ಕಾಂಗ್ರೆಸ್ ನಾಯಕರ ಸಭೆ

ಮುಧೋಳ: ಜಮಖಂಡಿ ಉಪಚುನಾವಣೆ ಹಿನ್ನೆಲೆ ನಗರದ ದಿ ಪಾರ್ಕ್ ಹೋಟೆಲ್​ನಲ್ಲಿ ಭಾನುವಾರ ಮಹತ್ವದ ಸಭೆ ನಡೆಯಿತು. ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮುಖಂಡರಾದ ಎಸ್.ಆರ್. ಪಾಟೀಲ, ಲಕ್ಷ್ಮೀ ಹೆಬ್ಬಾಳ್ಕರ್, ಅಜಯಕುಮಾರ ಸರನಾಯಕ, ಡಿ.ಆರ್. ಪಾಟೀಲ, ವೀರಣ್ಣ ಮತ್ತಿಕಟ್ಟಿ, ಆರ್.ಬಿ. ತಿಮ್ಮಾಪುರ, ವಿಜಯಾನಂದ ಕಾಶಪ್ಪನವರ, ಬಿ.ಆರ್. ಯಾವಗಲ್, ಪಾರಿಸಮಲ್ ಜೈನ್, ಮಾಣಿಕಂ ಠಾಕೂರ ಸಭೆಯಲ್ಲಿ ಭಾಗವಹಿಸಿದ್ದರು. ಜಮಖಂಡಿ ಚುನಾವಣೆ ಗೆಲ್ಲಲು ಮಾಡಬೇಕಾಗಿರುವ ಕಾರ್ಯಗಳ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ 63 ಮುಖಂಡರು ತಮಗೆ ಉಸ್ತುವಾರಿ ವಹಿಸಿದ್ದ ಹಳ್ಳಿಗಳಲ್ಲಿನ ವಾತಾವರಣದ ಬಗ್ಗೆ ವಿವರಿಸಿದರು. ಪಕ್ಷಕ್ಕೆ ಹಿನ್ನಡೆ ಉಂಟು ಮಾಡಲಿರುವ ಗ್ರಾಮಗಳಲ್ಲಿ ಕಾಂಗ್ರೆಸ್​ಗೆ ಅಧಿಕ ಪ್ರಮಾಣದಲ್ಲಿ ಮತದಾನ ಆಗುವ ನಿಟ್ಟಿನಲ್ಲಿ ಯಾವ ಕ್ರಮ ಅನುಸರಿಸಬೇಕೆಂಬುದರ ಕುರಿತು ರ್ಚಚಿಸಲಾಯಿತು. ಮತದಾರರನ್ನು ಸೆಳೆಯಲು ಜಾತಿವಾರು ಸಭೆಗಳನ್ನು ನಡೆಸುವ ಬಗ್ಗೆ ತೀರ್ವನಿಸಲಾಯಿತೆಂದು ತಿಳಿದು ಬಂದಿದೆ. ಸಭೆ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಐದು ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಸರ್ಕಾರ ರಚಿಸುವ ಕುರಿತು ಕೆಲವರು ಹಗಲುಗನಸು ಕಾಣುತ್ತಿದ್ದಾರೆ. ಸರ್ಕಾರ ಬಂಡೆಯಂತೆ ಸುಭದ್ರವಾಗಿದೆ ಎಂದರು.

ಡಾ. ವಿ. ಎನ್. ನಾಯಕ, ಗಿರೀಶ ಲಕ್ಷಾನಟ್ಟಿ, ದಯಾನಂದ ಪಾಟೀಲ, ಜಗನ್ನಾಥ ಪವಾರ, ಹಣಮಂತ ಅಡವಿ, ತಮ್ಮನಗೌಡ ಪಾಟೀಲ ಇದ್ದರು.