ಬಿಜೆಪಿ ಮುನ್ನಡೆಗೆ ಕಾಂಗ್ರೆಸ್ ಬ್ರೇಕ್

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಬಾರಿ ಪಡೆದಿದ್ದಕ್ಕಿಂತ ಹೆಚ್ಚಿನ ಮತಗಳನ್ನು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಗಳಿಸುವ ತವಕ ಬಿಜೆಪಿಯದ್ದಾಗಿದೆ. ಆದರೆ, ಜೆಡಿಎಸ್‌ನೊಂದಿಗೆ ಮೈತ್ರಿ ಏರ್ಪಟ್ಟಿರುವುದು ಮತ್ತು ಚುನಾವಣಾ ಕಣದಲ್ಲಿ ಆ ಪಕ್ಷದ ಅಭ್ಯರ್ಥಿ ಇಲ್ಲದಿರುವುದರಿಂದ ಬಿಜೆಪಿಯ ಮತ ಮುನ್ನಡೆಯನ್ನು ಕುಸಿಯುವಂತೆ ಮಾಡುವುದು ಕಾಂಗ್ರೆಸ್ ಪಕ್ಷದ ಲೆಕ್ಕಚಾರವಾಗಿದೆ.
ಪುತ್ರ ಸಂಜಯ್ ಜೀವಿಜಯಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಪಟ್ಟ ನೀಡಲಿಲ್ಲವೆಂದು ಪಕ್ಷದ ವರಿಷ್ಠರ ವಿರುದ್ಧ ಮಾಜಿ ಸಚಿವ ಬಿ.ಎ. ಜೀವಿಜಯ ಮುನಿಸಿಕೊಂಡಿದ್ದಾರೆ. ಹೀಗಾಗಿ, ಜೀವಿಜಯ ಮತ್ತವರ ಬೆಂಬಲಿಗರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲ.

ಆದರೆ, ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್‌ಗಿಂತ ಜೀವಿಜಯ ವೈಯಕ್ತಿಕ ನೆಲೆಯಲ್ಲಿ ಒಕ್ಕಲಿಗ ಮತದಾರರ ಮೇಲೆ ಪ್ರಾಬಲ್ಯ ಹೊಂದಿದ್ದಾರೆ. ಆ ಜನಾಂಗದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹೋಗುವಂತೆ ಮಾಡುವ ಸಾಮರ್ಥ್ಯ ಅವರಿಗಿದೆ. ಇದರೊಂದಿಗೆ, ಕಾಂಗ್ರೆಸ್ಸಿನಲ್ಲಿರುವ ಒಕ್ಕಲಿಗ ನಾಯಕರು ಶ್ರಮಿಸಿದಲ್ಲಿ ಈ ಚುನಾವಣೆಯಲ್ಲಿ ಆ ವರ್ಗ ‘ಕೈ’ ಹಿಡಿಯುವಂತೆ ಮಾಡಬಹುದಾಗಿದೆ. ಇದು ಫಲಿಸಿದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಮಡಿಕೇರಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲಿದ್ದಾರೆ.
ಕೆ.ಎಂ.ಗಣೇಶ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಜೆಡಿಎಸ್ ವರಿಷ್ಠರು ಜೀವಿಜಯ ಅವರನ್ನು ಕಡೆಗಣಿಸಿ ದ್ದಾರೆ. ಇದರಿಂದ ಮೈತ್ರಿ ಅಭ್ಯರ್ಥಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ನಿರ್ಮಾಣವಾಗಿರುವುದರಿಂದ ಮಾಜಿ ಸಿಎಂ ಸಿದ್ದರಾಮಯ್ಯ ಖುದ್ದು ಜೀವಿಜಯ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಈ ನಡುವೆ, ಜೀವಿಜಯ ಮತ್ತವರ ಬೆಂಬಲಿಗರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡು ನೇರವಾಗಿ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಮಾಡುವ ಮಾತೂ ಚಾಲ್ತಿಯಲ್ಲಿದೆ.

