Friday, 16th November 2018  

Vijayavani

Breaking News

ಹಿಂದೂ ಪಾಕಿಸ್ತಾನ ಹೇಳಿಕೆಗೆ ಬದ್ಧರಾದ ತರೂರ್​; ಕಾಂಗ್ರೆಸ್​ನಿಂದ ಎಚ್ಚರಿಕೆಯ ಪಾಠ

Thursday, 12.07.2018, 5:19 PM       No Comments

ನವದೆಹಲಿ: ಬಿಜೆಪಿ 2019ರಲ್ಲಿ ಮರಳಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಭಾರತವನ್ನು “ಹಿಂದೂ ಪಾಕಿಸ್ತಾನ” ರಾಷ್ಟ್ರವನ್ನಾಗಿ ಮಾಡಲಿದೆ ಎಂಬ ಕೇಂದ್ರದ ಮಾಜಿ ಸಚಿವ ಶಶಿ ತರೂರ್​ ಅವರ ಹೇಳಿಕೆಯಿಂದಾಗಿ ಉದ್ಭವಿಸಿರುವ ವಿವಾದದ ಹಿನ್ನೆಲೆಯಲ್ಲಿ, ತರೂರ್​ಗೆ ಸೂಚನೆ ನೀಡಿರುವ ಕಾಂಗ್ರೆಸ್​, ” ಸ್ವಯಂನಿಯಂತ್ರಣ ಮತ್ತು ಎಚ್ಚರಿಕೆ”ಯಿಂದ ಇರುವಂತೆ ತಾಕೀತು ಮಾಡಿದೆ.

“ಭಾರತದ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವ ಎದುರಿಸುತ್ತಿರುವ ಅಪಾಯಗಳು,” ಎಂಬ ವಿಷಯದ ಮೇಲಿನ ವಿಚಾರ ಸಂಕಿರಣವೊಂದರಲ್ಲಿ ಬುಧವಾರ ಪಾಲ್ಗೊಂಡಿದ್ದ ಶಶಿ ತರೂರ್​ ಅವರು,” ಬಿಜೆಪಿ ಈಗ ಗಳಿಸಿರುವ ಸ್ಥಾನಗಳನ್ನೇ ಮುಂದಿನ ಲೋಕಸಭೆಯಲ್ಲೂ ಗಳಿಸಿ ಗೆದ್ದರೆ, ಇಂದಿನ ನಮ್ಮ ಪ್ರಜಾಪ್ರಭುತ್ವ ಖಂಡಿತವಾಗಿಯೂ ಉಳಿಯುವುದಿಲ್ಲ. ಅವರಿಗೆ ಬೇಕಾದ ಸಂವಿಧಾನವನ್ನು ಅವರು ಬರೆದುಕೊಳ್ಳಲಿದ್ದಾರೆ. ಆ ಸಂವಿಧಾನದಲ್ಲಿ ಹಿಂದೂ ರಾಷ್ಟ್ರ ನಿರ್ಮಾಣದ ಅಂಶವೇ ಪ್ರಧಾನವಾಗಲಿದೆ. ಅಲ್ಪಸಂಖ್ಯಾತರನ್ನು ಕಡೆಗಣಿಸಲಿದ್ದಾರೆ. ಹಾಗೇನಾದರೂ ಆದರೆ, ಭಾರತವು “ಹಿಂದೂ ಪಾಕಿಸ್ತಾನ”ವಾಗಲಿದೆ. ಇದು, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧಿ, ನೆಹರು, ಸರ್ದಾರ್​ ಪಟೇಲ್​, ಮೌಲಾನಾ ಆಜಾದ್​ ಅವರ ಆಶಯಕ್ಕೆ ವಿರುದ್ಧವಾದದ್ದು,” ಎಂದಿದ್ದರು.

ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ

ಇಷ್ಟೇ ಅಲ್ಲದೆ, ಇಂದು ಫೇಸ್​ಬುಕ್​ ಪೋಸ್ಟ್​ವೊಂದನ್ನು ಪ್ರಕಟಿಸಿದ್ದ ಶಶಿ ತರೂರ್​, “ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ,” ಎಂದಿದ್ದರಲ್ಲದೇ, ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ವಿವರಿಸಿದ್ದರು. ” ಬಿಜೆಪಿ ಮತ್ತು ಆರ್​ಎಸ್ಎ​ಸ್​ನ​ ಹಿಂದೂ ರಾಷ್ಟ್ರ ಸಿದ್ಧಾಂತವೂ ಪಾಕಿಸ್ತಾನದ ಪ್ರತಿರೂಪ. ಯಾವುದೇ ರಾಷ್ಟ್ರವು ಯಾವುದೇ ಒಂದು ಧರ್ಮವನ್ನು ತನ್ನ ಪ್ರಧಾನ ಧರ್ಮವಾಗಿ ಅಂಗೀಕರಿಸಿದರೆ, ಅಲ್ಲಿನ ಅಲ್ಪಸಂಖ್ಯಾತ ಸಮುದಾಯವು ನಗಣ್ಯವಾಗಲಿದೆ. ಅದು “ಹಿಂದೂ ಪಾಕಿಸ್ತಾನ”ದಂತೆ ಎಂದು ಬರೆದುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಶಶಿ ತರೂರ್​ ಮತ್ತು ರಾಹುಲ್​ ಗಾಂಧಿ ಅವರು ಕ್ಷಮೆ ಕೋರಬೇಕು ಎಂದು ಬಿಜೆಪಿ ಆಗ್ರಹಿಸಿತ್ತು. ಆದರೆ, ಇದಕ್ಕೆ ಒಪ್ಪದ ಶಶಿ ತರೂರ್​, “ಅವರು ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿರುವಾಗ ನಾನ್ಯಾಕೆ ಕ್ಷಮೆ ಕೇಳಲಿ,” ಎಂದು ಹೇಳಿದ್ದರು. ಹೀಗಾಗಿ ವಿವಾದಗಳ ಬಗ್ಗೆ ಎಚ್ಚರಿಕೆ ವಹಿಸುವಂತೆಯೂ ಸಂಯಮ ಕಾಯ್ದುಕೊಲ್ಳುವಂತೆಯೂ ಕಾಂಗ್ರೆಸ್​ ಶಶಿ ತರೂರ್​ ಅವರಿಗೆ ಸೂಚನೆ ನೀಡಿದೆ ಎನ್ನಲಾಗಿದೆ.

https://m.facebook.com/story.php?story_fbid=10155962318898167&id=134735138166

Leave a Reply

Your email address will not be published. Required fields are marked *

Back To Top