ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಕಾಂಗ್ರೆಸ್ ಅಡ್ಡಿ

ಬೆಂಗಳೂರು: ನಗರದ ಪೂರ್ಣಪ್ರಜ್ಞ ವಿದ್ಯಾಪೀಠ ಆವರಣದಲ್ಲಿ ಆಯೋಜಿಸಿದ್ದ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಸಂಜೆ ಅಡ್ಡಿಪಡಿಸಿದರು. ಕಾರ್ಯಕ್ರಮಕ್ಕೂ ಮೊದಲೇ ಬಂದಿದ್ದ ಕಾಂಗ್ರೆಸ್ 15 ಕಾರ್ಯಕರ್ತರು, ಉಪನ್ಯಾಸ ನೆಪದಲ್ಲಿ ಚಕ್ರವರ್ತಿ ಸೂಲಿಬೆಲೆ ಮತಯಾಚನೆ ಮಾಡಲು ಬಂದಿದ್ದು, ಒಂದು ಪಕ್ಷದ ಪರ ಭಾಷಣ ಮಾಡಲು ಅವಕಾಶ ನೀಡಬಾರದು ಎಂದು ಅಡ್ಡಿಪಡಿಸಲು ಮುಂದಾದರು.

ಇದರಿಂದ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಕೆಲವರು ಕೆರಳಿ, ಮೋದಿ ಪರ ಘೋಷಣೆ ಕೂಗಿದರು. ಆಕ್ರೋಶಗೊಂಡ ಕೈ ಕಾರ್ಯಕರ್ತರು ರಾಹುಲ್ ಗಾಂಧಿ ಪರ ಘೋಷಣೆ ಕೂಗಿದರು. ಈ ವಿಚಾರವಾಗಿ ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು, ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಸ್ಥಳಕ್ಕೆ ಧಾವಿಸಿದ ಪೊಲೀಸರು, ಎರಡು ಕಡೆಯವರನ್ನು ಸಮಾಧಾನ ಪಡಿಸಿದರು. ಬಳಿಕ ಚಕ್ರವರ್ತಿ ಸೂಲಿಬೆಲೆ ‘ರಾಷ್ಟ್ರಧರ್ಮ’ ವಿಷಯದ ಬಗ್ಗೆ ಕೆಲಕಾಲ ಮಾತನಾಡಿ ಸ್ಥಳದಿಂದ ತೆರಳಿದರು. ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು, ಭಾಷಣಕಾರ ಡಾ.ಎಚ್.ಸತ್ಯನಾರಾಯಣಾಚಾರ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.