ಇಂಧನ ದರ ಏರಿಕೆ: ಸೆ. 10ರಂದು ಭಾರತ ಬಂದ್​ಗೆ ಕರೆ ನೀಡಿದ ಕಾಂಗ್ರೆಸ್​

ನವದೆಹಲಿ: ಗಗನಕ್ಕೇರುತ್ತಿರುವ ಇಂಧನ ದರ ಹಾಗೂ ರೂಪಾಯಿ ಅಪಮೌಲ್ಯೀಕರಣ ವಿರುದ್ಧ ಕೆಂಡಾಮಂಡಲರಾಗಿರುವ ಕಾಂಗ್ರೆಸ್​ ಕಳೆದ ನಾಲ್ಕು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಎಲ್ಲ ವಿಭಾಗದಲ್ಲೂ ವಿಫಲವಾಗಿದೆ ಎಂದು ಕಿಡಿಕಾರಿದೆ.

ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್​ ಹಿರಿಯ ನಾಯಕ ಅಶೋಕ್​ ಗೆಹ್ಲೋಟ್​ ಅಧಿಕಾರಕ್ಕೆ ಬರುವ ಮುಂಚೆ ಪ್ರಧಾನಿ ಮೋದಿ ಅವರು ನೀಡಿದ್ದ ಭರವಸೆಗಳನ್ನೆಲ್ಲಾ ಈಡೇರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಸರ್ಕಾರದ ಆರ್ಥಿಕ ತಪ್ಪು ನಿರ್ವಹಣೆಯ ಪರಿಣಾಮವೇ ಇಂಧನ ದರ ಏರಿಕೆಯಾಗಲು ಕಾರಣ. ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಇಂಧನ ದರ ಏರಿಕೆಯಾದಾಗಲೆಲ್ಲಾ ಜನರ ಮೇಲಿನ ಹೊರೆಯನ್ನು ಇಳಿಸುವುದಕ್ಕಾಗಿ ಇಂಧನ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದ್ದೆವು ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ನಿದ್ರೆಯಲ್ಲೇ ಮುಳುಗಿ ಹೋಗಿರುವ ಮೋದಿ ಸರ್ಕಾರವನ್ನು ಜಾಗೃತಗೊಳಿಸಲು ನಮ್ಮ ಪಕ್ಷ ಸೆಪ್ಟೆಂಬರ್​ 10ರಂದು ‘ಭಾರತ ಬಂದ್’ಗೆ ಕರೆ ನೀಡಿದೆ ಎಂದು ಗೆಹ್ಲೋಟ್​ ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು.​

ದೇಶದ ಜನರಿಗೆ ನಾವು ಮನವಿ ಮಾಡುವುದೇನೆಂದರೆ ಸೆಪ್ಟೆಂಬರ್ 10ರಂದು ನಮ್ಮ ಜತೆ ಕೈಜೋಡಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕು. ದೇಶದ ಎಲ್ಲಾ ಮೂಲೆಗಳಿಂದಲೂ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಬೇಕು. ಅಲ್ಲದೆ, ಎಲ್ಲ ಕಾರ್ಯಕರ್ತರು ಹಾಗೂ ಎನ್​ಜಿಒಗಳು ಕೂಡ ಕೇಂದ್ರ ಸರ್ಕಾರದ ಆರ್ಥಿಕ ತಪ್ಪು ನಿರ್ವಹಣೆಯ ವಿರುದ್ಧ ಸಮರ ಸಾರಬೇಕೆಂದು ತಿಳಿಸಿದರು.

ಕಾಂಗ್ರೆಸ್​ನ ಮಾಧ್ಯಮ ವಕ್ತಾರ ರಣದೀಪ್​ ಸುರ್ಜೇವಾಲ ಅವರು ಕೂಡ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದರು. ಕಳೆದ ನಾಲ್ಕು ವರ್ಷದಿಂದ ಕೇಂದ್ರ ಸರ್ಕಾರ ಇಂಧನ ಮೇಲಿನ ತೆರಿಗೆಯೊಂದರಲ್ಲೇ 11,00,000 ಕೋಟಿ ರೂ. ಸಂಗ್ರಹಿಸಿದೆ. ಆದರೆ, ಅಷ್ಟು ಹಣ ಯಾರ ಜೇಬಿನಲ್ಲಿದೆ ಎಂದು ಹೇಳಲು ವಿಫಲವಾಗಿದೆ ಎಂದು ಆರೋಪಿಸಿದರು. (ಏಜೆನ್ಸೀಸ್​)