ಕೇಸರಿ ಹೊರದಬ್ಬಿದ ಕೈ

ರಾಯಪುರ: ಸೋನಿಯಾ ಗಾಂಧಿಗೆ ಅಧ್ಯಕ್ಷೆ ಪಟ್ಟಕಟ್ಟಲು ದಲಿತ ನಾಯಕರಾದ ಸೀತಾರಾಂ ಕೇಸರಿ ಅವರ ಅಧ್ಯಕ್ಷ ಪದವಿಯ ಅವಧಿ ಮೊಟಕುಗೊಳಿಸಿ, ಆ ಸ್ಥಾನದಿಂದ ಕೆಳಗಿಳಿಸಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಛತ್ತೀಸ್​ಗಢ ಎರಡನೇ ಹಂತದ ಚುನಾವಣೆ ಹಿನ್ನೆಲೆ ಮಹಾಸಮುಂದ್ ಜಿಲ್ಲೆಯಲ್ಲಿ ಭಾನುವಾರ ನಡೆದ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಕೇಂದ್ರದಲ್ಲಿ ಹತ್ತು ವರ್ಷ ರಿಮೋಟ್ ಕಂಟ್ರೋಲ್ ಸರ್ಕಾರ ಇತ್ತು. ಆ ಸರ್ಕಾರ ಛತ್ತೀಸ್​ಗಢದ ಕಡೆ ತಿರುಗಿಯೂ ನೋಡಲಿಲ್ಲ. ಏಕೆಂದರೆ ರಿಮೋಟ್ ಕುಟುಂಬದವರ ಬಳಿ ಇತ್ತು ಎಂದು ಸೋನಿಯಾ ಗಾಂಧಿ ಅವರನ್ನು ಪರೋಕ್ಷವಾಗಿ ಕುಟುಕಿದರು. ಈ ಕುಟುಂಬಕ್ಕೆ ಬಿಜೆಪಿ ಎಂದರೆ ಹೆದರಿಕೆ ಮತ್ತು ತಾತ್ಸಾರ. ಹೀಗಾಗಿ ಬಿಜೆಪಿ ಸರ್ಕಾರವಿದ್ದ ಛತ್ತೀಸ್​ಗಢಕ್ಕೆ ಯುಪಿಎ ಸರ್ಕಾರ ಗಮನ ಹರಿಸಲಿಲ್ಲ. ಮುಖ್ಯಮಂತ್ರಿ ರಮಣ್ ಸಿಂಗ್ ಯುಪಿಎ ಸರ್ಕಾರದಿಂದ 10 ವರ್ಷ ಅನೇಕ ರೀತಿಯ ಕಿರುಕುಳ ಅನುಭವಿಸಿದರು ಎಂದು ಮೋದಿ ಹೇಳಿದರು.

4 ತಲೆಮಾರುಗಳಿಂದ ಕುಟುಂಬಕ್ಕೆ ಲಾಭ: ನೆಹರು- ಗಾಂಧಿ ಕುಟುಂಬ ನಾಲ್ಕು ತಲೆಮಾರುಗಳಿಂದ ನಡೆಸಿದ ಆಡಳಿತದಿಂದ ದೇಶಕ್ಕೆ ಏನೂ ಲಾಭವಾಗಲಿಲ್ಲ. ಕುಟುಂಬಕ್ಕೆ ಮಾತ್ರ ಲಾಭವಾಗಿದೆ. ಜನರ ಆಶೋತ್ತರಗಳನ್ನು ಕಡೆಗಣಿಸಿದ ಇಂತಹ ಪಕ್ಷದ ಬಗ್ಗೆ ವಿಶ್ವಾಸ ಇರಿಸುವುದಾದರೂ ಹೇಗೆ ಎಂದು ಮೋದಿ ಪ್ರಶ್ನಿಸಿದರು. ನೆಹರು-ಗಾಂಧಿ ಕುಟುಂಬಕ್ಕೆ ಹೊರತಾದವರು ಕನಿಷ್ಠ ಐದು ವರ್ಷ ಕಾಂಗ್ರೆಸ್ ಚುಕ್ಕಾಣಿ ಹಿಡಿಯಲು ಐತಿಹಾಸಿಕ ಪಕ್ಷದಲ್ಲಿ ಅವಕಾಶ ಇದೆಯೇ ಎಂದು 2 ದಿನಗಳ ಹಿಂದೆ ಮೋದಿ ಸವಾಲು ಹಾಕಿದ್ದರು.

ಛತ್ತೀಸ್​ಗಢದಲ್ಲಿ ಅಂತಿಮ ಹಂತವಾಗಿ ನ. 20ರಂದು 72 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಭಾನುವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ನ. 12ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 18 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ನಕ್ಸಲ್ ಪೀಡಿತ ಈ ಕ್ಷೇತ್ರಗಳಲ್ಲಿ ಸರಾಸರಿ ಶೇ. 70ರಷ್ಟು ಮತದಾನವಾಗಿತ್ತು -ಏಜೆನ್ಸೀಸ್

ಪಶ್ಚಿಮ ಹೊರವರ್ತಲ ಎಕ್ಸ್​ಪ್ರೆಸ್ ಉದ್ಘಾಟನೆ

ನವದೆಹಲಿಯ ಹೊರವಲಯದಲ್ಲಿ ನಿರ್ವಿುಸಿರುವ ಪಶ್ಚಿಮ ಹೊರವರ್ತಲ (ಪೆರಿಫರಲ್) ಎಕ್ಸ್​ಪ್ರೆಸ್ ವೇ (ಡಬ್ಲ್ಯೂಪಿಇ) ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಲಿದ್ದಾರೆ. ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್​ಪ್ರೆಸ್ ವೇ ಎಂದೂ ಕರೆಯಲಾಗುವ ಈ ಡಬ್ಲ್ಯೂಪಿಇ ನಿರ್ವಣದಿಂದ ಹರಿಯಾಣದ ಕೈಗಾರಿಕಾ ನಗರಗಳಾದ ಮನೇಸರ್, ಸೋಹ್ನಾ, ಧಾರುಹೆರಾ, ಬಾವಲ್, ಭಿವಾಡಿಗಳನ್ನು ನವದೆಹಲಿ ಸಂರ್ಪಸದೆ ತಲುಪಬಹುದಾಗಿದೆ. ಇದರಿಂದ ರಾಷ್ಟ್ರ ರಾಜಧಾನಿಯಲ್ಲಿ ಸಂಚಾರದ ಒತ್ತಡ ತಗ್ಗಲಿದೆ. ಮತ್ತೊಂದೆಡೆ, ದೆಹಲಿ ಮೆಟ್ರೋ ರೈಲಿನ ನೇರಳೆ ಮಾರ್ಗದ ಎಸ್ಕಾರ್ಟ್ಸ್ ಮುಜೇಸರ್- ಬಲ್ಲಭಗಢ್ ಮಧ್ಯೆ ರೈಲು ಸಂಚಾರಕ್ಕೂ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಸೈಕಲ್ ಮೇಲಿನ ಕೈ ಔಟ್?

2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನೊಂದಿಗಿನ ಮೈತ್ರಿ ಮುರಿದುಕೊಳ್ಳುವ ಬಗ್ಗೆ ಸಮಾಜವಾದಿ ಪಕ್ಷ ಸುಳಿವು ನೀಡಿದೆ. ಸೈಕಲ್ ಓಟಕ್ಕೆ ಕಾಂಗ್ರೆಸ್ ತಡೆಯೊಡ್ಡುವ ಜತೆಗೆ, ನಿಲ್ಲಿಸಲು ಯತ್ನಿಸುತ್ತಿದೆ. ಇದು ಮುಂದುವರಿದರೆ, ಸೈಕಲ್ ಮೇಲಿನ ಅವರ ಕೈಯನ್ನು ತೆಗೆದುಹಾಕಿ, ಅದರ ನಿಯಂತ್ರಣವನ್ನು ಬೇರೊಬ್ಬರಿಗೆ ವಹಿಸುವುದು ಅನಿವಾರ್ಯವಾಗುತ್ತದೆ ಎಂದು ಎಸ್​ಪಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಅಖಿಲೇಶ್ ಯಾದವ್ ಎಚ್ಚರಿಕೆ ನೀಡಿದ್ದಾರೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಗಾಂಧಿ ಕುಟುಂಬದ ಪ್ರಭಾವ ಹೆಚ್ಚಾಗಿರುವ ಉತ್ತರ ಪ್ರದೇಶದ ರಾಯ್ಬರೇಲಿ ಮತ್ತು ಅಮೇಠಿ ಸೀಟುಗಳನ್ನು ಮಾತ್ರ ಕಾಂಗ್ರೆಸ್​ಗೆ ಬಿಟ್ಟುಕೊಡುವುದಾಗಿ ಸಮಾಜವಾದಿ ಪಕ್ಷ ಈ ವರ್ಷದ ಜೂನ್​ನಲ್ಲಿ ಕಾಂಗ್ರೆಸ್​ಗೆ ಸ್ಪಷ್ಟಪಡಿಸಿತ್ತು.

ಆದರೆ, ಸಮಾಜವಾದಿ ಪಕ್ಷ ದುರ್ಬಲವಾಗಿದೆ. ಸ್ವಂತ ಬಲದ ಮೇಲೆ ಸ್ಪರ್ಧಿಸುವ ಅದರ ಶಕ್ತಿ ಕ್ಷೀಣಿಸಿದೆ ಎಂಬ ನಂಬಿಕೆಯಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷಕ್ಕೆ ಹೆಚ್ಚಿನ ಸೀಟು ಬಿಟ್ಟುಕೊಡದಿರಲು ನಿರ್ಧಸಿತ್ತು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಬಿಎಸ್​ಪಿ ಕೂಡ ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ.

ಕಾಂಗ್ರೆಸ್ ಪಕ್ಷ ಸುಳ್ಳು ಭರವಸೆಗಳ ಎಟಿಎಂ ಇದ್ದಂತೆ. ನೀವು ಏನೇ ಸಮಸ್ಯೆ ಬಗ್ಗೆ ಕೇಳಿದರೂ, ತಕ್ಷಣವೇ ಒಂದು ಸುಳ್ಳು ಭರವಸೆ ಸಿಗುತ್ತದೆ. ಆದರೆ ಬಿಜೆಪಿ, ಬೆಳವಣಿಗೆ ಮತ್ತು ಅಭಿವೃದ್ಧಿಯ ಎಟಿಎಂ ಆಗಿದೆ.

| ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ( ಮ.ಪ್ರ. ಛುರ್ಹಟ್​ನ ಚುನಾವಣಾ ರ್ಯಾಲಿಯಲ್ಲಿ ಭಾಷಣ)