ಭಾರಿ ಅಂತರದಲ್ಲಿ ಕಾಂಗ್ರೆಸ್ ಗೆಲುವು

ಬಾಗಲಕೋಟೆ: ಜಮಖಂಡಿ ಉಪಕದನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಅವರ ಗೆಲುವಿನ ಅಂತರ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.

ಜಮಖಂಡಿ ಮಿನಿ ವಿಧಾನಸೌಧದ ಕೊಠಡಿಯಲ್ಲಿ ಅಳವಡಿಸಿದ್ದ 14 ಟೇಬಲ್​ಗಳಲ್ಲಿ 17 ಸುತ್ತು ನಡೆದ ಮತ ಎಣಿಕೆ ಹಾಗೂ ಅಂಚೆ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಆರಂಭದಿಂದ ಅಂತ್ಯದವರೆಗೂ ಮುನ್ನಡೆಯಲ್ಲೇ ಸಾಗಿ ಗೆಲುವಿನ ದಡ ಸೇರಿದ್ದು ವಿಶೇಷವಾಗಿತ್ತು.

17 ಸುತ್ತುಗಳ ಪೈಕಿ ಒಂದು ರೌಂಡ್​ನಲ್ಲೂ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಮೇಲುಗೈ ಪಡೆಯಲಿಲ್ಲ. ಮತ ಎಣಿಕೆಯಲ್ಲಿ ಯಾರು ಮುನ್ನಡೆ ಎಂದು ಕೇಳದೆ ಈ ಸುತ್ತಿನಲ್ಲಿ ಆನಂದ ಅವರ ಮುನ್ನಡೆ ಎಷ್ಟಾಯಿತು ಎನ್ನುವ ಪ್ರಶ್ನೆಗಳೇ ಎಲ್ಲರಿಂದ ತೂರಿಬರುತ್ತಿದ್ದವು.

ಹೀಗೆ ಸಾಗಿತು ಮತಗಳ ಅಂತರ: ಮೊದಲ ಸುತ್ತಿನಲ್ಲಿ 1726 ಮತಗಳಿಂದ ಮುನ್ನಡೆ ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ, 2ನೇ ಸುತ್ತಿನಲ್ಲಿ 3785ಕ್ಕೆ ಅಂತರ ಹೆಚ್ಚಿಸಿಕೊಂಡರೆ, 3ನೇ ಸುತ್ತಿನಲ್ಲಿ 5543, 4ನೇ ಸುತ್ತಿನಲ್ಲಿ 7148, 5ನೇ ಸುತ್ತಿನಲ್ಲಿ 9555 ಹಾಗೂ 6ನೇ ಸುತ್ತಿನಲ್ಲಿ 12791 ಮತಗಳ ಅಂತರ ಕಾಯ್ದುಕೊಂಡರು.

ನಂತರದಲ್ಲೂ ಮುಂದುವರಿದ ಅಂತರದ ನಾಗಾಲೋಟ 7ನೇ ಸುತ್ತಿಗೆ 16516 ಹಾಗೂ 8ನೇ ಸುತ್ತಿಗೆ 18651ಕ್ಕೆ ಹೆಚ್ಚಳವಾಗಿ 9ನೇ ಸುತ್ತಿನಲ್ಲಿ 20 ಸಾವಿರ ಗಡಿ ದಾಟಿತು. 11ನೇ ಸುತ್ತಿನಲ್ಲಿ 25 ಸಾವಿರ ಗಡಿದಾಟಿ ಮುನ್ನುಗ್ಗಿದರೆ 13ನೇ ರೌಂಡ್​ನಲ್ಲಿ 33 ಸಾವಿರ ಸನಿಹಕ್ಕೆ ಬಂದು ನಿಂತಿತು. ಹೀಗೆ ಪ್ರತಿ ರೌಂಡ್​ನಲ್ಲೂ ಅಂತರ ಹೆಚ್ಚುತ್ತ ಅಂತಿಮವಾಗಿ ಅದು 39480ಕ್ಕೆ ಬಂದು ನಿಂತಿತು.

