ಕೈಯಲ್ಲಿ ಭುಗಿಲೆದ್ದಿದೆ ಅಸಮಾಧಾನ

ಶಿರಸಿ: ಶಿರಸಿ ನಗರಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಉಂಟಾಗಿದ್ದ ಅಸಮಾಧಾನ ಇನ್ನಷ್ಟು ಬಿಗಡಾಯಿಸುತ್ತಿದೆ. ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಒಂದು ದಿಕ್ಕು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಪೇಂದ್ರ ಪೈ ಇನ್ನೊಂದು ದಿಕ್ಕು ಎಂಬಂತಾಗಿದ್ದು, ಇದರ ಲಾಭವನ್ನು ಬಿಜೆಪಿ ಪಡೆಯುವ ಸಾಧ್ಯತೆ ದಟ್ಟವಾಗುತ್ತಿದೆ.
19ನೇ ವಾರ್ಡ್ ಕಸ್ತೂರಬಾ ನಗರಕ್ಕೆ ಟಿಕೆಟ್ ಹಂಚಿಕೆ ಕುರಿತಂತೆ ಉಂಟಾದ ತೀವ್ರ ಪೈಪೋಟಿ ಈ ಅಸಮಾಧಾನಕ್ಕೆ ಕಾರಣವಾಗಿದೆ. ನಜೀರ್ ಅಹಮ್ಮದ್ ಸಾಬ್ ಅವರಿಗೆ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಟಿಕೆಟ್ ಘೊಷಿಸಿದ್ದರು. ಆದರೆ, ಮಧು ಬಿಲ್ಲವ ಸೇರಿದಂತೆ ಹಲವು ಪ್ರಬಲ ಆಕಾಂಕ್ಷಿಗಳಿದ್ದರೂ ಅವರನ್ನು ಪರಿಗಣಿಸಲಾಗಿಲ್ಲ ಎಂಬುದು ಬ್ಲಾಕ್ ಅಧ್ಯಕ್ಷ ಉಪೇಂದ್ರ ಪೈ ಮತ್ತು ವಾರ್ಡ್​ನ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ಜೊತೆ ಹಾಲಿ ಅಧ್ಯಕ್ಷ ಪ್ರದೀಪ ಶೆಟ್ಟಿ ಅವರಿಗೆ ಟಿಕೆಟ್ ನೀಡಬೇಕೆ ಅಥವಾ ಬೇಡವೇ ಎಂಬ ಬಗೆಗೆ ಒಂದಿಷ್ಟು ಗೊಂದಲ ಹುಟ್ಟಿಕೊಂಡಿತ್ತು. ಪ್ರದೀಪ ಶೆಟ್ಟಿ ಕಳೆದ ಅವಧಿಯಲ್ಲಿ ಬಿಜೆಪಿ ಸದಸ್ಯರ ಬೆಂಬಲ ಪಡೆದು ಬಂಡಾಯವಾಗಿ ಸ್ಪರ್ಧಿಸಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದರು ಎಂಬ ಅಸಮಾಧಾನ ಜಿಲ್ಲಾ ನಾಯಕರಲ್ಲಿತ್ತು. ಪ್ರದೀಪ ಶೆಟ್ಟಿ ಇದುವರೆಗೂ ಪ್ರತಿನಿಧಿಸಿದ್ದ ಗಣೇಶನಗರ 1ನೇ ವಾರ್ಡ್ ಈ ಬಾರಿ ಮಹಿಳಾ ಮೀಸಲು ಕ್ಷೇತ್ರವಾಗಿದ್ದರಿಂದ ಅವರನ್ನು ಮೂಲೆಗುಂಪಾಗಿಸುವ ಯತ್ನವೂ ನಡೆದಿತ್ತು. ಆದರೆ, ಪಕ್ಷದಲ್ಲಿ ಹಿಡಿತ ಹೊಂದಿರುವ ಪ್ರದೀಪ ಶೆಟ್ಟಿ, 12ನೇ ವಾರ್ಡ್​ನ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಎಲ್ಲ ಗೊಂದಲಗಳು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಉಪೇಂದ್ರ ಪೈ ಮತ್ತು ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಅವರ ನಡುವೆ ಕಂದಕ ಸೃಷ್ಟಿಸಿವೆ. ಜಿಲ್ಲಾ ಕಚೇರಿಯಲ್ಲಿ ಈ ಆಕ್ರೋಶ ಹೋಯ್ ಕೈವರೆಗೂ ತಲುಪಿದೆ.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಉಂಟಾದ ನಾಯಕರ ಅಸಮಾಧಾನದಿಂದ ಕಾರ್ಯಕರ್ತರು ಕಂಗಾಲಾಗಿದ್ದಾರೆ. ಪ್ರತಿ ವಾರ್ಡ್​ನಲ್ಲೂ ಕಾರ್ಯಕರ್ತರು ಬಣಗಳಾಗಿ ಹಂಚಿ ಹೋಗುತ್ತಿದ್ದು, ಇದನ್ನು ಎದುರಾಳಿ ಬಿಜೆಪಿ ಸಮರ್ಥವಾಗಿ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತಿದೆ. ‘ಚುನಾವಣೆ ಎದುರಿನಲ್ಲಿ ಟಿಕೆಟ್ ಆಕಾಂಕ್ಷಿಗಳು ಇರುವುದು ಸಹಜ. ಈಗ ಎಲ್ಲರೂ ಒಂದೇ’ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದರೂ ಮುರಿದ ಮನಸ್ಸುಗಳ ಒಗ್ಗೂಡಿಸುವ ಕಸರತ್ತನ್ನೂ ಪಕ್ಷದ ವರಿಷ್ಠರು ಒಳಗೊಳಗೇ ನಡೆಸ್ತುತಿದ್ದಾರೆ.

