ನಾನು ನಿಮ್ಮನ್ನು ವಿರೋಧಿಸುವ ಕಾರಣಕ್ಕೆ ನನ್ನ ಮಗಳಿಗೆ ಬೆದರಿಕೆ ಹಾಕಿದ್ದಾರೆ: ಮೋದಿಗೆ ದೂರು ನೀಡಿದ ಅನುರಾಗ್​ ಕಶ್ಯಪ್​

ನವದೆಹಲಿ: ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಿದ್ದಾರೆ. ಬಿಜೆಪಿ ಪ್ರಚಂಡ ಬಹುಮತದಿಂದ ಗೆದ್ದು ಬಂದಿದ್ದು, ಸರ್ಕಾರ ರಚನೆಗೆ ಸಿದ್ಧವಾಗಿ ನಿಂತಿದೆ. ಜಗತ್ತಿನೆಲ್ಲೆಡೆಯಿಂದ ಅಭಿನಂದನೆ ಹರಿದುಬರುತ್ತಿದೆ.

ಚಲನಚಿತ್ರ ನಿರ್ದೇಶಕ ಅನುರಾಗ್​ ಕಶ್ಯಪ್​ ಕೂಡ ಮೋದಿಯವರಿಗೆ ಶುಭ ಹಾರೈಸಿದ್ದಾರೆ. ಆದರೆ ಆ ಅಭಿನಂದನೆಯೊಂದಿಗೆ ಒಂದು ದೂರನ್ನೂ ನೀಡಿದ್ದಾರೆ.

ಟ್ವೀಟ್​ ಮಾಡಿರುವ ಅವರು, ನರೇಂದ್ರ ಮೋದಿಯವರೇ ನೀವು ಜಯ ಗಳಿಸಿದ್ದಕ್ಕೆ ಅಭಿನಂದನೆ. ಆದರೆ ನಿಮ್ಮ ಬೆಂಬಲಿಗರೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಟ್ವೀಟ್‌ ಮಾಡಿ ನನ್ನ ಮಗಳಿಗೆ ಬೆದರಿಕೆವೊಡ್ಡಿದ್ದಾರೆ. ನಾನು ನಿಮ್ಮೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇನೆ ಎಂಬ ಕಾರಣಕ್ಕೆ ನನ್ನ ಮಗಳಿಗೆ ಬೆದರಿಕೆ ಹಾಕುತ್ತಿದ್ದಾರೆ.

ನಿಮ್ಮ ಗೆಲುವನ್ನು ಸಂಭ್ರಮಿಸುತ್ತ ನಮಗೆ ಬೆದರಿಕೆ ಹಾಕುವ ಇಂತವರನ್ನು ಹೇಗೆ ಡೀಲ್‌ ಮಾಡಬೇಕು ಎಂಬುದನ್ನು ತಿಳಿಸಿ ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ಮಗಳಿಗೆ ಬೆದರಿಕೆಯೊಡ್ಡಿದ್ದ ಮೆಸೇಜ್​ನ ಸ್ಕ್ರೀನ್​ಶಾಟ್‌ನ್ನು​ ಕೂಡ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಅನುರಾಗ್​ ಕಶ್ಯಪ್​ ಅವರ ಮಗಳು ಅಲಿಯಾ ಕಶ್ಯಪ್​ಗೆ ಇನ್​ಸ್ಟಾಗ್ರಾಂನ ಕಮೆಂಟ್​ ಸೆಕ್ಷನ್​ನಲ್ಲಿ ಬೆದರಿಕೆ ಹಾಕಲಾಗಿದ್ದು ಆತನ ಹೆಸರು ಚೌಕಿದಾರ್​ ರಾಮ್​ಸಂಘಿ ಎಂದು ಇದೆ.  ಅನುರಾಗ್​ ಕಶ್ಯಪ್​ ಅವರು ಪ್ರಧಾನಿ ಮೋದಿಯರನ್ನು ಹಲವು ಬಾರಿ ಟೀಕಿಸಿದ್ದಾರೆ.

Leave a Reply

Your email address will not be published. Required fields are marked *