ಕಾಂಗ್ರೆಸ್​ ಶಾಸಕಾಂಗದ ಪಕ್ಷದ ಮತ್ತೊಂದು ಸಭೆ ಇಂದು: ಕೊನೆಯಾಗುವುದೇ ರೆಸಾರ್ಟ್​ ವಾಸ?

ಬೆಂಗಳೂರು: ಆಪರೇಷನ್​ ಕಮಲ, ಸರ್ಕಾರ ಉರುಳಿಸಲು ಬಿಜೆಪಿಯ ತೆರೆಮರೆಯ ಪ್ರಯತ್ನ, ಪಕ್ಷದೊಳಗಿನ ಭಿನ್ನಮತದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್​, ಇಂದು ಮತ್ತೊಂದು ಶಾಸಕಾಂಗ ಪಕ್ಷದ (ಸಿಎಲ್​ಪಿ) ಸಭೆ ಕರೆದಿದೆ.

ಜ.18ರಂದು ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ಕರೆದಿತ್ತು. ನಂತರ 19ರಂದು ಕೂಡ ಮತ್ತೊಂದು ಸಭೆ ನಡೆದಿತ್ತು. ಇಂದು ಮೂರನೇ ಬಾರಿಗೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗುತ್ತಿದೆ. ಸಭೆಗೆ ಎಲ್ಲ ಶಾಸಕರೂ ಹಾಜರಾಗಬೇಕು ಎಂದು ತಾಕೀತು ಮಾಡಲಾಗಿದೆ.

ಇಂದು ಬೆಳಗ್ಗೆ 11 ಗಂಟೆಗೆ ಸಿಎಲ್​ಪಿ ಸಭೆ ನಿಗದಿಯಾಗಿದ್ದು, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವ ವಹಿಸಲಿದ್ದಾರೆ. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್, ಪಕ್ಷದ ಉಸ್ತುವಾರಿ ಕೆ.ಸಿ ವೇಣುಗೋಪಾಲ್​ ಸೇರಿದಂತೆ ಬಹುತೇಕ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ಈ ಸಭೆಯಲ್ಲಿ ಎಂದಿನಂತೆ ಆಪರೇಷನ್​ ಕಮಲ, ಆನಂದ್​ ಸಿಂಗ್​ ಮತ್ತು ಗಣೇಶ್​ ನಡುವಿನ ಹೊಡೆದಾಟ, ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳಿವೆ.

ಈಗಾಗಲೇ ಬಿಜೆಪಿ ಶಾಸಕರು ರೆಸಾರ್ಟ್​ ವಾಸ ಮುಗಿಸಿ ಬೆಂಗಳೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ಬಹುತೇಕ ಕಾಂಗ್ರೆಸ್​ ಕೂಡ ವಾಸ್ತವ್ಯ ಮುಗಿಸುವ ಸಾಧ್ಯತೆಗಳಿವೆ.