ರಾಜ್ಯಕ್ಕೆ ಹಸ್ತ, ಕೇಂದ್ರಕ್ಕೆ ಮೋದಿ?

ನವದೆಹಲಿ: ಮರುಭೂಮಿಯ ನಾಡು, ರಾಜ-ಮಹಾರಾಜರ ಮನೆತನಗಳ ನೆಲೆಬೀಡಾಗಿರುವ ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇ ಎದುರಾಳಿಗಳು. ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷಗಳ ಮಹಾಮೈತ್ರಿ ಇಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ. ರಾಜಸ್ಥಾನದ ಜನ ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಮೆಚ್ಚಿಕೊಂಡಿದ್ದಾರೆ. ಆದರೆ, ರಾಜ್ಯ ನಾಯಕತ್ವ ವಸುಂಧರಾ ರಾಜೆಗೆ ಬೇಡವೆಂದೇ ಡಿಸೆಂಬರ್​ನಲ್ಲಿ ಜನ ಬಿಜೆಪಿಯನ್ನು ತಿರಸ್ಕರಿಸಿದರು. ವಸುಂಧರಾ ಆಡಳಿತದಿಂದ ಬೇಸತ್ತ ಮತದಾರನಿಗೆ ಕಾಂಗ್ರೆಸ್​ನ್ನು ಆಯ್ಕೆ ಮಾಡುವುದು ಅನಿವಾರ್ಯವಾಗಿತ್ತು. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಹಾಲಿ ಸಿಎಂ ಅಶೋಕ್ ಗೆಹ್ಲೋಟ್ ನಾಯಕತ್ವವನ್ನೇ ನಂಬಿದೆ. ಮಾಜಿ ಕೇಂದ್ರ ಸಚಿವ, ಡೆಪ್ಯುಟಿ ಸಿಎಂ ಸಚಿನ್ ಪೈಲಟ್ ಕೂಡ ಪ್ರಚಾರ ಕಣದಲ್ಲಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದ ಪೈಲಟ್, ರಾಜ್ಯ ವಿಧಾನಸಭೆ ಚುನಾವಣೆ ಗೆದ್ದ ಮೇಲೆ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. ಆದರೆ, ಪೈಲಟ್​ಗೆ ಹೋಲಿಸಿದರೆ ಅಶೋಕ್ ಗೆಹ್ಲೋಟ್ ಜನಪ್ರಿಯ ಮತ್ತು ಜನರೊಂದಿಗೆ ನೇರ ಸಂಪರ್ಕ ಸಾಧಿಸಿರುವ ನಾಯಕ. ಹೀಗಿರುವಾಗ ಅವರನ್ನು ಸಿಎಂ ಮಾಡದೆ ರಾಹುಲ್​ಗೆ ಬೇರೆ ದಾರಿ ಇರಲಿಲ್ಲ. ರಾಜ್ಯದ ಯಾವುದೇ ಭಾಗದಲ್ಲಿ ಕಾಂಗ್ರೆಸ್ ಸಮಾವೇಶವಿದೆ ಎಂದರೆ ರಾಹುಲ್ ಗಾಂಧಿಗಿಂತ ಹೆಚ್ಚು ಗೆಹ್ಲೋಟ್​ರನ್ನು ನೋಡಲೆಂದೇ ಜನರು ಬರುತ್ತಾರೆ!

