ಆಂಧ್ರ ಕಾಂಗ್ರೆಸ್​ ಮಾಜಿ ಎಂಎಲ್​ಎ ಜಯಪ್ರಕಾಶ್​ ರೆಡ್ಡಿ ಬಂಧನವಾಗಿದ್ದೇಕೆ?

ಹೈದರಾಬಾದ್​: ಸುಳ್ಳು ದಾಖಲೆ ನೀಡಿ ಪಾಸ್​ಪೋರ್ಟ್​ ಪಡೆದು ಮೂವರನ್ನು ಯುಎಸ್​ಗೆ ಅಕ್ರಮವಾಗಿ ಕಳುಹಿಸಿದ್ದ ಆರೋಪದ ಮೇಲೆ ಕಾಂಗ್ರೆಸ್​ ಮಾಜಿ ಶಾಸಕ ಜಯಪ್ರಕಾಶ್​ ರೆಡ್ಡಿ ಅವರನ್ನು ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಜಯಪ್ರಕಾಶ್​ ರೆಡ್ಡಿ 2004ರಲ್ಲಿ ಎಂಎಲ್​ಎ ಆಗಿದ್ದಾಗ ತಮಗಾಗಿ ಹಾಗೂ ಮತ್ತೆ ಮೂವರಿಗಾಗಿ ಪಾಸ್​ಪೋರ್ಟ್​ ಪಡೆದಿದ್ದಾರೆ. ಹೆಂಡತಿ, ಮಗ, ಮಗಳ ಹೆಸರಿನಲ್ಲಿ ದಾಖಲೆಗಳನ್ನು ನೀಡಿ, ಅಪರಿಚಿತ ಫೋಟೋಗಳನ್ನು ಸಿಕಂದರಾಬಾದ್​ನ ಸ್ಥಳೀಯ ಪಾಸ್​ಪೋರ್ಟ್​ ಕಚೇರಿಗೆ ನೀಡಿದ್ದರು. ನಂತರ ಆ ಮೂವರನ್ನು ಅಕ್ರಮವಾಗಿ ಯುಎಸ್​ಗೆ ಕಳಿಸಿ ಏಜೆಂಟ್​ ಒಬ್ಬರಿಂದ 15 ಲಕ್ಷ ರೂಪಾಯಿ ಪಡೆದಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸ್ಪಯಂಪ್ರೇರಿತವಾಗಿ ಪಾಸ್​ಪೋರ್ಟ್​ ಕಾಯ್ದೆ, ವಲಸೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್​ನಡಿ ಪ್ರಕರಣ ದಾಖಲಿಸಿಕೊಂಡು ಸೋಮವಾರ ರಾತ್ರಿ ಜಯಪ್ರಕಾಶ್​ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಯಪ್ರಕಾಶ್​ ರೆಡ್ಡಿಯವರು ತಮ್ಮ ಎಂಎಲ್ಎ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಆರೋಪ ಎಸಗಿದ್ದಾರೆ. ನಕಲಿ ದಾಖಲೆಗಳನ್ನು ನೀಡಿ ಪಾಸ್​ಪೋರ್ಟ್​ ಪಡೆದು, ಕುಟುಂದವರು ಎಂದು ಹೇಳಿ ಮೂವರನ್ನು ನ್ಯೂಯಾರ್ಕ್​ಗೆ ಕಳಿಸಿದ್ದಲ್ಲದೆ ಏಜೆಂಟ್​ ಒಬ್ಬರಿಂದ ಹಣ ಪಡೆದಿದ್ದಾರೆ. ಹೀಗಾಗಿ ಅವರನ್ನು ಬಂಧಿಸಿದ್ದೇವೆ ಎಂದು ಡಿಸಿಪಿ ತಿಳಿಸಿದ್ದಾರೆ.