ಮೋದಿ ಮೇಲಿನ ಅಭಿಮಾನವೇ ಶ್ರೀರಕ್ಷೆ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಅಭಿಮಾನ ವ್ಯಕ್ತಪಡಿಸುತ್ತಿರುವವರು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ದ್ದಾರೆ. ಕಳೆದ ಎಂಎಲ್‌ಎ ಚುನಾವಣೆಯಲ್ಲಿ ಮಡಿಕೇರಿ ಶಾಸಕರ ವಿರುದ್ಧವಾಗಿದ್ದ ಸಂಘ ಪರಿವಾರದ ಮುಖಂಡರು- ಕಾರ್ಯಕರ್ತರು, ಈಗ ಮೋದಿಗಾಗಿ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮೋದಿ ಮೇಲಿನ ಅಭಿಮಾನ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಸಿಂಹಗೆ ಶ್ರೀರಕ್ಷೆಯಾಗಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರವಾಗಿ ಇನ್ನೂ ಪ್ರಚಾರ ಸಾಮಗ್ರಿ ಬಂದಿಲ್ಲವೆಂಬ ಕಾರಣಕ್ಕಾಗಿ ಮನೆ- ಮನೆ ಪ್ರಚಾರ ನಡೆಯುತ್ತಿಲ್ಲ. ಕಾಂಗ್ರೆಸ್ಸಿಗರು ಪ್ರಚಾರ ಮಾಡುತ್ತಿಲ್ಲವೆಂದು ಬಿಜೆಪಿಯವರು ಪ್ರಚಾರ ಚುರುಕುಗೊಳಿಸಿಲ್ಲ. ಕಾಂಗ್ರೆಸ್ ಪ್ರಚಾರ ಪ್ರಾರಂಭಿಸಿದಲ್ಲಿ ನಮ್ಮವರೂ ಅತಿ ಉತ್ಸಾಹದಿಂದ ಪ್ರಚಾರ ನಡೆಸುತ್ತಾರೆ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.

ಬಿಜೆಪಿ ಬಲಿಷ್ಠ ಸಂಘಟನೆ: ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಬಲಿಷ್ಠವಾಗಿರುವುದು ಪ್ಲಸ್ ಪಾಯಿಂಟ್. ಅಲ್ಲದೆ, ಈ ಹಿಂದೆ ಮಡಿಕೇರಿ ಶಾಸಕರ ವಿರುದ್ಧ ಧ್ವನಿ ಎತ್ತುತ್ತಿದ್ದವರು ಈಗ ಮೌನಕ್ಕೆ ಶರಣಾಗಿದ್ದಾರೆ. ಈ ನಡುವೆ, ಸಂಘ ಪರಿವಾರದ ನಾಯಕರು ಪ್ರಚಾರದಲ್ಲಿ ತೊಡಗಿರುವುದು ಬಿಜೆಪಿ ಅಭ್ಯರ್ಥಿಗೆ ವರದಾನವಾಗಿದೆ.


ಜಿಲ್ಲಾ ಕಾಂಗ್ರೆಸ್‌ಗೆ ಹೊಸ ನಾಯತಕ್ವ: ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಕೆ.ಕೆ.ಮಂಜುನಾಥ್‌ಕುಮಾರ್ ನೇಮಕಗೊಳ್ಳುವ ಮೂಲಕ ಪಕ್ಷಕ್ಕೆ ಹೊಸ ನಾಯತ್ವ ಸಿಕ್ಕಿದೆ. ಈ ನಾಯಕತ್ವವನ್ನು ಹಿರಿಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಮೂಡಿದೆ. ಚಂದ್ರಕಲಾ ಶಿಷ್ಯ ಮಂಜುನಾಥ್ ಜಿಲ್ಲಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಸಂಸತ್ ಚುನಾವಣೆ ಮೂಲಕ ತಮ್ಮ ಶಕ್ತಿ ಪ್ರದರ್ಶಿಸುವ ಸವಾಲು ಎದುರಿಸುತ್ತಿದ್ದಾರೆ.

