ಲೋಕಸಭೆ ಚುನಾವಣೆಗೆ ತಯಾರಿ

ನವದೆಹಲಿ: 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೂರು ಪ್ರಮುಖ ಸಮಿತಿಗಳನ್ನು ರಚನೆ ಮಾಡಿದ್ದಾರೆ. 9 ಸದಸ್ಯರ ಕೋರ್ ಗ್ರೂಪ್ ಕಮಿಟಿ, 19 ಸದಸ್ಯರ ಚುನಾವಣಾ ಪ್ರಣಾಳಿಕೆ ಸಮಿತಿ ಹಾಗೂ 13 ಸದಸ್ಯರ ಪ್ರಚಾರ ಸಮಿತಿಗೆ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾಗೆ ಪ್ರಚಾರ ಸಮಿತಿಯಲ್ಲಿ ಸ್ಥಾನ ಸಿಕ್ಕಿರುವುದು ಗಮನಾರ್ಹ. ರಾಹುಲ್ ತಂಡದಿಂದ ರಮ್ಯಾ ದೂರವಾಗಿದ್ದಾರೆ ಎಂಬ ವದಂತಿಗಳಿಗೆ ಈಗ ತೆರೆ ಬಿದ್ದಂತಾಗಿದೆ.

ಎ.ಕೆ. ಆಂಟನಿ, ಗುಲಾಂ ನಬೀ ಆಜಾದ್, ಅಹ್ಮದ್ ಪಟೇಲ್, ಜೈರಾಮ್ ರಮೇಶ್, ಅಶೋಕ್ ಗೆಹ್ಲೋಟ್, ಪಿ. ಚಿದಂಬರಂ, ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸುರ್ಜೆವಾಲಾ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕೋರ್ ಗ್ರೂಪ್ ಕಮಿಟಿಯಲ್ಲಿದ್ದಾರೆ. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷಕ್ಕೆ ಸೂಕ್ತ ಸಲಹೆ, ಮಾರ್ಗದರ್ಶನಗಳನ್ನು ನೀಡಲಿದ್ದಾರೆ. ಟಿಕೆಟ್ ಹಂಚಿಕೆಯಲ್ಲೂ ಈ ಸಮಿತಿ ಪ್ರಮುಖ ಪಾತ್ರವಹಿಸಲಿದೆ ಎನ್ನಲಾಗಿದೆ.

ಸಲ್ಮಾನ್ ಖುರ್ಷಿದ್, ಚಿದಂಬರಂ, ರಾಜ್ಯದ ರಾಜ್ಯಸಭೆ ಸದಸ್ಯ ರಾಜೀವ್ ಗೌಡ, ಶಶಿ ತರೂರ್, ಸ್ಯಾಮ್ ಪಿತ್ರೋಡ ಸೇರಿದಂತೆ 18 ಮಂದಿ ಪ್ರಣಾಳಿಕೆ ಸಮಿತಿಯಲ್ಲಿದ್ದಾರೆ. ಮಾಜಿ ಕೇಂದ್ರ ಸಚಿವ, ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿಯವರಿಗೆ ಯಾವ ಸಮಿತಿಯಲ್ಲೂ ಸ್ಥಾನ ಸಿಕ್ಕಿಲ್ಲ. ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗಕ್ಕೆ ಹೊಸ ಮುಖ ಪರಿಚಯಿಸಲಾಗುತ್ತದೆ ಎಂಬ ವದಂತಿಗಳ ಮಧ್ಯೆಯೇ ರಮ್ಯಾಗೆ (ದಿವ್ಯಸ್ಪಂದನ) ಪ್ರಚಾರ ಸಮಿತಿಯಲ್ಲಿ ಸ್ಥಾನ ಸಿಕ್ಕಿರುವುದು ರಾಷ್ಟ್ರೀಯ ಮಟ್ಟದಲ್ಲಿ ಅವರ ಪ್ರಭಾವ ಹೆಚ್ಚುತ್ತಿರುವುದರ ಸಂಕೇತ ಎಂದು ಪಕ್ಷದ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಪ್ರಚಾರ ಸಮಿತಿಯಲ್ಲಿ ಹದಿಮೂರು ಜನರಿದ್ದಾರೆ.