ಜೆಡಿಎಸ್​ನಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳು!:  ಟಿಕೆಟ್ ಕೈ ತಪ್ಪಿರುವುದರ ಮುನ್ಸೂಚನೆ ಪಡೆದ ಕಾಂಗ್ರೆಸ್​ನ ಮೂವರು ಆಕಾಂಕ್ಷಿಗಳು ನಾಮಪತ್ರ ಸಲ್ಲಿಕೆಯ ಅಂತಿಮ ದಿನ ಜೆಡಿಎಸ್​ನ ಬಿ ಫಾರಂ ಪಡೆದು ಸ್ಪರ್ಧಿಸಿದ್ದಾರೆ. 20ನೇ ವಾರ್ಡ್​ನ ಸದಸ್ಯೆಯಾಗಿದ್ದ ಶೀಲೂ ಬ್ಲೇಜ್ ವಾಜ್ ಟಿಕೆಟ್ ಸಿಗದಿದ್ದರಿಂದ ಅಸಮಾಧಾನಗೊಂಡು ಜೆಡಿಎಸ್​ನಿಂದ ಸ್ಪರ್ಧಿಸಿದ್ದಾರೆ. ಕಸ್ತೂರಬಾ ನಗರದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್​ನ ಬಾಳಾ ಗೋರನಪುರ ಮತ್ತು 4ನೇ ವಾರ್ಡ್​ನ ಆಕಾಂಕ್ಷಿ ಫಾತಿಮಾ ಫರ್ನಾಂಡಿಸ್ ಕಾಂಗ್ರೆಸ್ ಬಿಟ್ಟು ಜೆಡಿಎಸ್​ನಿಂದ ಸ್ಪರ್ಧಿಸಿದ್ದಾರೆ.

ಅಂತಿಮ ಕ್ಷಣದ ಜಿಗಿಯುವಿಕೆ ಬಿಜೆಪಿಯಲ್ಲಿಯೂ ನಡೆದಿದೆ. ಸದಸ್ಯರಾಗಿದ್ದ ಅರುಣಪ್ರಭು ಕಾಂಗ್ರೆಸ್ ಸೇರಿ 10ನೇ ವಾರ್ಡ್ ಟಿಕೆಟ್ ಪಡೆದಿದ್ದರೆ, ಕೇಶವ ಶೆಟ್ಟಿ 31ನೇ ವಾರ್ಡ್​ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

ಕಾಂಗ್ರೆಸ್​ನ ಒಳ ಜಗಳದ ಪರಿಣಾಮವನ್ನು ಅವರೇ ಅನುಭವಿಸುತ್ತಾರೆ. ಆದರೆ, ಬಿಜೆಪಿ ತನ್ನ ಸ್ವಂತ ಬಲದಿಂದ ಆರಿಸಿಬಂದು ನಗರಸಭೆಯ ಆಡಳಿತ ವಹಿಸಿಕೊಳ್ಳಲಿದೆ. ಉಳಿದ ಪಕ್ಷಗಳ ಗೊಂದಲಗಳ ಬಗೆಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ.—-ವಿಶ್ವೇಶ್ವರ ಹೆಗಡೆ ಕಾಗೇರಿ,