ರಾಹುಲ್​ ಗಾಂಧಿ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

ಕಲಬುರಗಿ: ಎಐಸಿಸಿ ವಕ್ತಾರ ರಣದೀಪ ಸರ್ಜೆವಾಲಾ ಅವರು ಬಿ.ಎಸ್.ಯಡಿಯೂರಪ್ಪ ವಿರುದ್ಧ ನಮೂದಿಸಲಾದ ಡೈರಿಗೆ ಸಂಬಂಧಿಸಿದಂತೆ ಈ ಡೈರಿ ನಕಲಿ ಎಂದು ಗೊತ್ತಾಗಿದ್ದು, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ಜನರ ಕ್ಷಮೆಯಾಚಿಸಬೇಕು. ಇಲ್ಲವಾದರೆ ಸುರ್ಜೆವಾಲಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ಹೇಳಿದರು.
ಬಿಜೆಪಿ ಬೆಳವಣಿಗೆ, ಯಡಿಯೂರಪ್ಪ ವರ್ಚಸ್ಸು ಕುಗ್ಗಿಸಲು ಕಾಂಗ್ರೆಸ್ನ ಷಡ್ಯಂತ್ರ ಇದಾಗಿದೆ. ಐಟಿ ಇಲಾಖೆ ಇದೊಂದು ನಕಲಿ ಡೈರಿ ಎಂದು ಸ್ಪಷ್ಟಪಡಿಸಿದೆ. ಬಿಎಸ್ವೈಗೆ ಚ್ಯುತಿ ತರುವ ಹುನ್ನಾರ ಇದರಲ್ಲಿದೆ ಎಂದು ಆಪಾದಿಸಿದರು.
ಸುಳ್ಳು ದಾಖಲೆ ಸೃಷ್ಟಿಸಿ ಯಡಿಯೂರಪ್ಪ ವರ್ಚಸ್ಸಿಗೆ ಮಸಿ ಬಳಿಯಲು ಕಾಂಗ್ರೆಸ್ ಪ್ರಯತ್ನಿಸಿದೆ. ಆದರೆ ಪ್ರಯೋಗಾಲಯದಲ್ಲಿ ಈ ಡೈರಿ ನಕಲಿ ಎಂಬುದು ಸಾಬೀತಾಗಿದೆ. ಇದೀಗ ಕಾಂಗ್ರೆಸ್ ಮುಖಂಡರು ಮುಜುಗುರಕ್ಕೆ ಒಳಗಾಗಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಾಧವ ರಾಜೀನಾಮೆ ಅಂಗೀಕರಿಸಿ: ಕಲಬುರಗಿ ಲೋಕಸಭೆ ಬಿಜೆಪಿ ಅಭ್ಯರ್ಥಿಯಾಗಿ ಡಾ.ಉಮೇಶ ಜಾಧವ್ ಹೆಸರು ಅಂತಿಮಗೊಂಡಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕಾಂಗ್ರೆಸ್​ನವರು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಹೀಗಾಗಿ ಯಾರೂ ಗೊಂದಲಕ್ಕೆ ಒಳಗಾಗಬಾರದು. ಡಾ.ಜಾಧವ್ ಶೀಘ್ರದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಸಭಾಧ್ಯಕ್ಷರು ಯಾವುದೇ ಒತ್ತಡಕ್ಕೆ ಮಣಿಯದೆ ಜಾಧವ್ ರಾಜೀನಾಮೆ ಅಂಗೀಕರಿಸಬೇಕು.
ಪಕ್ಷದ ಮಹಾನಗರ ಜಿಲ್ಲಾಧ್ಯಕ್ಷ ಬಿ.ಜಿ.ಪಾಟೀಲ್ ಮಾತನಾಡಿ, 371(ಜೆ) ಸಮರ್ಪಕ ಜಾರಿಯಾಗುತ್ತಿಲ್ಲ. ಲೋಕೋಪಯೋಗಿ ಇಲಾಖೆಯ 520 ಸಹಾಯಕ ಇಂಜಿನಿಯರ್ ಮತ್ತು 300 ಕಿರಿಯ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಸಕರ್ಾರ ಮುಂದಾಗಿದ್ದು, 371(ಜೆ) ಅಡಿ ಮೀಸಲು ಸೌಲಭ್ಯ ಕಲ್ಪಿಸಿಲ್ಲ. ಹೈ.ಕ.ಹೊರತುಪಡಿಸಿ ರಾಜ್ಯದ ಇತರೆಡೆ ಶೇ.8ರಷ್ಟು ಮೀಸಲು ಸೌಲಭ್ಯ ಒದಗಿಸಬೇಕು. ಆದರೆ ಅದನ್ನೂ ನೀಡಿಲ್ಲ. ಹೀಗಾಗಿ ಈ ನೇಮಕ ಪ್ರಕ್ರಿಯೆ ತಡೆಹಿಡಿಯಬೇಕು. ಸರ್ಕಾರದ ಈ ನಿರ್ಧಾರ ಖಂಡಿಸಿ 28ರಂದು ಕಲಬುರಗಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಚೌಕಿದಾರ ಅಭಿಯಾನ: 25ರಂದು ನಗರದ ಸರ್ದಾರ್ ಪಟೇಲ್ ವೃತ್ತದಿಂದ ಜಗತ್ ವೃತ್ತದವರೆಗೆ ಮೈ ಬೀ ಚೌಕಿದಾರ ಅಭಿಯಾನ ಆಯೋಜಿಸಲಾಗಿದೆ. ಪಕ್ಷದ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಮಾತನಾಡಿ, 371(ಜೆ) ಸಮರ್ಪಕ ಅನುಷ್ಠಾನವಾಗುತ್ತಿಲ್ಲ. ಆದರೂ ಸಂಸದ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಮುಖ್ಯಮಂತ್ರಿ ಮೇಲೆ ಒತ್ತಡ ತರುವ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಮಾತನಾಡಿ, ಪ್ರಧಾನಿ ಮೋದಿ ವಿರುದ್ಧ ಯಾರೇ ಸ್ಪರ್ಧಿಸಿದರೂ ಠೇವಣಿ ಕಳೆದುಕೊಳ್ಳುವುದು ಗ್ಯಾರಂಟಿ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅನೇಕ ಅಭಿವೃದ್ಧಿ ಕೆಲಸ ಮಾಡಿದೆ. ಸುಳ್ಳು ಆರೋಪ ಮಾಡಿರುವ ಕಾಂಗ್ರೆಸ್ ನಾಯಕರು ತಮ್ಮ ಸರ್ಕಾರದ ಅವಧಿಯಲ್ಲಿ ಬಿಡುಗಡೆ ಮಾಡಿದ ಹಣ ಮತ್ತು ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ್ದ ಹಣ ಕುರಿತು ಚರ್ಚಿಸಲು ಸಿದ್ಧ. ಈ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು. ಮಾಜಿ ಶಾಸಕ ಶಶೀಲ್ ನಮೋಶಿ, ಲಿಂಗರಾಜ ಬಿರಾದಾರ, ರವಿಚಂದ್ರ ಕ್ರಾಂತಿಕಾರ, ಮಹಾಂತಗೌಡ ಪಾಟೀಲ್, ದಯಾಘನ್ ಧಾರವಾಡಕರ್, ರಾಜು ವಾಡೇಕರ್ ಇತರರು ಇದ್ದರು.