ಕೈ ಬಿರುಕು ಹೆಚ್ಚಿಸಿದ ಪಶ್ಚಾತ್ತಾಪ ಡಿಕೆಶಿ-ಸಿದ್ದು ದೂರ ದೂರ

ಬೆಂಗಳೂರು: ಪ್ರತ್ಯೇಕ ಧರ್ಮ ರಚನೆಗೆ ಹಿಂದಿನ ಸರ್ಕಾರ ಉತ್ಸಾಹ ತೋರಿದ್ದರ ಕುರಿತು ಸಚಿವ ಡಿ.ಕೆ.ಶಿವಕುಮಾರ್ ಪಶ್ಚಾತ್ತಾಪದ ಮಾತುಗಳಿಂದ ಕಾಂಗ್ರೆಸ್​ನೊಳಗೆ ಗಲಿಬಿಲಿ ವಾತಾವರಣ ಸೃಷ್ಟಿಯಾಗಿದೆ. ಡಿಕೆಶಿ ಹೇಳಿಕೆ ಯಿಂದ ಇಮೇಜ್​ಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಭಾವಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದು, ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡಿದರೆ ಎಗರಿ ಬೀಳುತ್ತಿದ್ದಾರೆ. ಶಿವಕುಮಾರ್ ಹೇಳಿಕೆಯನ್ನು ನೇರವಾಗಿ ಟೀಕಿಸಲೂ ಆಗದೆ, ಸರಿಯಾದ ರೀತಿ ವಿಮಶಿಸಲೂ ಆಗದೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಪಕ್ಷದಲ್ಲಿ ಡಿಕೆಶಿ ನಡೆ ಹಲವು ನಾಯಕರಿಗೆ ಸಮಾಧಾನ ತಂದಿದೆ. ಈ ಸಂಗತಿಯನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗದೆ ಇದ್ದರೂ ವೈಯಕ್ತಿಕವಾಗಿ ಮಾತನಾಡಿಕೊಂಡಿದ್ದಾರೆ. ಶಿವಕುಮಾರ್​ಗೂ ಹೇಳಿದ್ದಾರೆ. ಈ ವಿಚಾರದಲ್ಲಿ ಪರಿಸ್ಥಿತಿ ಇನ್ನಷ್ಟು ಸಾಗಿದರೆ ಅವರ ಪರವಾಗಿ ನಿಲ್ಲಲು ಹತ್ತಾರು ನಾಯಕರು ಸಿದ್ಧವಾಗಿದ್ದಾರೆ. ಡಿಕೆಶಿ ವಿರುದ್ಧ ಹೈಕಮಾಂಡ್​ಗೆ ದೂರು ನೀಡಿದರೆ, ಪ್ರತಿ ದೂರು ನೀಡುವುದಕ್ಕೂ ಸಿದ್ಧತೆ ಮಾಡಿಕೊಂಡಿದ್ದಾರೆ. ಒಟ್ಟಾರೆ ಇಡೀ ಬೆಳವಣಿಗೆಯಿಂದ ಪ್ರತ್ಯೇಕ ಧರ್ಮ ರಚನೆ ಪರ ಮತ್ತು ವಿರೋಧವಾಗಿ ಎರಡು ಗುಂಪುಗಳಾಗಿವೆ. ಹಿಂದಿನ ಸರ್ಕಾರ ಪ್ರತ್ಯೇಕ ಧರ್ಮ ರಚನೆಗೆ ವಿಶೇಷ ಉತ್ಸಾಹ ತೋರಿದಾಗ ಪಕ್ಷದೊಳಗೆ ಅಸಮಾಧಾನ ಇದ್ದರೂ ಸಿದ್ದರಾಮಯ್ಯ ವಿರುದ್ಧ ಯಾರೂ ಬಹಿರಂಗವಾಗಿ ಮಾತನಾಡಲು ಸಿದ್ಧರಿರಲಿಲ್ಲ. ಆದರೀಗ ನಿಧಾನವಾಗಿ ಪ್ರತಿರೋಧದ ದನಿ ಹೆಪ್ಪುಗಟ್ಟಲು ಆರಂಭವಾಗಿದೆ

ಉಪಚುನಾವಣೆಗಳು ನಡೆದಿರುವ ಹೊತ್ತಿನಲ್ಲಿ ಡಿ.ಕೆ.ಶಿವಕುಮಾರ ಇಂತಹ ಹೇಳಿಕೆ ನೀಡುವ ಅಗತ್ಯವಿರಲಿಲ್ಲ. ರಾಜಕೀಯದಲ್ಲಿ ಧರ್ಮದ ವಿಚಾರದ ಬಗ್ಗೆ ಮಾತನಾಡಲ್ಲ.

| ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ನಾಯಕ

ಮುಖ ನೋಡದಷ್ಟು ದೂರ

ಶನಿವಾರ ಜಂಟಿ ಸುದ್ದಿಗೋಷ್ಠಿಗೆ ಆಗಮಿಸಿದ್ದ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪರಸ್ಪರ ಮಾತೂ ಆಡಲಿಲ್ಲ, ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳಲೂ ಇಲ್ಲ. ಬೆಳಗ್ಗೆ 11 ಗಂಟೆಗೆ ಅಶೋಕ ಹೋಟೆಲ್​ನ ಮೊಗಸಾಲೆಯಲ್ಲಿ ಡಿಕೆಶಿ, ಡಿಸಿಎಂ ಪರಮೇಶ್ವರ್ ಸೇರಿ ಕಾಂಗ್ರೆಸ್ ನಾಯಕರೆಲ್ಲ ಆಸೀನರಾಗಿದ್ದರು. ಅಲ್ಲಿಗೆ ಸಿದ್ದರಾಮಯ್ಯ ಬಂದಾಗ ಉಳಿದೆಲ್ಲ ನಾಯಕರು ಅವರ ಬಳಿ ಹೋದರೂ ಡಿಕೆಶಿ ಅತ್ತ ಸರಿಯಲಿಲ್ಲ. ಫೋಟೋಗಾಗಿ ಫೋಟೋಗ್ರಾಫರ್ ಕೋರಿಕೊಂಡಾಗ ಮಾತ್ರ ಡಿಕೆಶಿ ಎರಡು ಹೆಜ್ಜೆ ಮುಂದಿಟ್ಟರು. ನಂತರ ಸುದ್ದಿಗೋಷ್ಠಿ ಕೊಠಡಿಗೆ ತೆರಳುವಾಗ ಸಿದ್ದರಾಮಯ್ಯ ಮತ್ತಿತರರು ಲಿಫ್ಟ್ ಏರಿದರೆ, ಡಿಕೆಶಿ ಮೆಟ್ಟಿಲೇರಿ ಹೊರಟರು. ವೇದಿಕೆಯಲ್ಲೂ ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳಲಿಲ್ಲ. ಮಾಧ್ಯಮದವರು ಪ್ರತ್ಯೇಕ ಧರ್ಮ ರಚನೆ ಕುರಿತು ಪ್ರತಿಕ್ರಿಯೆ ಬಯಸಿದಾಗ, ಸಿದ್ದರಾಮಯ್ಯ ಸಿಟ್ಟಾದರು. ಸುದ್ದಿಗೋಷ್ಠಿ ಬಳಿಕವೂ ಡಿಕೆಶಿ ಅಂತರ ಕಾಯ್ದುಕೊಂಡರು. ಇಬ್ಬರು ನಾಯಕರು ಅಕ್ಕಪಕ್ಕ ನಡೆದುಕೊಂಡು ಹೋದರೂ ಪರಿಚಯವೇ ಇಲ್ಲದವರಂತೆ ವರ್ತಿಸಿದ್ದು ಪರಿಸ್ಥಿತಿ ತೀವ್ರತೆಗೆ ಸಾಕ್ಷಿಯಾಗಿತ್ತು.

ಅಂದಿನ ಸಂಪುಟ ಸದಸ್ಯರೆಲ್ಲರೂ ಬಾಧ್ಯಸ್ಥರೇ…

ಬೆಂಗಳೂರು: ನಾನು ಧರ್ಮ, ಜಾತಿ ಒಡೆದಿಲ್ಲ, ವಿಭಜಿಸುವ ಉದ್ದೇಶವೂ ನನಗಿಲ್ಲ ಎಂದು ಮಾಜಿ ಸಿಎಂ ಹಾಗೂ ಪ್ರತ್ಯೇಕ ಧರ್ಮ ರಚನೆಗೆ ವಿಶೇಷ ಆಸಕ್ತಿ ವಹಿಸಿದ್ದ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯೆ ನೀಡಿ, ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಸಂಪುಟದಲ್ಲಿ ತೆಗೆದುಕೊಂಡ ನಿರ್ಧಾರ. ಈ ನಿರ್ಧಾರ ಮಾಡುವಾಗ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ಬಸವರಾಜ ರಾಯರೆಡ್ಡಿ, ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಸಹ ಇದ್ದರು. ಅದು ಎಲ್ಲರೂ ಸಮ್ಮತಿ ನೀಡಿದ ತೀರ್ವನವಾಗಿತ್ತು. ಡಿ.ಕೆ.ಶಿವಕುಮಾರ್ ಏಕೆ ಆ ರೀತಿ ಹೇಳಿದರೋ ಗೊತ್ತಿಲ್ಲ, ಏಕೆಂದು ಅವರನ್ನೇ ಕೇಳಿ? ಪ್ರತ್ಯೇಕ ಧರ್ಮದ ವಿಚಾರ ಉಪಚುನಾವಣೆ ಮೇಲೆ ಪ್ರಭಾವ ಬೀರಲ್ಲ, ವಿಧಾನಸಭಾ ಚುನಾವಣೆ ಫಲಿತಾಂಶಕ್ಕೂ ಸಂಪುಟ ತೀರ್ವನಕ್ಕೂ ಸಂಬಂಧವೇ ಇಲ್ಲ ಎಂದು ತಿಳಿಸಿದರು. ‘ಪಕ್ಷದಲ್ಲಿ ನಿಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ’ ಎಂಬ ಪ್ರಶ್ನೆಗೆ ಏರಿದ ದನಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನನ್ನನ್ನು ಯಾರೂ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ಸಂಪುಟ ಸಭೆಯಲ್ಲಿ ಏನೆಲ್ಲ ಚರ್ಚೆ ನಡೆಯಿತೆಂದು ಈಗ ಬಹಿರಂಗ ಪಡಿಸಲಾಗಲ್ಲ. ಆ ತೀರ್ವನಕ್ಕೆ ಸಂಪುಟ ಸದಸ್ಯರೆಲ್ಲರೂ ಬಾಧ್ಯಸ್ಥರು ಎಂದುತ್ತರಿಸಿದರು.

ಡಿಕೆಶಿ ಹೇಳಿಕೆಗೆ ಕುಹಕ ಬೇಡ

ಶಿವಮೊಗ್ಗ: ಪ್ರತ್ಯೇಕ ಧರ್ಮದ ಕುರಿತು ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಸ್ವಾಗತಾರ್ಹ. ಅವರ ಹೇಳಿಕೆ ಬಗ್ಗೆ ಕುಹಕವಾಡುವುದು, ವಿರೋಧಿಸುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ. ಡಿಕೆಶಿ ವಾಸ್ತವ ಸಂಗತಿ ಅರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಅವರ ಹೇಳಿಕೆಯಲ್ಲಿ ಯಾವುದೇ ರಾಜಕಾರಣ ನನಗೆ ಕಾಣುತ್ತಿಲ್ಲ. ಯಾವುದೇ ರಾಜಕೀಯ ಪಕ್ಷವಾದರೂ ಧರ್ಮ ಒಡೆಯುವ ಕೆಲಸ ಮಾಡಬಾರದು ಎಂದು ಪ್ರತಿಕ್ರಿಯಿಸಿದ್ದಾರೆ.

ಧರ್ಮ ವಿಭಜಿಸಿದ್ದು ಸಿದ್ದರಾಮಯ್ಯ

ಕೋಮುವಾದಿ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಜೆಡಿಎಸ್-ಕಾಂಗ್ರೆಸ್ ಒಂದಾಗುತ್ತಿವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ರಾಜ್ಯ ಬಿಜೆಪಿ ಟ್ವಿಟ್ಟರ್​ನಲ್ಲಿ ಟೀಕಿಸಿದೆ. ವೀರಶೈವ ಲಿಂಗಾಯತ ವಿಚಾರದಲ್ಲಿ ಧರ್ಮ ವಿಭಜನೆಗೆ ಮುಂದಾದವರು ಈಗ ನಮ್ಮನ್ನು ಕೋಮುವಾದಿ ಎನ್ನುತ್ತಿದ್ದಾರೆ. ಈ ವ್ಯಕ್ತಿಯಿರುವ ಪಕ್ಷಇತ್ತೀಚೆಗೆ ಜಾತಿ ಹೆಸರಿನಲ್ಲಿ ಗುಜರಾತ್ ಮತ್ತು ಪೂನಾದಲ್ಲಿ ಜನರನ್ನು ವಿಭಜಿಸಿತ್ತು ಎಂದು ಟೀಕಿಸಿದೆ.