ಪ್ರಚಾರ ವೈಖರಿ: ಬಿಜೆಪಿ ಅಭ್ಯರ್ಥಿ ಪ್ರತಾಪ್‌ಸಿಂಹ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಮೈತ್ರಿಕೂಟದ ಅಭ್ಯರ್ಥಿ ವಿಜಯಶಂಕರ್ ಕಾಂಗ್ರೆಸ್- ಜೆಡಿಎಸ್ ನಾಯಕರನ್ನು ಭೇಟಿ ಮಾಡುವ ಮೂಲಕ ಅವರ ವಿಶ್ವಾಸ ಗಳಿಸುವತ್ತ ಗಮನಹರಿಸಿದ್ದಾರೆ. ಇದರೊಂದಿಗೆ, ವಿವಿಧೆಡೆಯಲ್ಲಿ ಪ್ರಚಾರ ಕಚೇರಿ ತೆರೆಯುತ್ತಿದ್ದಾರೆ.

ಜಾತಿ ಲೆಕ್ಕಚಾರ: ಮಡಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಕ್ಕಲಿಗರ (ಅರೆಭಾಷೆ ಸೇರಿದಂತೆ) ಪ್ರಾಬಲ್ಯ ಹೆಚ್ಚಿದೆ. ತಮ್ಮ ಸಮುದಾಯದ ಅಭ್ಯರ್ಥಿ ಎಂಬ ಕಾರಣದಿಂದ ಬಹುತೇಕ ಗೌಡರು ಪ್ರತಾಪ್‌ಸಿಂಹ ಅವರ ಕೈ ಹಿಡಿಯುವ ಸಾಧ್ಯತೆ ಹೆಚ್ಚಿದೆ. ಕಳೆದ ಚುನಾವಣೆಯಲ್ಲೂ ಈ ಸಮುದಾಯ ಬೆಂಬಲ ನೀಡಿದ್ದ ಹಿನ್ನೆಲೆಯಲ್ಲಿ ಪ್ರತಾಪ್‌ಸಿಂಹ ಹೆಚ್ಚಿನ ಮುನ್ನಡೆ ಪಡೆಯಲು ಸಾಧ್ಯವಾಗಿತ್ತು.

ಒಕ್ಕಲಿಗ ಸಮುದಾಯದ ಕೆ.ಕೆ.ಮಂಜುನಾಥ್‌ಕುಮಾರ್ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಆ ಪಕ್ಷಕ್ಕೆ ಒಕ್ಕಲಿಗರ ಮತಗಳನ್ನು ಎಷ್ಟರ ಮಟ್ಟಿಗೆ ಹಾಕಿಸುತ್ತಾರೆ ಎಂಬ ಕುತೂಹಲ ಮೂಡಿದೆ. ಒಕ್ಕಲಿಗರಿಗೆ ಸ್ಥಾನಮಾನ ನೀಡಬೇಕೆಂದು ಪಕ್ಷದ ವೇದಿಕೆಯಲ್ಲಿ ಹೋರಾಟ ನಡೆಸುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ, ಜಿಲ್ಲಾ ವಕ್ತಾರ ವಿ.ಪಿ. ಶಶಿಧರ್ ಒಕ್ಕಲಿಗರ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತಾರೆ ಎಂದು ಕಾದು ನೋಡುವಂತಾಗಿದೆ.

ಕ್ಷೇತ್ರದಲ್ಲಿ 40 ಸಾವಿರದಷ್ಟು ಅಲ್ಪಸಂಖ್ಯಾತರು (ಮುಸ್ಲಿಂ, ಕ್ರಿಶ್ಚಿಯನ್), 40 ಸಾವಿರದಷ್ಟು ಪರಿಶಿಷ್ಟ ಜಾತಿ/ಪಂಗಡದ ಮತದಾರರಿದ್ದು, ಈ ಪೈಕಿ ಬಹುತೇಕ ಮತದಾರರು ಮೈತ್ರಿ ಅಭ್ಯರ್ಥಿಯ ‘ಕೈ’ ಹಿಡಿಯುವ ನಿರೀಕ್ಷೆಯನ್ನು ಕಾಂಗ್ರೆಸ್ ಇಟ್ಟುಕೊಂಡಿದೆ. ಕೊಡವ ಭಾಷಿಕರು 28 ಸಾವಿರ, ವೀರಶೈವ- ಲಿಂಗಾಯತರು 24 ಸಾವಿರ ಮತದಾರರಿದ್ದು, ಮೋದಿ ಮತ್ತು ಪಕ್ಷದ ಕಾರಣಕ್ಕಾಗಿ ಇವರು ತಮ್ಮನ್ನು ಕೈಬಿಡುವುದಿಲ್ಲ ಎಂಬ ನಿರೀಕ್ಷೆ ಬಿಜೆಪಿಯ ನಾಯಕರದ್ದಾಗಿದೆ.

