ನರಗುಂದ: ಕರ ವಸೂಲಾತಿ ಅಭಿಯಾನದಡಿ ಉತ್ತಮ ಸಾಧನೆಗೈದ ತಾಲೂಕಿನ ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಪಟ್ಟಣದ ತಾಪಂ ಸಭಾ ಭವನದಲ್ಲಿ ಗುರುವಾರ ಪ್ರಶಂಸನಾ ಪತ್ರ ನೀಡಿ ಸತ್ಕರಿಸಲಾಯಿತು.
ತಾಪಂ ಇಒ ಎಸ್.ಕೆ. ಇನಾಂದಾರ ಮಾತನಾಡಿ, 2024ರ ಮಾಹೆಯಲ್ಲಿ ಜಿಪಂ ಸಿಒಇ ಭರತ್ ಎಸ್. ಅವರ ನಿರ್ದೇಶನದಂತೆ ಕರ ವಸೂಲಾತಿ ಅಭಿಯಾನದಡಿ ತಾಲೂಕಿನ 13 ವಿವಿಧ ಗ್ರಾಪಂಗಳಲ್ಲಿ ಕರ ವಸೂಲಾತಿ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ತಾಲೂಕಿನ ಹಿರೇಕೊಪ್ಪ ಗ್ರಾಪಂನಿಂದ ಶೇ. 127 ರಷ್ಟು ಕರ ವಸೂಲಾತಿ ಮಾಡಿ ತಾಲೂಕಿಗೆ ಪ್ರಥಮ, ಸುರಕೋಡ ಗ್ರಾಪಂ ಶೇ.117 ದ್ವಿತೀಯ, ವಾಸನ ಶೇ. 101 ತೃತೀಯ, ರಡ್ಡೇರ ನಾಗನೂರ ಗ್ರಾಪಂ ಶೇ. 100 ರಷ್ಟು ಕರ ವಸೂಲಾತಿ ಮಾಡಿ ನಾಲ್ಕನೇ ಸ್ಥಾನ ಪಡೆದಿದ್ದರಿಂದ ಆಯಾ ಗ್ರಾಪಂ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಯನ್ನು ಸನ್ಮಾನಿಸಲಾಗಿದೆ ಎಂದರು.
ರಡ್ಡೇರನಾಗನೂರ ಗ್ರಾಪಂ ಪಿಡಿಒ ಸೋಮಲಿಂಗಪ್ಪ ಹಿರೇಮನಿ, ಯಲ್ಲಪ್ಪ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಸಂತೋಷಕುಮಾರ ಪಾಟೀಲ, ಕೃಷ್ಣಮ್ಮ ಹಾದಿಮನಿ, ಮೋಹನ ಉಪವಾಸಿ, ವಿವಿಧ ಗ್ರಾಪಂ ಪಿಡಿಒ, ಸಿಬ್ಬಂದಿ ಉಪಸ್ಥಿತರಿದ್ದರು.