ಕೇಂದ್ರದ ವೈಫಲ್ಯಗಳ ಕೈಪಿಡಿ ಮನೆಮನೆಗೆ

ಚಿಕ್ಕಮಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಒಳಗೊಂಡ ಕೈಪಿಡಿಯನ್ನು ಜಿಲ್ಲೆಯ ಎಲ್ಲ ಮತಗಟ್ಟೆ ವ್ಯಾಪ್ತಿಯ ಮನೆಗಳಿಗೆ ಮಾರ್ಚ್ 2ರಂದು ತಲುಪಿಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಡಿ.ಎಲ್.ವಿಜಯಕುಮಾರ್ ತಿಳಿಸಿದರು.

ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಲಾಗಿದೆ. ನಾಯಕರಿಂದ ಕಾರ್ಯಕರ್ತರವರೆಗೆ ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಕೈಪಿಡಿ ವಿತರಿಸಿ ಪಕ್ಷಕ್ಕೆ ನಿಧಿ ಸಂಗ್ರಹಿಸಲು ಸಹ ನಿರ್ಧರಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಸೈದ್ಧಾಂತಿಕ ತಿಳಿವಳಿಕೆ ಹೆಚ್ಚಿಸಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಎಲ್​ಎ-2 ಮತ್ತು ಮತಗಟ್ಟೆ ಅಧ್ಯಕ್ಷರು ಹಾಗೂ ಬ್ಲಾಕ್ ಪದಾಧಿಕಾರಿಗಳಿಗೆ ಒಂದು ದಿನದ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಫೆ.25ರಂದು ಚಿಕ್ಕಮಗಳೂರು ಹಾಗೂ ತರೀಕೆರೆ, 26ರಂದು ಮೂಡಿಗೆರೆ ಹಾಗೂ ಕೊಪ್ಪದಲ್ಲಿ ಮತ್ತು ಮಾರ್ಚ್ 3 ರಂದು ಕಡೂರಿನಲ್ಲಿ ಶಿಬಿರ ನಡೆಸಲು ಸಭೆ ತೀರ್ವನಿಸಿದೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ 1,173 ಮತಗಟ್ಟೆಗಳಿಗೂ ಬಿಎಲ್​ಎ-2 ನೇಮಿಸುವ ಪ್ರಕ್ರಿಯೆ ಚುರುಕಾಗಿದೆ. ಫೆ.25ರೊಳಗೆ ಜಿಲ್ಲೆಯ 5 ಕ್ಷೇತ್ರಗಳಲ್ಲೂ ಕಾರ್ಯ ಸಂಪೂರ್ಣಗೊಳಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಲೋಕಸಭೆ ಚುನಾವಣೆಗೆ ಮತಗಟ್ಟೆ ಅಧ್ಯಕ್ಷರ ನೇಮಕಕ್ಕೆ ಬ್ಲಾಕ್ ಸಮಿತಿ ಅಧ್ಯಕ್ಷರು ಕ್ರಮ ವಹಿಸಲು ಸೂಚಿಸಲಾಗಿದೆ. ಪಕ್ಷದ ಶಕ್ತಿ ಕಾರ್ಯಕ್ರಮದಡಿ ಈವರೆಗೆ 12 ಸಾವಿರಕ್ಕೂ ಹೆಚ್ಚು ಸದಸ್ಯರು ಸೇರ್ಪಡೆಯಾಗಿದ್ದಾರೆ ಎಂದರು.