ವಿಧಾನಸಭೆಯಲ್ಲಿ 16,015 ಮುನ್ನಡೆ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 16,015 (ಒಟ್ಟು 70,631) ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ (ಒಟ್ಟು 54,616) ಅವರನ್ನು ಸೋಲಿಸಿದ್ದರು. ಜೀವಿಜಯ ಗೆಲ್ಲುವ ನಿರೀಕ್ಷೆ ಹುಟ್ಟುಹಾಕಿದ್ದರು. ಆದರೆ, ಸಂಘ ಪರಿವಾರದ ವಿರೋಧದ ನಡುವೆಯೂ ಬಿಜೆಪಿ ಅಭ್ಯರ್ಥಿ ಭರ್ಜರಿ ಗೆಲುವು ದಾಖಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆ.ಪಿ.ಚಂದ್ರಕಲಾ 38,219 ಮತ ಪಡೆದಿದ್ದರು.

ಲೋಕಸಭೆಯಲ್ಲಿ 25,046 ಮುನ್ನಡೆ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಸಿಂಹ ಗೆಲ್ಲಲು ಕೊಡಗಿನಲ್ಲಿ ಭಾರಿ ಮತಗಳ ಮುನ್ನಡೆ ಸಾಧಿಸಿದ್ದು ಕಾರಣವಾಗಿತ್ತು. ಅದರಲ್ಲೂ, ಮಡಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿ 25,046 ಮತಗಳ ಮುನ್ನಡೆ ಸಾಧಿಸಿದ್ದರು. ಪ್ರತಾಪ್‌ಸಿಂಹ 81,837 ಮತ ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಡಗೂರು ಎಚ್.ವಿಶ್ವನಾಥ್ 56,791 ಮತ ಗಳಿಸಿದ್ದರು.

ದೇಶದ ಭವಿಷ್ಯ, ಭದ್ರತೆ ಹಾಗೂ ಆರ್ಥಿಕ ಸ್ಥಿರತೆ ಗಮನದಲ್ಲಿಟ್ಟುಕೊಂಡು ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸಲಾ ಗುವುದು.
ಡಾ.ಬಿ.ಸಿ.ನಂಜಪ್ಪ, ಪರಿಸರವಾದಿ, ವಾಲ್ನೂರು- ತ್ಯಾಗತ್ತೂರು

ದೇಶದ ಭದ್ರತೆ- ಅಭಿವೃದ್ಧಿ ವಿಷಯ ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಲಾಗುತ್ತದೆ. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ಕಳಕಳಿ ಹೊಂದಿರುವ ಅಭ್ಯರ್ಥಿ ಆಯ್ಕೆ ಆಗಬೇಕಾಗಿದೆ. ಗೆದ್ದ ನಂತರ ನನ್ನ ಗೆಲುವಿಗೆ ಮತದಾರರು ಕಾರಣರೆಂಬ ಕನಿಷ್ಠ ಯೋಚನೆ ಮಾಡುವ ವ್ಯಕ್ತಿಗೆ ಬೆಂಬಲ ನೀಡಬೇಕಾಗುತ್ತದೆ.
ಮಾದೇಟೀರ ಬೆಳ್ಳಿಯಪ್ಪ, ರಂಗಭೂಮಿ ಕಲಾವಿದ, ಕಡಗದಾಳು