ಅಧಿಕಾರ ತ್ಯಜಿಸಲು ಸಿದ್ಧರಾದ ಸಚಿವರು

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಉಂಟಾಗಿರುವ ಅಸ್ಥಿರತೆ ಭಯ ದೂರಮಾಡಲು ಎಚ್.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿರುವ ನಾಲ್ಕು ಸಚಿವರು ರಾಜೀನಾಮೆಗೆ ಸಿದ್ಧರಾಗಿದ್ದಾರೆ. ‘ನಾವು ರಾಜೀನಾಮೆ ನೀಡಲು ಸಿದ್ಧ, ನಮ್ಮ ಸ್ಥಾನವನ್ನು ಸಚಿವಾಕಾಂಕ್ಷಿಗಳಿಗೆ ಬಿಟ್ಟುಕೊಟ್ಟು ಸರ್ಕಾರ ಉಳಿಸಿಕೊಳ್ಳಿ’ ಎಂದು ನಾಲ್ವರು ಸಚಿವರು ಮುಖಂಡರ ಸಮ್ಮುಖ ಅಭಿಪ್ರಾಯ ನೀಡಿದ್ದಾರೆ.

ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಜಲಸಂಪನ್ಮೂಲ ಸಚಿವ ಶಿವಕುಮಾರ್ ತ್ಯಾಗಕ್ಕೆ ಸಿದ್ಧರಾದವರು ಎಂಬುದು ವಿಶೇಷ. ಬಜೆಟ್ ನೆಪದಲ್ಲಿ ಸೋಮವಾರ ಬೆಳಗ್ಗೆ ಉಪಹಾರಕ್ಕೆ ಸೇರಿದ್ದ ಕಾಂಗ್ರೆಸ್ ಸಚಿವರು ಮತ್ತು ಪ್ರಮುಖ ನಾಯಕರ ಸಭೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮ್ಮುಖದಲ್ಲೇ ಐವರು ಸಚಿವರು, ನಾವು ರಾಜೀನಾಮೆಗೆ ಸಿದ್ಧರಿದ್ದೇವೆ ಎಂದು ಘೋಷಿಸಿದ್ದಾರೆ. ಈ ಸಂಗತಿಯನ್ನು ಒಬ್ಬ ಸಚಿವರೇ ವಿಜಯವಾಣಿಗೆ ಖಚಿತಪಡಿಸಿದ್ದಾರೆ.

ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ, ನಿಗಮ-ಮಂಡಳಿಯಲ್ಲಿ ಅವಕಾಶ ಸಿಗಲಿಲ್ಲ ಎಂದು ಅನೇಕರು ಬೇಸರಗೊಂಡಿದ್ದಾರೆ. ಈ ಬೆಳವಣಿಗೆಯಿಂದ ಸರ್ಕಾರಕ್ಕೂ ಮುಜುಗರ, ಬಿಜೆಪಿಗೂ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ಬೆಳವಣಿಗೆಗೆ ಒಂದು ಕೊನೇ ಹಾಡಲೇ ಬೇಕಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಈ ರೀತಿ ಬೆಳವಣಿಗೆಗಳಿಂದ ಯಾರಿಗೂ ನೆಮ್ಮದಿ ಇಲ್ಲ. ಸರ್ಕಾರಕ್ಕೆ ವರ್ಚಸ್ಸೂ ಬರುವುದಿಲ್ಲ. ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಉಪಯೋಗವಿಲ್ಲ. ಈ ಕಾರಣಕ್ಕೆ ರಾಜೀನಾಮೆ ಕೊಡುವ ಪ್ರಸ್ತಾಪ ಸಭೆಯಲ್ಲಾಯಿತು ಎಂದು ಅವರು ವಿವರಿಸಿದರು.

ನಡೆ ಹಿಂದಿನ ಗುಟ್ಟು

# ರಾಜೀನಾಮೆ ನೀಡಿದರೆ ರಾಷ್ಟ್ರೀಯ ನಾಯಕರ ದೃಷ್ಟಿಯಲ್ಲಿ ಅನುಕಂಪ ಗಿಟ್ಟಿಸಬಹುದು ? ಸರ್ಕಾರ ಉಳಿಸಲು ಸಚಿವ ಸ್ಥಾನ ತ್ಯಾಗ ಮಾಡಿದರೆಂದು ಪಕ್ಷದಲ್ಲಿ ಹೆಸರು

# ಜನ ಸಾಮಾನ್ಯರಲ್ಲೂ ಸದಾಭಿಪ್ರಾಯ ಮೂಡಿಸಬಹುದು

# ಭವಿಷ್ಯದಲ್ಲಿ ಸರ್ಕಾರ ಅಥವಾ ಪಕ್ಷದಲ್ಲಿ ಅವಕಾಶ ಕಲ್ಪಿಸುವಾಗ ಆದ್ಯತೆ ಸಿಗಲಿದೆ

ಕುಮಾರ ಗಲಿಬಿಲಿ

ಕಾಂಗ್ರೆಸ್​ನ ಕೆಲವು ಹಾಗೂ ಜೆಡಿಎಸ್​ನ ಇಬ್ಬರು ಶಾಸಕರಿಗೆ ಬಿಜೆಪಿ ಆಫರ್ ನೀಡಿರುವ ಬಗ್ಗೆ ಸಿಎಂಗೆ ಖಚಿತ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸೋಮವಾರ ಕೊಂಚ ಗಲಿಬಿಲಿಗೊಂಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಶಾಸಕರು ಕೈ ಕೊಟ್ಟರೆ ಆಪತ್ತು ಎದುರಾಗಬಹುದೆಂದು ಅವರೇ ಖುದ್ದು ಇಬ್ಬರು ಶಾಸಕರ ಮನವೊಲಿಕೆ ಪ್ರಯತ್ನ ಮಾಡಿದ್ದಾರೆ.

ಮುನಿಯಪ್ಪ ನೇಮಕಕ್ಕೆ ಸಿಎಂ ಅಸ್ತು

ರಾಜಕೀಯ ಕಾರ್ಯದರ್ಶಿಯಾಗಿ ಕಾಂಗ್ರೆಸ್​ನಿಂದ ಸೂಚಿಸಲ್ಪಟ್ಟಿದ್ದ ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ ಹೆಸರಿಗೆ ಸಿಎಂ ಕುಮಾರಸ್ವಾಮಿ ಹಸಿರು ನಿಶಾನೆ ತೋರಿದ್ದಾರೆ. ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಪತ್ರ ಬರೆದಿದ್ದಾರೆ. ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಶರಣಬಸಪ್ಪ ದರ್ಶನಾಪುರ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಡಾ.ಕೆ.ಸುಧಾಕರ್, ದೆಹಲಿ ವಿಶೇಷ ಪ್ರತಿನಿಧಿಯಾಗಿ ಡಾ.ಅಜಯ್ ಸಿಂಗ್, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಟಿ.ವೆಂಕಟರಮಣಯ್ಯ, ಸಂಸದೀಯ ಕಾರ್ಯದರ್ಶಿ ಹುದ್ದೆಗೆ ಎಂ.ಎ.ಗೋಪಾಲಸ್ವಾಮಿ ಹೆಸರು ಇನ್ನೂ ಬಾಕಿ ಉಳಿದಿವೆ.