ಬ್ಯಾಂಕ್ ವಿಲೀನದಲ್ಲಿ ಕೈ ಇಲ್ಲ

ಮಂಗಳೂರು: ವಿಜಯ ಬ್ಯಾಂಕ್ ವಿಲೀನಕ್ಕೆ ಕಾಂಗ್ರೆಸ್ ಮುಖಂಡ ಡಾ.ಎಂ.ವೀರಪ್ಪ ಮೊಯ್ಲಿ ನೇತೃತ್ವತ ಸಮಿತಿ ತೀರ್ಮಾನಿತ್ತತು ಎಂಬ ಹೇಳಿಕೆಗೆ ಸಂಸದ ನಳಿನ್ ಪುರಾವೆ ತೋರಿಸಲಿ. ಸಭೆಯ ಚರ್ಚೆ ನಡಾವಳಿಯಲ್ಲಿ ದಾಖಲಾಗುತ್ತದೆ. ಸಂಸದರು ಜನರಿಗೆ ಅದನ್ನು ತೋರಿಸಲಿ.
– ಇದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸವಾಲ್.

ಸಂಸದರ ಮಾತು ರಾಜಕೀಯ ಪ್ರೇರಿತ ಮತ್ತು ಸುಳ್ಳು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈ ರೀತಿ ಹೇಳಿಕೆ ನೀಡಬಾರದು. ಸಂಸದರಿಗೆ ಬದ್ಧತೆ ಇದ್ದಿದ್ದರೆ ಉಭಯ ಜಿಲ್ಲೆ ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಿ ಹಣಕಾಸು ಸಚಿವರು, ಪ್ರಧಾನಮಂತ್ರಿಗೆ ಮನವರಿಕೆ ಮಾಡಬೇಕಿತ್ತು. 6 ತಿಂಗಳಿಂದ ಬ್ಯಾಂಕ್ ವಿಲೀನ ಪ್ರಕ್ರಿಯೆ ನಡೆಯುತ್ತಿದ್ದರೂ ಸಂಸದರು ಮೌನವಾಗಿದ್ದರು. ನಳಿನ್ ಹೇಳಿಕೆ ಸುಳ್ಳು ಎಂಬುದನ್ನು ಮೊಯ್ಲಿಯವರೇ ಹೇಳಿದ್ದಾರೆ. ಈ ಕುರಿತು ನಳಿನ್‌ಗೆ ಪತ್ರ ಬರೆದು ಪ್ರಶ್ನಿಸುವುದಾಗಿ ಮೊಯ್ಲಿ ತಿಳಿಸಿದ್ದಾರೆ ಎಂದರು.

58 ಕೋಟಿ ರೂ. ಬಿಡುಗಡೆ: ಜಿಲ್ಲೆಯಲ್ಲಿ ಕಳೆದ ಮಳೆಗಾಲದಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿ 58 ಕೋಟಿ ರೂ. ಬಿಡುಗಡೆಯಾಗಿದೆ. ಮೊದಲ ಬಾರಿಗೆ ಜಿಲ್ಲೆಗೆ ಗರಿಷ್ಠ ಮೊತ್ತ ಜಿಲ್ಲೆಗೆ ಬಂದಿದೆ. ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬಜೆಟ್ ಪೂರ್ವ ಸಭೆಯಲ್ಲಿ ಚರ್ಚಿಸಲಾದ ವಿಚಾರ ಮತ್ತು ಬೇಡಿಕೆಯನ್ನು ಆಯಾ ಇಲಾಖೆಗೆ ಸಲ್ಲಿಸಲಾಗುವುದು. ಸಿಎಂ ನಡೆಸುವ ಬಜೆಟ್ ಪೂರ್ವ ಸಭೆಯಲ್ಲಿ ಈ ವಿಚಾರಗಳು ಚರ್ಚೆಯಾಗಲಿದೆ ಎಂದು ಖಾದರ್ ತಿಳಿಸಿದರು.

ಫ್ಲೈಓವರ್‌ಗಾಗಿ ಪ್ರಾರ್ಥನೆ: ಪಂಪ್‌ವೆಲ್, ತೊಕ್ಕೊಟ್ಟು ಫ್ಲೈ ಓವರ್ ಫೆಬ್ರವರಿಯಲ್ಲಿ ಉದ್ಘಾಟನೆಯಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ, ನಾವು ಆದಷ್ಟು ಬೇಗ ಕಾಮಗಾರಿ ಮುಗಿಯಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಖಾದರ್ ಹೇಳಿದರು.

ಬಿಜೆಪಿಯಿಂದ ಆಫರ್ ಬಂದಿಲ್ಲ: ಬಿಜೆಪಿಯವರು ಸಮ್ಮಿಶ್ರ ಸರ್ಕಾರ ಉರುಳಿಸಲು ನಡೆಸುತ್ತಿರುವ ಪ್ರಯತ್ನ ವ್ಯರ್ಥ. ರಾಜ್ಯ ಸರ್ಕಾರಕ್ಕೆ ಯಾವುದೇ ಅಡಚಣೆ ಇಲ್ಲ. ಬಿಜೆಪಿಯಿಂದ ಆಫರ್ ಬಂದಿಲ್ಲ, ನನ್ನನ್ನು ಗಲ್ಲಿಗೇರಿಸಿದರೂ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಬಿಜೆಪಿಯವರದ್ದು ಟೆಸ್ಟ್‌ಮ್ಯಾಚ್, ನಮ್ಮದು ಏನಿದ್ದರೂ ವನ್ ಡೇ ಮ್ಯಾಚ್ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಳಿನ್ ಕ್ಷಮೆ ಯಾಚಿಸಲು ಮೊಯ್ಲಿ ಆಗ್ರಹ: ಸಂಸದರಾಗಿ ಯಾವ ವರದಿಯನ್ನೂ ಓದದೆ ಅನಕ್ಷರಸ್ಥರಂತೆ ಅಪಪ್ರಚಾರ ಮಾಡುವುದು ಸರಿಯಲ್ಲ. ಆದ್ದರಿಂದ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಸಂಸದೀಯ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ವೀರಪ್ಪ ಮೊಯ್ಲಿ ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಪತ್ರ ಮೂಲಕ ಆಗ್ರಹಿಸಿದ್ದಾರೆ. ವಿಜಯ ಬ್ಯಾಂಕ್ ವಿಲೀನಕ್ಕೆ ಪಾರ್ಲಿಮೆಂಟ್‌ನ ಹಣಕಾಸು ಸ್ಥಾಯಿ ಸಮಿತಿ ಮೂಲಕ ಶಿಫಾರಸು ಮಾಡಲಾಗಿದೆ ಎಂದು ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದುದು. ಸಮಿತಿ ವಿಜಯ ಬ್ಯಾಂಕನ್ನು ಯಾವುದೇ ಬ್ಯಾಂಕ್‌ನೊಂದಿಗೆ ಒಗ್ಗೂಡಿಸುವಂತೆ ಶಿಫಾರಸು ಮಾಡಿಲ್ಲ. ಸತ್ಯ ವಿಚಾರ ತಿಳಿದುಕೊಳ್ಳದೆ ಅಪಪ್ರಚಾರ ಸರಿಯಲ್ಲ. ಹೆಸರಿನ ಜತೆ ಕಟೀಲು ಎಂಬ ಪವಿತ್ರ ಸ್ಥಳದ ನಂಟಿದೆ. ಆ ಹೆಸರಿಗೆ ಕಳಂಕ ತರುವ ಕೆಲಸ ಮಾಡಬಾರದು ಎಂದು ತಿಳಿಸಿದ್ದಾರೆ.