ಬಂಡಾಯ ಶಮನಕ್ಕೆ ನಿಗಮ-ಮಂಡಳಿ

ಬೆಂಗಳೂರು: ಶನಿವಾರ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ತೀವ್ರ ಲಾಬಿ ಮಾಡುತ್ತಿದ್ದವರು ಬಂಡಾಯ ಏಳದಂತೆ ತಡೆಯುವ ಸಲುವಾಗಿ 19 ಶಾಸಕರಿಗೆ ನಿಗಮ- ಮಂಡಳಿ ಹಾಗೂ 7 ಶಾಸಕರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಿ ಸಂತುಷ್ಠ ಪಡಿಸುವ ಪ್ರಯತ್ನವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಿದೆ. ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಅವರನ್ನು ನೇಮಿಸಲು ನಿರ್ಧರಿಸಲಾಗಿದೆ.

ಸಂಸದೀಯ ಕಾರ್ಯದರ್ಶಿಗಳ ಆಯ್ಕೆ: ಸೌಮ್ಯಾ ರೆಡ್ಡಿ ಜತೆಗೆ ಶಾಸಕರಾದ ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಹಿರಿಯ ನಾಯಕ ಮುನಿಯಪ್ಪ ಪುತ್ರಿ ರೂಪಾ ಶಶಿಧರ್, ಐವನ್ ಡಿಸೋಜಾ, ಮಹಂತೇಶ ಕೌಜಲಗಿ, ಕೆ. ಗೋವಿಂದರಾಜ್, ರಾಘವೇಂದ್ರ ಹಿಟ್ನಾಳ್ ಅವರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಲಾಗುತ್ತದೆ.

ಬಲ ತಂದ ಪಂಚ ರಾಜ್ಯ?

ಸಂಪುಟ ವಿಸ್ತರಣೆಗಷ್ಟೇ ಅಂಟಿಕೊಂಡಿದ್ದ ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಮುಖಂಡರಿಗೆ ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆ ಫಲಿತಾಂಶ ಬಲ ತಂದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಹಾಗಾಗಿ ವಿಸ್ತರಣೆ ಮಾತ್ರ ಸಾಕು ಎನ್ನುತ್ತಿದ್ದರು. ಆದರೆ 3 ರಾಜ್ಯದಲ್ಲಿ ಸರ್ಕಾರ ರಚನೆ ನಂತರ ಕಾಂಗ್ರೆಸ್ ವಿಶ್ವಾಸ ವೃದ್ಧಿಸಿದ್ದು, ಕೈಬಿಟ್ಟವರು ಬಂಡಾಯ ಎದ್ದರೂ ಸರಿಪಡಿಸಬಹುದು ಎಂಬ ಕಾರಣಕ್ಕೆ ಇಬ್ಬರು ಸಚಿವರನ್ನು ಬದಲಾಯಿಸುವ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸಚಿವಗಿರಿಗೆ ಕೈಗೂಡದ ದ್ವಯರ ಪ್ರಯತ್ನ

ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಅವರನ್ನು ಹೇಗಾದರೂ ಮಾಡಿ ಸಚಿವ ರಾಗಿಸಬೇಕು ಎಂಬ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಪ್ರಯತ್ನ ಕೊನೆಗೂ ಫಲಗೂಡಲಿಲ್ಲ. ಅಲ್ಪಸಂಖ್ಯಾತ ಕೋಟಾದಲ್ಲಿ ಹ್ಯಾರಿಸ್​ಗೆ ಅವಕಾಶ ನೀಡುವಂತೆ ನವದೆಹಲಿಯಲ್ಲಿ ಅನೇಕ ನಾಯಕರನ್ನು ಭೇಟಿ ಮಾಡಿ ಒತ್ತಡ ಹೇರಲಾಯಿತು. ಅಂತಿಮವಾಗಿ ರಹೀಂಖಾನ್​ಗೆ ಅದೃಷ್ಟ ಒಲಿದಿತ್ತು.

ಉತ್ತರಕ್ಕೆ ಪ್ರಾಶಸ್ಱ: ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಸರ್ಕಸ್​ನಲ್ಲಿ ಉದ್ದೇಶಪೂರ್ವಕವಾಗಿಯೋ ಅಥವಾ ಅಚಾನಕ್ಕಾಗಿಯೋ ಉತ್ತರ ಕರ್ನಾಟಕಕ್ಕೆ ಪ್ರಾಶಸ್ಱ ಸಿಕ್ಕಿದೆ. ಸಚಿವರಾಗಲಿರುವ ಎಂಟಿಬಿ ನಾಗರಾಜ್ ಹೊರತುಪಡಿಸಿ ಉಳಿದ 7 ಜನರೂ ಉತ್ತರ ಕರ್ನಾಟಕ ಭಾಗಕ್ಕೇ ಸೇರಿದ್ದಾರೆ.