ಅಂಚೆ ಮತಪತ್ರದಲ್ಲೂ ಕಾಂಗ್ರೆಸ್​ನ ಆನಂದ ನ್ಯಾಮಗೌಡ ಬಿಜೆಪಿ ಅಭ್ಯರ್ಥಿಗಿಂತ 6 ಮತಗಳನ್ನು ಹೆಚ್ಚಿಗೆ ಪಡೆದುಕೊಂಡರು. 45 ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಬಂದರೆ ಬಿಜೆಪಿಯ ಶ್ರೀಕಾಂತ ಕುಲಕರ್ಣಿ 39 ಮತ ಪಡೆದರು.

ಕಾಂಗ್ರೆಸ್​ನಲ್ಲಿ ಹಿಗ್ಗಿದ ಉತ್ಸಾಹ: ಬೆಳಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆಯಲ್ಲಿ ಮೊದಲಿಗೆ ಬಿಜೆಪಿ ಪ್ರಾಬಲ್ಯ ಇರುವ ಹಾಗೂ ಭಾರಿ ಮುನ್ನಡೆ ತಂದು ಕೊಡುತ್ತದೆ ಎನ್ನಲಾದ ಸಾವಳಗಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಇವಿಎಂ ಯಂತ್ರಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ, ಅಲ್ಲಿಯೇ ಬಿಜೆಪಿ ಅಭ್ಯರ್ಥಿ ಹಿನ್ನಡೆ ಅನುಭವಿಸಿದ್ದು ಕಮಲ ಪಡೆಯಲ್ಲಿ ಸೋಲಿನ ಕಾಮೋಡ ಆವರಿಸುವಂತೆ ಮಾಡಿತು. ಎಣಿಕೆ ಮುಂದುವರಿದಂತೆ ಬಿಜೆಪಿ ಪಡೆಯಲ್ಲಿ ಉತ್ಸಾಹ ಕಮರಿ ಹೋಯಿತು. ಇತ್ತ ಕೈ ಅಂಗಳದಲ್ಲಿ ಉತ್ಸಾಹ ಇಮ್ಮಡಿಗೊಳಿಸಿತು.

ಮತ ಎಣಿಕೆಯತ್ತ ಸುಳಿಯದ ಬಿಜೆಪಿ ಅಭ್ಯರ್ಥಿ: ಬೆಳಗ್ಗೆ ಕಡಪಟ್ಟಿ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಆನಂದ ನ್ಯಾಮಗೌಡ, ಐದಾರು ಸಾವಿರ ಮತಗಳ ಅಂತರದಲ್ಲಿ ಮುಂದಿದ್ದಾಗ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದರು. ಆದರೆ, ಮೊದಲ ಸುತ್ತಿನಿಂದಲೇ ಹಿನ್ನಡೆ ಅನುಭವಿಸುತ್ತ ಬಂದ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಮತ ಎಣಿಕೆ ಕೇಂದ್ರದ ಕಡೆಗೆ ಮುಖ ಮಾಡಲೇ ಇಲ್ಲ.

ನೋವಿನಲ್ಲೆ ಧನ್ಯವಾದ ಹೇಳಿದ ಸುಮಿತ್ರಮ್ಮ: ಜಮಖಂಡಿ ವಿಧಾನಸಭೆ ಕ್ಷೇತ್ರದ ಇತಿಹಾಸದಲ್ಲಿ ಆನಂದ ನ್ಯಾಮಗೌಡ ದಾಖಲೆಯ ಮತ ಗಳಿಸಿ ಗೆಲುವು ಪಡೆದ ಸಂಭ್ರಮ ಕಾಂಗ್ರೆಸ್ ಕಾರ್ಯ ಕರ್ತರಲ್ಲಿ ಮನೆ ಮಾಡಿತ್ತು. ಆದರೆ, ಆನಂದ ಅವರ ತಾಯಿ ಸುಮಿತ್ರಮ್ಮ ಅವರ ಮೊಗದಲ್ಲಿ ಗೆಲುವಿನ ಸಂತಸದ ಜತೆಗೆ ಪತಿಯ ಸಾವಿನ ನೋವು ಎದ್ದು ಕಾಣುತ್ತಿತ್ತು. ಮನೆಗೆ ಬಂದು ಶುಭಾಶಯ ಹೇಳುತ್ತಿದ್ದ ಅನೇಕ ಮುಖಂಡರು, ಕಾರ್ಯಕರ್ತರಿಗೆ ಆ ದುಃಖದಲ್ಲೇ ಧನ್ಯವಾದ ಹೇಳುತ್ತಿದ್ದರು.

