ಭಾರತ್​ ಬಂದ್​: ರೋಗಿಗಳ ಪರದಾಟ, ಬಸ್​ಗಳ ಮೇಲೆ ಕಲ್ಲು ತೂರಾಟ

ಬೆಂಗಳೂರು: ಪೆಟ್ರೋಲ್​, ಡೀಸೆಲ್​​ ಬೆಲೆ ಏರಿಕೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ರಾಜ್ಯದಲ್ಲಿ ಬಂದ್​ ಬಿಸಿ ಹೆಚ್ಚಾಗಿದೆ. ಇದರಿಂದ ಪ್ರಯಾಣಿಕರು, ರೋಗಿಗಳು ಸೇರಿ ಅನೇಕರು ಪರದಾಟ ನಡೆಸಿಸುತ್ತಿದ್ದಾರೆ.

ರೋಗಿ ಪರದಾಟ
ಗದಗ ಬಸ್ ನಿಲ್ದಾಣದಲ್ಲಿ ಆಂಧ್ರಪ್ರದೇಶ ಮೂಲದ ಪೆನ್ನಾಲ್ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರಗೆ ತೆರಳಲು ಬಸ್​ ಇಲ್ಲದೆ ಪರದಾಟ ನಡೆಸಿದ್ದಾರೆ. ಈ ವೇಳೆ ಮಾನವೀಯತೆ ಮೆರೆದ ಮಾಧ್ಯಮ ಸಿಬ್ಬಂದಿ ತಮ್ಮ ವಾಹನದಲ್ಲಿ ಅವರನ್ನು ಜಿಲ್ಲಾಸ್ಪತ್ರೆಗೆ ಬಿಟ್ಟಿದ್ದಾರೆ.

ದುಪ್ಪಟ್ಟು ಹಣ ವಸೂಲಿ
ಭಾರತ್ ಬಂದ್ ಹಿನ್ನಲೆ ದಾವಣಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಬೈಕ್ ರ‍್ಯಾಲಿ ನಡೆಸಿದ್ದು, ಪ್ರಮುಖ ರಸ್ತೆಗಳಿಗೆ ಹೋಗಿ ಬಂದ್​ಗೆ ಬಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ಬಸ್ ಸಂಚಾರ ಸಂಪೂರ್ಣ ಸ್ಥಗಿತ‌ಗೊಂಡಿದ್ದು, ಯಾವುದೇ ಕೆಎಸ್​ಆರ್​ಟಿಸಿ ಬಸ್​ಗಳು ಮತ್ತು ಖಾಸಗಿ ಬಸ್​ಗಳು ರಸ್ತೆಗಿಳಿಯದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ಇನ್ನು ಇವುಗಳ ಮಧ್ಯೆ ಆಟೊ ಸವಾರರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದು ವರದಿಯಾಗಿವೆ.

ಕುದುರೆ ಏರಿ ಪ್ರತಿಭಟನೆ
ಬಳ್ಳಾರಿ ಶಾಸಕ ನಾಗೇಂದ್ರ ಕುದುರೆ ಮೇಲೆ ಕುಳಿತು ವಿನೂತನ ಪ್ರತಿಭಟನೆ ನಡೆಸಿ, ರೈಲು ನಿಲ್ದಾಣದಿಂದ ರಾಯಲ್ ವೃತ್ತಕ್ಕೆ ತೆರಳಿದ್ದಾರೆ. ಈ ವೇಳೆ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪೆಟ್ರೋಲ್ ಬೆಲೆ ಜಾಸ್ತಿಯಾದರೆ ಕುದುರೆಯೇ ಗತಿ ಎನ್ನುವ ಸಂದೇಶ ನೀಡಿದರು.

ಕಲ್ಲು ತೂರಾಟ
ಮಂಗಳೂರಿನಲ್ಲಿ ದುಷ್ಕರ್ಮಿಗಳು ಬಸ್​ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಮುಂಜಾನೆಯೇ ಮಂಗಳೂರು ಕಮಿಷನರ್​ ಟಿ.ಆರ್​.ಸುರೇಶ್​ ಎಚ್ಚರಿಕೆ ನೀಡಿದ್ದಾರೆ.
ಬಲವಂತದ ಬಂದ್ ಮಾಡುವುದಕ್ಕೆ ಬಿಡುವುದಿಲ್ಲ. ಬಲವಂತ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಬಿಗಿ ಪೊಲೀಸ ಬಂದೋಬಸ್ತ್ ಮಾಡಿದ್ದೇವೆ ಎಂದು ದಿಗ್ವಿಜಯ ನ್ಯೂಸ್​ಗೆ ಹೇಳಿಕೆ ನೀಡಿದ್ದಾರೆ.