ಲೋಕಸಭಾ ಚುನಾವಣೆ ಎದುರಿಸಲು ಮತ್ತೆ ಮೈತ್ರಿ

ಬೆಂಗಳೂರು: ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಎದುರಿಸಲು ಜೆಡಿಎಸ್ ನಿರ್ಧರಿಸಿದೆ. ಮಂಗಳವಾರ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಲೋಕಸಭಾ ಚುನಾವಣೆ ಎದುರಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಬಹುತೇಕ ಎಲ್ಲ ಶಾಸಕರು ಕಾಂಗ್ರೆಸ್ ಜತೆ ಮೈತ್ರಿಗೆ ಒಲವು ವ್ಯಕ್ತಪಡಿಸಿದರು.

ಸರ್ಕಾರ ರಚನೆ ಸೂತ್ರದಂತೆ ಸೀಟು ಹಂಚಿಕೊಳ್ಳಬೇಕು. ಈ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಪೂರ್ಣ ಅಧಿಕಾರ ನೀಡಲಾಯಿತು. ಅವರು ಸಿಎಂ ಹಾಗೂ ಪಕ್ಷದ ಅಧ್ಯಕ್ಷರ ಜತೆಗೆ ಸಮಾಲೋಚಿಸಿ ನಂತರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜತೆೆ ಸೀಟು ಹಂಚಿಕೆ ಮಾಡಿಕೊಳ್ಳಬೇಕೆಂದು ಸಭೆ ಅಭಿಪ್ರಾಯಪಟ್ಟಿತು. ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಬಗ್ಗೆ ಜೆಡಿಎಸ್ ಮೃದುಧೋರಣೆ ಹೊಂದಿದೆ ಎಂಬ ಭಾವನೆ ಎಲ್ಲಿಯೂ ಬರಬಾರದು. ಕೇಂದ್ರ ಸರ್ಕಾರದ ನೀತಿಗಳನ್ನು ಕಟುಮಾತಿನಲ್ಲಿ ಟೀಕಿಸಬೇಕೆಂದು ಪಕ್ಷದ ಶಾಸಕರಿಗೆ ಮುಖಂಡರು ಸೂಚನೆ ನೀಡಿದರು.

ಮಾಜಿಗಳಿಗೆ ಆದ್ಯತೆ: ನಿಗಮ-ಮಂಡಳಿಗಳಲ್ಲಿ ಶಾಸಕರು ಮಾತ್ರವಲ್ಲದೆ ಸೋತವರಿಗೂ ಆದ್ಯತೆ ನೀಡಬೇಕಾಗಿದೆ. ಈ ವಿಚಾರದಲ್ಲಿ ಹಾಲಿ ಶಾಸಕರು ರಾಜಿಗೆ ಸಿದ್ಧರಿರಬೇಕು. ಶಾಸಕರ ಜತೆಗೆ ಮಾಜಿ ಶಾಸಕರಿಗೂ ನಿಗಮ, ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಲಾಗುತ್ತದೆ. ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲಾಗುತ್ತದೆ ಎಂಬುದಾಗಿ ಸಿಎಂ ಕುಮಾರಸ್ವಾಮಿ ತಿಳಿಸಿದರು ಎನ್ನಲಾಗಿದೆ.

ಮುಜುಗರ ಬೇಡ: ಸಮ್ಮಿಶ್ರ ಸರ್ಕಾರಕ್ಕೆ ಮುಜುಗರವಾಗುವಂಥ ಹೇಳಿಕೆ ನೀಡದಂತೆ ಕಾಂಗ್ರೆಸ್ ಮುಖಂಡರಿಗೆ ತಿಳಿಸಿ ಎಂಬ ಅಭಿಪ್ರಾಯ ಕೆಲ ಶಾಸಕರಿಂದ ವ್ಯಕ್ತವಾಯಿತು. ಅದಕ್ಕೆ, ನಾನಂತೂ ಎಲ್ಲಿಯೂ ಮುಜುಗರವಾಗುವ ಹೇಳಿಕೆ ನೀಡುತ್ತಿಲ್ಲ. ನಮ್ಮ ಶಾಸಕರೂ ನೀಡುವುದು ಬೇಡ. ಕಾಂಗ್ರೆಸ್ ಮುಖಂಡರ ಜತೆ ಮಾತುಕತೆ ನಡೆಸುತ್ತೇನೆ ಎಂದು ಸಿಎಂ ಹೇಳಿದರು.

ರೇವಣ್ಣ ಹೇಳಿಕೆಗೆ ಬೆಂಬಲ

ಜೆಡಿಎಸ್ ಸಚಿವರ ಖಾತೆಗಳಿಗೆ ಸಂಬಂಧಿಸಿದ ನಿಗಮ-ಮಂಡಳಿಗಳಿಗೆ ಕಾಂಗ್ರೆಸ್ ಶಾಸಕರನ್ನು ನೇಮಿಸಿರುವ ಬಗ್ಗೆ ಸಚಿವ ಎಚ್.ಡಿ.ರೇವಣ್ಣ ಆಕ್ಷೇಪ ವ್ಯಕ್ತಪಡಿಸಿರುವ ಕ್ರಮಕ್ಕೆ ಜೆಡಿಎಲ್​ಪಿ ಸಭೆಯಲ್ಲಿ ಶಾಸಕರು ಬೆಂಬಲ ವ್ಯಕ್ತಪಡಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಸಚಿವ ಸಾ.ರಾ.ಮಹೇಶ್, ನಮ್ಮ ಬಳಿ ಇರುವ ಇಲಾಖೆಗಳಿಗೆ ಅವರು ನಿಗಮ-ಮಂಡಳಿಗಳ ಅಧ್ಯಕ್ಷರನ್ನು ನೇಮಿಸಿದರೆ ಹೇಗೆ? ಕಾಂಗ್ರೆಸ್​ನಿಂದ ಆಯ್ಕೆಯಾದ ಗೃಹ ಸಚಿವರಿಗೆ ಜೆಡಿಎಸ್ ಶಾಸಕರನ್ನು ಸಲಹೆಗಾರರಾಗಿ ನೇಮಿಸಿದರೆ ಅವರು ಒಪು್ಪತ್ತಾರೆಯೇ ಎಂದರು. ನಿಗಮ-ಮಂಡಳಿಗಳ ನೇಮಕಾತಿ ವಿಷಯದಲ್ಲಿ ನಮ್ಮ ಸಚಿವರು-ಶಾಸಕರಿಗೆ ಬೇಸರ ಆಗಿರುವುದು ನಿಜ. ಆದರೆ ಅದನ್ನು ಬಹಿರಂಗವಾಗಿ ಹೇಳಿಕೊಳ್ಳಬಾರದು ಎಂದು ಪಕ್ಷದ ವೇದಿಕೆಯಲ್ಲಿ ರ್ಚಚಿಸಿದ್ದೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *