More

  ಕಾಂಗ್ರೆಸ್ ಅಲೆ ತಡೆಯಲು ಸಾಧ್ಯವಿಲ್ಲ

  ಮದ್ದೂರು: ನಾಮಪತ್ರ ಸಲ್ಲಿಕೆ ದಿನವೇ ಫಲಿತಾಂಶದ ಚಿತ್ರಣ ಸಿಗಬೇಕು. ಕಾಂಗ್ರೆಸ್ ಅಲೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಜಿಲ್ಲೆಯ ಜನತೆ ರುಜುವಾತು ಮಾಡಬೇಕು. ಇಡೀ ರಾಷ್ಟ್ರದಲ್ಲೇ ಅತ್ಯುತ್ತಮ ಸರ್ಕಾರ ಇದೆ ಅಂದರೆ ಅದು ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಎಂದು ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

  ಸಮೀಪದ ಸೋಮನಹಳ್ಳಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರುವ ತಿಮ್ಮದಾಸ್ ಹೋಟೆಲ್ ಬಳಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

  ಚುನಾವಣಾ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದ ಜನಪರ ಸರ್ಕಾರ ನಮ್ಮದಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸುವ ಮೂಲಕ ನಮಗೆ ಮತ್ತು ಸರ್ಕಾರಕ್ಕೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

  ಶಾಸಕ ಕೆ.ಎಂ.ಉದಯ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದಂತೆ ಈ ಬಾರಿ ಸ್ಟಾರ್ ಚಂದ್ರು ಅವರನ್ನು ಅತಿ ಹೆಚ್ಚು ಲೀಡ್‌ನಲ್ಲಿ ಗೆಲ್ಲಿಸಬೇಕು. ಗೊಂದಲಕ್ಕೆ ಒಳಗಾಗಬೇಡಿ ಅಪಪ್ರಚಾರಕ್ಕೆ ಕಿವಿ ಕೊಡಬೇಡಿ. ನಿಮ್ಮೊಂದಿಗೆ ನಾನು, ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರ ಇದೆ ಎಂದರು.

  ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಾತನಾಡಿ, ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ. ಕೇಂದ್ರದಲ್ಲಿ ರಾಜ್ಯದ ಜನತೆ ಪರ ಧ್ವನಿ ಎತ್ತಲು ನನ್ನನ್ನು ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ವಿನಂತಿ ಮಾಡಿದರು.

  ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ನಾನು ಜೆಡಿಎಸ್ ಪರವಾಗಿ ಕೆಲಸ ಮಾಡುತ್ತೇನೆ ಎಂಬ ಮಾತನ್ನು ಕ್ಷೇತ್ರದಲ್ಲಿ ಹರಿಬಿಟ್ಟಿದ್ದಾರೆ. ತಾಲೂಕಿನಲ್ಲಿ ನಮ್ಮ ತಂದೆ ಜಿ.ಮಾದೇಗೌಡ ಅವರು ಕಟ್ಟಿದ ಕಾಂಗ್ರೆಸ್ ಪಕ್ಷಕ್ಕೆ ನಾನು ದ್ರೋಹ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

  ಶಾಸಕ ನರೇಂದ್ರಸ್ವಾಮಿ ಮಾತನಾಡಿ, ದೇಶದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ದೇಶ ಉಳಿಸುವ ಕೆಲಸವಾಗಬೇಕು. ದೇಶ ಉಳಿಸಲು ರಾಹುಲ್ ಗಾಂಧಿ ಹೋರಾಟ ಮಾಡುತ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದ್ದಾರೆ. 60 ವರ್ಷದ ಕಾಂಗ್ರೆಸ್ ಆಸ್ತಿ 600 ಕೋಟಿ ಇದ್ದರೆ, 15 ವರ್ಷ ಆಡಳಿತ ನಡೆಸಿದ ಬಿಜೆಪಿ ಆಸ್ತಿ 5 ಸಾವಿರ ಕೋಟಿ. ಇದು ಘೋಷಿತ ಮಾತ್ರ ಎಂದು ಹೇಳಿದರು.

  ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಇದು ಪ್ರಮುಖ ಚುನಾವಣೆ. ಅಭಿವೃದ್ಧಿ ಅಂದರೆ ಕಾಂಗ್ರೆಸ್. ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಜನರ ಮುಂದಿಟ್ಟಿದ್ದು, ಇಂದು ಅವುಗಳ ಅನುಷ್ಠಾನವೂ ಆಗಿದೆ ಎಂದರು.

  ವಿಧಾನಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಡವರ ಪರ, ಬಿಜೆಪಿ ಶ್ರೀಮಂತರ ಪರ. ಈಗ ಜೆಡಿಎಸ್ ಬಿಜೆಪಿ ಜತೆ ಹೋಗಿದೆ. ಅಭ್ಯರ್ಥಿ ಯಾರು ನಿಲ್ಲಬೇಕು ಅಂಥ ಮೋದಿ ತೀರ್ಮಾನ ಮಾಡುವ ಮಟ್ಟಿಗೆ ಆ ಪಕ್ಷ ಬಂದಿದೆ. ಈ ಜಿಲ್ಲೆಯ ಮಣ್ಣಿನ ಮಗನೇ ಲೋಕಸಭೆಗೆ ಹೋಗಬೇಕು. ಕಣ್ಣೀರು ಸುರಿಸುವವರು ಬೇಕಾಗಿಲ್ಲ, ಕಣೀರಧಾರೆಗೆ ಸೊಪ್ಪು ಹಾಕಬೇಡಿ ಎಂದು ಮನವಿ ಮಾಡಿದರು.

  ಸಭೆಯಲ್ಲಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ಮಾಜಿ ಶಾಸಕ ಬಿ.ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಚಿದಂಬರಂ, ಕೆಎಂಎಫ್ ನಿರ್ದೇಶಕ ಹರೀಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಶಿವಲಿಂಗೇಗೌಡ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್‌ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕಂಠಿಸುರೇಶ್, ಸದಸ್ಯರಾದ ರಾಜೀವ, ಬಸವರಾಜ್, ಮುಖಂಡರಾದ ಎಂ.ಸಿ.ಬಸವರಾಜ್, ಇಂತಿಯಾಜ್‌ವುಲ್ಲಾ ಖಾನ್, ಕೆ.ಆರ್.ಮಹೇಶ್, ಮಾರಸಿಂಗನಹಳ್ಳಿ ರಾಮಚಂದ್ರು ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts