ಮಧು ಬಂಗಾರಪ್ಪರನ್ನು ಗೆಲ್ಲಿಸುವ ಮೂಲಕ ರಾಜಕಾರಣಕ್ಕೆ ಹೊಸ ತಿರುವು ನೀಡುತ್ತೇವೆ

ಶಿವಮೊಗ್ಗ: ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ನ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸುವ ಮೂಲಕ ರಾಜಕಾರಣಕ್ಕೆ ಹೊಸ ತಿರುವನ್ನು ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗಂಡೂರಾವ್​ ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿನೇಶ್,​ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಎಲ್ಲಾ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಒಂದಾಗಿ ಚುನಾವಣೆ ಎದುರಿಸಲು ಮನಸ್ಫೂರ್ತಿಯಾಗಿ ತೀರ್ಮಾನಿಸಿದ್ದೇವೆ. ಜೆಡಿಎಸ್​ ಮತ್ತು ಕಾಂಗ್ರೆಸ್​ ಮೈತ್ರಿಯಿಂದ ಕೆಲವರಿಗೆ ಗೊಂದಲವಾಗಿದೆ ಎಂದು ಹಲವರು ಅಂದುಕೊಂಡಿದ್ದರು. ಆದರೆ, ನಾವು ಐದು ಕ್ಷೇತ್ರಗಳಲ್ಲಿ ಉಪಚುನಾವಣೆಯನ್ನು ಒಂದಾಗಿ ಎದುರಿಸುತ್ತಿದ್ದೇವೆ. ಈ ಕುರಿತು ಬೆಂಗಳೂರಿನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟ ಸಂದೇಶ ರವಾನಿಸಿದ್ದೇವೆ ಎಂದು ತಿಳಿಸಿದರು.

ಪ್ರತಿದಿನ ಗಡಿಯಲ್ಲಿ ಹಿಂಸಾತ್ಮಕ ಕೃತ್ಯಗಳು ನಡೆಯುತ್ತಿವೆ. ಮೋದಿ ಪ್ರಧಾನಿಯಾದ ನಂತರ ಭಯೋತ್ಪಾದನೆ ಹೆಚ್ಚಾಗಿದೆ. ಅವರು ಭಯೋತ್ಪಾದನೆಯನ್ನು ತಡೆಯಲು ಏಕೆ ಕ್ರಮ ಕೈಗೊಂಡಿಲ್ಲ? ಮೋದಿ ಮಾತಿನ ಸರದಾರ, ಕೆಲಸದಲ್ಲಿ ಅವರ ಸಾಧನೆ ಶೂನ್ಯ. ಯಡಿಯೂರಪ್ಪ ಹಾಗೂ ಬಿಜೆಪಿ ಮುಖಂಡರು ಮಹದಾಯಿ ವಿಚಾರ ಬಂದಾಗ ಆ ವಿಷಯದಿಂದ ದೂರವಿದ್ದರು. ರಾಜ್ಯದ ಬಿಜೆಪಿ ಸಂಸದರು ಸಂಸತ್ ನಲ್ಲಿ ರಾಜ್ಯದ ಪರವಾಗಿ ಮಾತನಾಡಲೇ ಇಲ್ಲ ಎಂದು ದಿನೇಶ್​ ಗುಂಡೂರಾವ್​ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.