ಕಾಂಗ್ರೆಸ್ ಬಿಲ್ಲವ ಸಮುದಾಯವನ್ನು ಕಡೆಗಣಿಸಿಲ್ಲ

>

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕಾಂಗ್ರೆಸ್ ಪಕ್ಷ ಬಿಲ್ಲವ ಸಮುದಾಯವನ್ನು ಅಥವಾ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರನ್ನು ಕಡೆಗಣಿಸಿಲ್ಲ ಎಂದು ಜನಾರ್ದನ ಪೂಜಾರಿ ಪುತ್ರ ಸಂತೋಷ್ ಪೂಜಾರಿ ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಅಗತ್ಯಗಳ ಬಗ್ಗೆ ಪಾರ್ಲಿಮೆಂಟ್‌ನಲ್ಲಿ ಸಮರ್ಥವಾಗಿ ಧ್ವನಿ ಎತ್ತಬಲ್ಲ ಸಾಮರ್ಥ್ಯವಿರುವ ಸುಶಿಕ್ಷಿತ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದ ಅವರು, ತಂದೆಯವರಿಗೆ ಚುನಾವಣಾ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಗದಿರುವ ಕಾರಣ ಅವರ ಪರವಾಗಿ ಒಂದು ವಾರದಿಂದ ತಾನು ಪ್ರಚಾರ ಕಾರ‌್ಯದಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದರು.
ಪೂಜಾರಿ ಅವರ ಸುಧೀರ್ಘ ರಾಜಕಾರಣದುದ್ದಕ್ಕೂ ಮುಂಚೂಣಿಯಲ್ಲಿ ಕಾಣಿಸಿಕೊಳ್ಳದ ಅವರ ಪುತ್ರನ ದಿಢೀರ್ ರಾಜಕೀಯ ಪ್ರವೇಶ ಸಾರ್ವಜನಿಕ ವಲಯದಲ್ಲಿ ಕುತೂಹಲ ಕೆರಳಿಸಿದೆ.
ದೇವರಾಯ ನಾಯ್ಕ, ವಿನಯ ಕುಮಾರ್ ಸೊರಕೆ, ಆರ್.ಎಲ್.ಜಾಲಪ್ಪ, ಜನಾರ್ದನ ಪೂಜಾರಿ, ಎಸ್.ಬಂಗಾರಪ್ಪ ಮತ್ತು ಈ ಚುನಾವಣೆಯಲ್ಲಿ ಬಿ.ಕೆ.ಹರಿಪ್ರಸಾದ್, ಮಧು ಬಂಗಾರಪ್ಪ ಅವರಿಗೆ ಕಾಂಗ್ರೆಸ್ ಅವಕಾಶ ನೀಡಿದೆ. ಕಾಂಗ್ರೆಸ್ ಪಕ್ಷ ಆರಂಭದಿಂದಲೂ ಬಿಲ್ಲವ, ಈಡಿಗ ಸಹಿತ ಹಿಂದುಳಿದ ವರ್ಗಗಳಿಗೆ ಬೆಂಬಲ ನೀಡಿದೆ. ಆದ್ದರಿಂದ ಜನಾರ್ದನ ಪೂಜಾರಿ, ಅವರ ಕನಸು ನನಸು ಮಾಡಲು ಸಾರ್ವಜನಿಕರು, ಅವರ ಹಿತೈಷಿಗಳು ಯುವಜನರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಬಿಲ್ಲವ ಸಹಿತ ಬಹುಸಂಖ್ಯಾತ ಹಿಂದುಳಿದ ವರ್ಗದ ಸದಸ್ಯನಾಗಿ ರಾಜಕೀಯ ಕ್ಷೇತ್ರದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ವರಿಗೂ ಸಮಪಾಲು, ಸಮಬಾಳ್ವೆ ದೊರೆಯಬೇಕು ಎನ್ನುವುದು ನಮ್ಮ ಆಶಯ. ತಂದೆಯವರಿಗೆ ಈ ಬಗ್ಗೆ ಕನಸುಗಳಿದ್ದವು ಎಂದರು.
ನಳಿನ್‌ಗೆ ಆಶೀರ್ವಾದ: ಕುದ್ರೋಳಿ ಕ್ಷೇತ್ರದಲ್ಲಿ ತಮ್ಮ ಬಳಿಗೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರಿಗೆ ಓರ್ವ ಹಿರಿಯರಾಗಿ ನನ್ನ ತಂದೆಯವರು ಆಶೀರ್ವದಿಸಿದ್ದಾರೆ. ಮರುದಿನ ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪೂಜಾರಿಯವರು ಬಹಿರಂಗವಾಗಿ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದವರು ತಿಳಿಸಿದರು.

ಸ್ಪರ್ಧೆ ಬಗ್ಗೆ ಯೋಚಿಸಿಲ್ಲ: 1977ರಲ್ಲಿ ತಂದೆಯವರು ಸ್ಪರ್ಧಿಸಲು ಆರಂಭಿಸಿದ ಕಾಲದಿಂದಲೂ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದೆ. ಬಳಿಕ ಕೂಡ ತಂದೆಯವರ ಪರವಾಗಿ ಸಮಾಜ, ಪಕ್ಷಕ್ಕೆ ನನ್ನದೇ ಆದ ಕೊಡುಗೆ ನೀಡಲು ಶ್ರಮಿಸಿದ್ದೇನೆ. ಇಲ್ಲಿವರೆಗೆ ಸ್ಪರ್ಧೆಯ ಬಗ್ಗೆ ಚಿಂತನೆ ನಡೆಸಿಲ್ಲ. ಮುಂದೆ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಸಂತೋಷ್ ಪೂಜಾರಿ ಪ್ರತಿಕ್ರಿಯಿಸಿದರು.