂದೇ ಹಂತದಲ್ಲಿ ಏ. 23ರಂದು ಲೋಕಸಭೆ ಚುನಾವಣೆಗಳು ನಡೆಯಲಿವೆ. ಸದ್ಯ ಕೆ.ಸಿ ವೇಣುಗೋಪಾಲ್​ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರಕ್ಕೆ ಸಿಪಿಐಎಂ ತನ್ನ ಪ್ರಭಾವಿ ಶಾಸಕ ಎಎಂ ಆರೀಫ್​ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.