ನಿಮ್ಮ ಉಡಿಗೆ ಹಾಕೇನಿ ಅಂದಿದ್ರು ಸುಮಿತ್ರಮ್ಮ: ಉಪಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಅವರ ತಾಯಿ ಸುಮಿತ್ರಮ್ಮ ಅವರು ಬಹಿರಂಗ ಸಭೆಯೊಂದರಲ್ಲಿ ಪತಿ ಅಗಲಿಕೆಯಿಂದ ಕಣ್ಣೀರು ಹಾಕಿದ್ದರು. ಎಲ್ಲರ ಒತ್ತಾಯದ ಮೇರೆಗೆ ಒಂದೆರಡು ಮಾತು ಮಾತ್ರ ಆಡಿದ್ದರು. ತಂದೆ ಇಲ್ಲದ ಮಗನನ್ನು ನಿಮ್ಮ ಉಡಿಗೆ ಹಾಕಿದ್ದೇನೆ. ನೀವು ಆತನನ್ನು ಒಪ್ಪಿ, ಅಪ್ಪಿಕೊಂಡು ಬೆಳೆಸಿರಿ ಎಂದಿದ್ದರು. ಇದು ಕ್ಷೇತ್ರದಲ್ಲಿ ವಿಶೇಷವಾಗಿ ಮಹಿಳೆಯರ ಮನಮಿಡಿಯುವಂತೆ ಮಾಡಿತ್ತು. ಇದು ಸಹ ಆನಂದ ಅವರಿಗೆ ಮತಗಳು ಹರಿದು ಬರುವಲ್ಲಿ ಕಾರಣವಾಗಿತ್ತು.

ಸಹೋದರ ಆನಂದ ಗೆಲುವು ತಂದೆಯ ಗೆಲುವು. ಗೆಲ್ಲುತ್ತಾನೆ ಅಂತ ಗೊತ್ತಿತ್ತು. ಆದರೆ, ಇಷ್ಟೊಂದು ಅಂತರದಲ್ಲಿ ಗೆಲ್ಲುತ್ತಾನೆಂದು ಅಂದುಕೊಂಡಿರಲಿಲ್ಲ. ತಂದೆ ಮೇಲೆ ಜನರಿಟ್ಟಿರುವ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ಇದು ಸಾಕ್ಷಿಯಾಗಿದೆ. ತಂದೆಯವರ ಅಗಲಿಕೆ ದುಃಖದಿಂದ ಇನ್ನೂ ನಾವು ಹೊರಬಂದಿಲ್ಲ. ಈ ನೋವಿನಲ್ಲಿ ಸಹೋದರನ ಗೆಲುವಿಗೆ ಹೇಗೆ ಸಂಭ್ರಮಿಸಬೇಕು ಎಂಬುದು ತಿಳಿಯುತ್ತಿಲ್ಲ. ತಂದೆಯವರಂತೆ ಸಹೋದರ ಆನಂದ ಸಹ ಜನರ ಸೇವೆ ಮಾಡುತ್ತಾರೆ.

| ಶ್ವೇತಾ ಪಡೆಣ್ಣವರ ಸಿದ್ದು ನ್ಯಾಮಗೌಡ ಅವರ ಪುತ್ರಿ