ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಕುಂದಗೋಳ, ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಎಸ್. ಶಿವಳ್ಳಿ ಅವರ ಅಭಿವೃದ್ಧಿ ಕೆಲಸ ಮುಂದುವರಿಸಿಕೊಂಡು ಹೋಗಲು ಜನ ಕುಸುಮಾ ಅವರನ್ನು ಗೆಲ್ಲಿಸಲಿದ್ದಾರೆ ಎಂದರು.

ವೀರಶೈವರು ಕಾಂಗ್ರೆಸ್​ಗೆ ಮತ ಹಾಕುವುದಿಲ್ಲ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಅವರ ಮಾತಿಗೆ ಮಾನ್ಯತೆ ಸಿಗುತ್ತಿಲ್ಲ. ಲಿಂಗಾಯತರು ಮೊದಲು ಯಡಿಯೂರಪ್ಪ ಬೆನ್ನಿಗಿದ್ದರು. ಅಧಿಕ ಸಂಖ್ಯೆಯಲ್ಲಿ ಲಿಂಗಾಯತ ಸಂಸದರನ್ನು ಆಯ್ಕೆ ಮಾಡಿದರು. ಒಬ್ಬ ಲಿಂಗಾಯತ ಸಂಸದನನ್ನೂ ಮಂತ್ರಿ ಮಾಡಲು ಆಗಲಿಲ್ಲ ಎಂದು ಟೀಕಿಸಿದರು.

ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ತಮ್ಮ ಹಿತ ಕಾಯುವುದಿಲ್ಲ ಎಂದು ಗೊತ್ತಾದ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಸಮೂಹ ಕಾಂಗ್ರೆಸ್ ಪರವಾಗಿದೆ. ಮೇ 23ರ ನಂತರ ಕೇಂದ್ರದಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂದು ತಿಮ್ಮಾಪುರ ಹೇಳಿದರು.

ಕಾಂಗ್ರೆಸ್​ನಲ್ಲೂ ವೀರಶೈವರಿದ್ದಾರೆ: ಕಾಂಗ್ರೆಸ್ ಪಕ್ಷದಲ್ಲೂ ವೀರಶೈವ ಲಿಂಗಾಯತ ಮುಖಂಡರಿದ್ದೇವೆ, ಬರೀ ಬಿಜೆಪಿಯಲ್ಲಿ ಮಾತ್ರ ಅಲ್ಲ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವರ ಮತ ಕೇಳುವ ನೈತಿಕತೆ ಕಾಂಗ್ರೆಸ್​ಗೆ ಇಲ್ಲ ಎಂಬ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಕೇಂದ್ರದಲ್ಲಿ ಒಬ್ಬ ಲಿಂಗಾಯತ ಮುಖಂಡನನ್ನು ಮಂತ್ರಿ ಮಾಡಲು ಯಡಿಯೂರಪ್ಪನವರಿಗೆ ಆಗಲಿಲ್ಲ. ಲಿಂಗಾಯತರ ಪ್ರಶ್ನೆ ಆಗ ಎಲ್ಲಿ ಹೋಗಿತ್ತು? ಚುನಾವಣೆ ಸಂದರ್ಭದಲ್ಲಿ ಮಾತ್ರ ಲಿಂಗಾಯತರು ನೆನಪು ಆಗುತ್ತಾರೆ ಎಂದು ಟೀಕಿಸಿದರು.

ಲಿಂಗಾಯತ ಸಮುದಾಯಕ್ಕೆ ಸಿದ್ದರಾಮಯ್ಯ ಅನೇಕ ಕೊಡುಗೆ ನೀಡಿದ್ದಾರೆ. ಮಾಜಿ ಸಿಎಂ ಜೆ.ಎಚ್. ಪಟೇಲ್ ನಂತರ ಡಮ್ಮಿ ಲಿಂಗಾಯತ ಸಿಎಂಗಳು ಆಗಿ ಹೋಗಿದ್ದಾರೆ. ಸಮಾಜಕ್ಕೆ ಅವರ ಕೊಡುಗೆ ಶೂನ್ಯ ಎಂದರು.

ಶೈಲಜಾ ಕಣದಿಂದ ನಿವೃತ್ತಿ: ಕುಂದಗೋಳ ವಿಧಾನಸಭಾ ಉಪ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶೈಲಜಾ ಗೋಣಿ ಚುನಾವಣೆ ಕಣದಿಂದ ನಿವೃತ್ತಿ ಘೊಷಿಸಿದ್ದಾರೆ.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಖಾಸಗಿ ಹೋಟೆಲ್​ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಅವರು ಈ ನಿರ್ಧಾರ ಪ್ರಕಟಿಸಿದರು. ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರು ಮೇಲಿಂದ ಮೇಲೆ ಫೋನ್ ಮಾಡಿ ಹೇಳುತ್ತಿದ್ದರು. ಅವರ ಮಾತಿಗೆ ಬೆಲೆ ಕೊಟ್ಟು ಚುನಾವಣೆ ಕಣದಿಂದ ಹಿಂದೆ ಸರಿದಿದ್ದೇನೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರನ್ನು ಬೆಂಬಲಿಸುತ್ತೇನೆ ಎಂದು ಶೈಲಜಾ ಸುದ್ದಿಗಾರರಿಗೆ ತಿಳಿಸಿದರು.