2014ರ ಲೋಕಸಭೆ ಚುನಾವಣೆ ವೇಳೆ ಪ್ರಚಂಡ ಮೋದಿ ಅಲೆಯಿಂದಾಗಿ ರಾಜ್ಯದ 25 ಸೀಟುಗಳನ್ನೂ ಬಾಚಿಕೊಂಡಿದ್ದ ಬಿಜೆಪಿ, ಶೇ.55ರಷ್ಟು ಮತಗಳಿಕೆ ಮೂಲಕ ಹೊಸ ಇತಿಹಾಸ ಬರೆಯಿತು. 200 ವಿಧಾನಸಭೆ ಕ್ಷೇತ್ರಗಳ ಪೈಕಿ 180ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಕೇವಲ 11 ಕ್ಷೇತ್ರಗಳಲ್ಲಷ್ಟೇ ಮುನ್ನಡೆಯಲ್ಲಿದ್ದ ಕಾಂಗ್ರೆಸ್ ಶೂನ್ಯ ಸಂಪಾದನೆಯ ಸಪ್ಪೆ ಮೋರೆ ಹಾಕಿತು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಅದೃಷ್ಟ ಒಲಿಯಿತು. ಹಾಗಂತ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಇದೇ ಮಾದರಿ ನಿರ್ವಹಣೆ ತೋರುವ ಬಗ್ಗೆ ಅನುಮಾನಗಳಿವೆ. ‘ಮೊನ್ನೆಯ ಚುನಾವಣೆಯಲ್ಲಿ ಕಾಂಗ್ರೆಸ್ 99 ಸೀಟು ಗೆದ್ದರೂ, ಮತಗಳಿಕೆ ಪ್ರಮಾಣದಲ್ಲಿ 73 ಸೀಟು ಗೆದ್ದಿದ್ದ ಬಿಜೆಪಿಯೇ ಮುಂದಿತ್ತು. ಬಿಜೆಪಿಗೆ ಸರ್ಕಾರ ರಚನೆ ಸಾಧ್ಯವಾಗದಿರಬಹುದು. ಆದರೆ, ಲೋಕಸಭೆ ಚುನಾವಣೆ ಮೇಲೆ ವಿಧಾನಸಭೆ ಫಲಿತಾಂಶ ಯಾವುದೇ ಪರಿಣಾಮ ಬೀರುವುದಿಲ್ಲ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಸುಂಧರಾ ರಾಜೆ ಬಗ್ಗೆ ಯಾರೂ ರ್ಚಚಿಸುವುದಿಲ್ಲ. ಏನಿದ್ದರೂ ಮೋದಿ ಮಾತ್ರ’ ಎನ್ನುತ್ತಾರೆ ರಾಜಧಾನಿ ಜೈಪುರ ನಿವಾಸಿ ಆಶಿಷ್ ಶೆಣೈ.

ವರಿಷ್ಠರಿಗೂ ಅದೇ ಬೇಕಿತ್ತು: ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷ ಇರುವಾಗಲೇ ‘ರಾಜ್ಯದಲ್ಲಿ ಬಿಜೆಪಿ ಸೋಲುತ್ತದೆ’ ಎಂದು ಬಿಜೆಪಿ ನಾಯಕರೇ ಮಾತನಾಡಿಕೊಳ್ಳುತ್ತಿದ್ದರು. ಚುನಾವಣೆಯ ಕೊನೆ ಹಂತಗಳಲ್ಲಿ ಮೋದಿ-ಷಾ ಬಿರುಸಿನ ಪ್ರಚಾರಗಳಿಂದಾಗಿ ಭಾರಿ ಮುಖಭಂಗದಿಂದ ಪಾರಾದ ಬಿಜೆಪಿ 73 ಸೀಟುಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಕೇಸರಿಗೆ ಅವಕಾಶ

2014ರ ನಿರ್ವಹಣೆಯ ಪುನರಾವರ್ತನೆಯಾದರೆ ಬಿಜೆಪಿಗೆ ಕೇಂದ್ರದಲ್ಲಿ ಬಹುಮತ ಗಳಿಸಲು ಅನುಕೂಲವಾಗಲಿದೆ. ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶದ ಪ್ರಕಾರ ಕಾಂಗ್ರೆಸ್ 12 ಲೋಕಸಭೆ ಸೀಟು ಮತ್ತು ಬಿಜೆಪಿ 13 ಸೀಟುಗಳಲ್ಲಿ ಮುನ್ನಡೆ ಸಾಧಿಸಿವೆ. ಈಗಿನ ಲೆಕ್ಕಾಚಾರಗಳ ಪ್ರಕಾರ ಬಿಜೆಪಿ 16-18 ಸೀಟನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಕೇಂದ್ರ ಸರ್ಕಾರ ಜಾರಿ ಮಾಡಿರುವ ಶೇ.10ರಷ್ಟು ಮೀಸಲಾತಿ ನೀತಿ ಒಂದಿಷ್ಟು ಮತಗಳನ್ನು ಬಿಜೆಪಿ ಪರ ತಿರುಗಿಸಬಹುದು. ಭಾರತ-ಪಾಕ್​ಗೆ ಸಂಬಂಧಿಸಿದಂತೆ ಸೇನಾಸಾಧನೆ, ರಾಜತಾಂತ್ರಿಕ ಮೇಲುಗೈ ವಿಷಯಗಳೂ ಚುನಾವಣಾ ಕಣದಲ್ಲಿ ಸದ್ದು ಮಾಡಲಿವೆ. ಸೈನಿಕರು, ಸೇನಾಧಿಕಾರಿಗಳು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಪಾಕ್ ಜತೆಗೆ ಗಡಿ ಹಂಚಿಕೊಂಡಿರುವ ರಾಜ್ಯವೂ ಹೌದು.

ಕ್ಲೀನ್​ಸ್ವೀಪ್​ನಿಂದ ಶೂನ್ಯಕ್ಕೆ

1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಿಂದಾಗಿ ಜನರಲ್ಲಿ ಅನುಕಂಪದ ಅಲೆ ಹೆಚ್ಚಿದ್ದರ ಪರಿಣಾಮ ಅದೇ ವರ್ಷದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದ 25 ಸೀಟುಗಳನ್ನೂ ತನ್ನದಾಗಿಸಿಕೊಂಡಿತ್ತು. ಆಗ ಶಿವಚರಣ್ ಮಾಥುರ್ ಮುಖ್ಯಮಂತ್ರಿಯಾಗಿದ್ದರು. ಆದರೆ ನಾಲ್ಕೇ ವರ್ಷಗಳಲ್ಲಿ ಕಾಂಗ್ರೆಸ್ ಹಣೆಬರಹ ಬದಲಾಗಿತ್ತು. ಪ್ರಧಾನಿ ರಾಜೀವ್ ಗಾಂಧಿ ಮೇಲಿನ ಬೊಫೋರ್ಸ್ ಹಗರಣದ ಆರೋಪದಿಂದಾಗಿ ಕಾಂಗ್ರೆಸ್ 25 ಸೀಟುಗಳಲ್ಲೂ ಸೋಲನುಭವಿಸಿತು. ಬಿಜೆಪಿಗೆ 13 ಮತ್ತು ಜನತಾದಳಕ್ಕೆ 11 ಸೀಟು ಸಿಕ್ಕಿದ್ದವು. ಆಗಲೂ ಕಾಂಗ್ರೆಸ್​ನ ಮಾಥುರ್ ಅವರೇ ರಾಜ್ಯದ ಸಿಎಂ! ರಾಜಸ್ಥಾನದಲ್ಲಿ ಕ್ಲೀನ್​ಸ್ವೀಪ್​ಗೆ ಸಾಕ್ಷಿಯಾಗಿದ್ದ ಇಬ್ಬರು ಸಿಎಂಗಳ ಮೂಲ (ಮಾಥುರ್ ಮತ್ತು ವಸುಂಧರಾ ರಾಜೆ) ಮಧ್ಯಪ್ರದೇಶ ಎಂಬುದು ಕುತೂಹಲಕರ.

ಗೆಹ್ಲೋಟ್ ಪುತ್ರ ಕಣಕ್ಕೆ

ಸಿಎಂ ಆಗಿ ಇದು ಅಶೋಕ್ ಗೆಹ್ಲೋಟ್​ಗೆ ಕೊನೆಯ ಅವಕಾಶ. ಹೀಗಾಗಿ, ಪುತ್ರ, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೈಭವ್ ಗೆಹ್ಲೋಟ್​ಗೆ ಲೋಕಸಭೆ ಟಿಕೆಟ್ ಕೊಡಿಸಲು ಸೀನಿಯರ್ ಗೆಹ್ಲೋಟ್ ಯತ್ನಿಸಿದ್ದಾರೆ. ಹುಟ್ಟೂರಾದ ಜೋಧಪುರ ಅಥವಾ ಜಲೋರ್-ಸಿರೋಹಿ ಕ್ಷೇತ್ರದಿಂದ ವೈಭವ್ ಕಣಕ್ಕಿಳಿಯುವ ನಿರೀಕ್ಷೆಯಿದೆ.

ರಾಘವ ಶರ್ಮ ನಿಡ್ಲೆ